[ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ] ಶೇ.50ರ ಮೀಸಲಾತಿ ಅನ್ವಯ ನೇಮಕಾತಿಗೆ ಆಕ್ಷೇಪವಿಲ್ಲ: ಹೈಕೋರ್ಟ್‌

“ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಡ್ವೊಕೇಟ್‌ ಜನರಲ್‌ ಅವರು ಸೂಚನೆ ಪಡೆಯಲು ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
Karnataka High Court
Karnataka High Court
Published on

“ಚಾಲ್ತಿಯಲ್ಲಿರುವ ಶೇ.50ರ ಮೀಸಲಾತಿಯ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಮೀಸಲಾತಿ ಹೆಚ್ಚಿಸಿರುವುದರ (ಶೇ.56) ಅನುಸಾರ ಹೊಸದಾಗಿ ಅಧಿಸೂಚನೆ ಹೊರಡಿಸಕೂಡದು” ಎಂದು ಪುನರುಚ್ಚರಿಸಿರುವ ಕರ್ನಾಟಕ ಹೈಕೋರ್ಟ್‌, ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಮಂಗಳವಾರ ಅನುಮತಿಸಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯಿದೆ-2022ರ ಅನ್ವಯ ಶೇ. 50ಕ್ಕೂ ಹೆಚ್ಚು ಮೀಸಲಾತಿ ನೀಡುವುದಕ್ಕೆ ಆಕ್ಷೇಪಿಸಿ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Chief Justice Vibhu Bhakhru & Justice CM Poonacha
Chief Justice Vibhu Bhakhru & Justice CM Poonacha

“ಮೀಸಲಾತಿ ಹೆಚ್ಚಿಸಿರುವ ಮಧ್ಯಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆಯಾಗಿದ್ದು, ಅದರ ವಿಚಾರಣೆಯು ಈ ತಿಂಗಳು ನಡೆಯಲಿದೆ. ಇಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ತಿಳಿಸಿದ್ದಾರೆ. ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದಂತೆ ಅಡ್ವೊಕೇಟ್‌ ಜನರಲ್‌ ಅವರು ಸೂಚನೆ ಪಡೆಯಲು ಮತ್ತು ಅಗತ್ಯಬಿದ್ದರೆ ಸೂಕ್ತ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ಎಜಿ ಅವರು “ಮೀಸಲಾತಿ ಹೆಚ್ಚಿಸಿರುವ ಮಧ್ಯಪ್ರದೇಶದ ರಿಟ್‌ ಅರ್ಜಿಯು ಸುಪ್ರೀಂ ಕೋರ್ಟ್‌ಗೆ ವರ್ಗಾವಣೆಯಾಗಿದೆ. ಇದರ ವಿಚಾರಣೆಯನ್ನು ಇದೇ ಜನವರಿಯಲ್ಲಿ ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಶೇ.50ರ ಮೀಸಲಾತಿಯಲ್ಲಿ ನೇಮಕಾತಿ ಮುಂದುವರಿಸುತ್ತೇವೆ. ನ್ಯಾಯಾಲಯ ಹಾಲಿ ಅರ್ಜಿಗಳನ್ನು ನಿರ್ಧರಿಸುವವರೆಗೆ ಹೆಚ್ಚುವರಿ ಶೇ. 6 ಮೀಸಲಾತಿ ಅನ್ವಯಿಸುವುದಿಲ್ಲ. ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬೇಕು. ಶೇ.56ರ ಮೀಸಲಾತಿ ಪ್ರಕಾರ ನೇಮಕಾತಿ ನಡೆಸುತ್ತೇವೆ. ಶೇ.50ಕ್ಕೆ ಮಾತ್ರ ಆದೇಶ ನೀಡಿ, ಉಳಿದ ಶೇ.6ಕ್ಕೆ ನ್ಯಾಯಾಲಯ ನಿರ್ಧಾರ ಮಾಡಿದ ಬಳಿಕ ಆದೇಶ ನೀಡಲಾಗುವುದು” ಎಂದರು.

