'ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಗಳಿಗೆ ನಿಯಮಿತವಾಗಿ ಹಾಜರಿಪಡಿಸಲಾಗಿದೆಯೇ?' ಮಾಹಿತಿ ಕೋರಿದ ಹೈಕೋರ್ಟ್‌

“ಒಬ್ಬ ವಿಚಾರಣಾ ಕೈದಿಗೆ ನಾಲ್ಕು ವರ್ಷಗಳಲ್ಲಿ 20 ಬಾರಿ ಸಮನ್ಸ್‌ ನೀಡಿದ್ದರೂ ಕೋರ್ಟ್‌ಗೆ ಹಾಜರುಪಡಿಸಿಲ್ಲ ಎಂದರೆ ಏನರ್ಥ? ಒಬ್ಬ ಸಾಮಾನ್ಯ ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಹೈಕೋರ್ಟ್‌ ಆದೇಶಿಸಬೇಕೆ?” ಎಂದು ಕಿಡಿಕಾರಿದ ಪೀಠ.
Parappana Agrahara Central Prison and Karnataka HC
Parappana Agrahara Central Prison