ಆಗ ಪೀಠವು “ಹಿಂದಿನ ಅಧಿಸೂಚನೆಯಡಿ ನೇಮಕಾತಿ ನಡೆಸಬಹುದು. ಶೇ.50 ಮೀಸಲಾತಿ ನೇಮಕಾತಿಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಮೀಸಲಾತಿ ಹೆಚ್ಚಿಸಿ, ನೇಮಕಾತಿ ನಡೆಸುವುದಾದರೆ ನೇಮಕಾತಿಯನ್ನೇ ಮಾಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ. ಅದು ಸರ್ಕಾರಕ್ಕೆ ಇರುವ ಆಯ್ಕೆಯಾಗಿದೆ. ಶೇ.50 ಮೀರಿದ ಹೆಚ್ಚುವರಿ ಮೀಸಲಾತಿ ಅನ್ವಯ ನೇಮಕಾತಿಗೆ ಅನುಮತಿಸುವುದಿಲ್ಲ. ಆದರೆ, ಸರ್ಕಾರ ನೇಮಕಾತಿ ನಡೆಸಲೇಬೇಕಿದೆ” ಎಂದರು.

ಒಂದು ಹಂತದಲ್ಲಿ ಪೀಠವು "ಶೇ.94ರಷ್ಟು ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತೇವೆ. ಶೇಕಡ 6ರಷ್ಟು ನೇಮಕಾತಿ ಮಾಡುವುದಿಲ್ಲ. ಅಂತಿಮ ತೀರ್ಪಿನ ನಂತರ ಶೇ. 6% ನೇಮಕಾತಿಯನ್ನು ನ್ಯಾಯಾಲಯದ ಆದೇಶದಂತೆ ಕೈಗೊಳ್ಳುವುದಾಗಿ ಅಫಿಡವಿಟ್‌ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದು" ಎಂದಿತು. ಅದಕ್ಕೆ ಎಜಿ ಅವರು ಸರ್ಕಾರದಿಂದ ಸೂಚನೆ ಪಡೆಯಲಾಗುವುದು" ತಿಳಿಸಿದರು.

ಅರ್ಜಿದಾರರ ಪರ ವಕೀಲ ರಂಗನಾಥ್‌ ಜೋಯಿಷ್‌ ಅವರು “ಶೇ.50 ಮೀಸಲಾತಿ ಮೀರಿರುವುದಕ್ಕೆ ಈ ಹಿಂದೆ ಸುಪ್ರೀಂ ಕೋರ್ಟ್‌ ಅನುಮತಿಸಿಲ್ಲ. ಶೇ.50 ಮೀರಿ ಮೀಸಲಾತಿ ನೀಡುತ್ತೇವೆ. ಆನಂತರ ಅದನ್ನು ಸರಿಪಡಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಅಕ್ರಮ ನೇಮಕಾತಿ ಮಾಡಿ, ಆನಂತರ ಅದನ್ನು ಸರಿಪಡಿಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ” ಎಂದರು.

“ಕಾಯಿದೆ ಸೆಕ್ಷನ್‌ 6ರ ಅಡಿ ನಿಯಮ ರೂಪಿಸಬೇಕು. ಕಾಯಿದೆಯ ಅನ್ವಯ ಮೀಸಲಾತಿ ಹೆಚ್ಚಿಸಿದರೂ ಅದನ್ನು ಜಾರಿಗೊಳಿಸಲು ನಿಯಮ ರೂಪಿಸಲೇಬೇಕು. ನಿಯಮ ರೂಪಿಸದೇ ಅಧಿಸೂಚನೆ ಹೇಗೆ ಪ್ರಕಟಿಸಲಾಗುತ್ತದೆ?” ಎಂದರು.

ಅರ್ಜಿದಾರರ ಪರ ಇನ್ನೊಬ್ಬ ವಕೀಲ ನಚಿಕೇತ್‌ ಜೋಶಿ “ಹಾಲಿ ಅರ್ಜಿ ಇತ್ಯರ್ಥವಾಗುವವರೆಗೆ ಮೀಸಲಾತಿ ಹೆಚ್ಚಿಸಿರುವುದನ್ನು ಆಧರಿಸಿ ನೇಮಕಾತಿ, ಆಯ್ಕೆ ಮಾಡುವ ಸಂಬಂಧ ಯಾವುದೇ ಅಧಿಸೂಚನೆ ಹೊರಡಿಸಕೂಡದು ಎಂದು ಹೈಕೋರ್ಟ್‌ ಈ ಹಿಂದೆಯೇ ಆದೇಶ ಮಾಡಿತ್ತು. ಇದರ ಮರುಪರಿಶೀಲನೆ, ಮಾರ್ಪಾಡು ಅಥವಾ ಅದನ್ನು ಪ್ರಶ್ನಿಸಲಾಗಿಲ್ಲ. ಈಗ ಮಧ್ಯಂತರ ಅರ್ಜಿಯ ಮೂಲಕ ಇದರ ಮಾರ್ಪಾಡು ಕೋರಲಾಗಿದೆ. ಶೇ.50ರ ಮೀಸಲಾತಿಯ ಪ್ರಕಾರ ನೇಮಕಾತಿ ನಡೆಯಲಿ, ಉಳಿದ ಶೇ.6-7ಕ್ಕೆ ನ್ಯಾಯಾಲಯ ರಿಟ್‌ ನಿರ್ಧರಿಸಿದ ಬಳಿಕ ನೇಮಕಾತಿ ನಡೆಸಬಹುದು” ಎಂದರು.

Also Read
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ: 3,644 ಹುದ್ದೆಗಳ ನೇಮಕಾತಿ‌ಗೆ ಸರ್ಕಾರಕ್ಕೆ ಅನುಮತಿಸಿದ ಹೈಕೋರ್ಟ್‌

‘ಪರಿಶಿಷ್ಟ ಜಾತಿಗೆ ಶೇ 15ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ7ರ ವರೆಗೂ ಮೀಸಲಾತಿ ಹೆಚ್ಚಳ ಮಾಡಿ ಒಟ್ಟು ಮೀಸಲಾತಿಯನ್ನು 56ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ 2023ರ ಜನವರಿ 12ರಂದು ಅಧಿಸೂಚನೆ ಹೊರಡಿಸಿದೆ. ಸರ್ಕಾರ ಅನುಮತಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿರುವುದು ಸಂವಿಧಾನ ಬಾಹಿರ. ಆದ್ದರಿಂದ, ಕಾಯಿದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. 

2025ರ ನವೆಂಬರ್‌ 27ರಂದು ನ್ಯಾಯಾಲಯವು “ಮೀಸಲಾತಿ ಹೆಚ್ಚಿಸಿರುವುದರ ಅನುಸಾರ ಹೊಸದಾಗಿ ಯಾವುದೇ ನೇಮಕಾತಿ ಅಥವಾ ಬಡ್ತಿ ನೀಡುವಂತಿಲ್ಲ. ಕಾಯಿದೆಯ ಅನ್ವಯ ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ನೇಮಕಾತಿ ಅಥವಾ ಸೀಟುಗಳ ಹಂಚಿಕೆಯು ಹಾಲಿ ಅರ್ಜಿಗಳ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಇದನ್ನು ನೇಮಕಾತಿ ಅಥವಾ ಬಡ್ತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹಕ್ಕು ದೊರೆಯುವುದಿಲ್ಲ. ಈ ಮಾರ್ಪಾಡು 19-11-2025ರ ಮಧ್ಯಂತರ ಆದೇಶಕ್ಕೆ ಮಾತ್ರ ಅನ್ವಯಿಸುತ್ತದೆ” ಎಂದು ಸ್ಪಷ್ಟಪಡಿಸಿತ್ತು.

Kannada Bar & Bench
kannada.barandbench.com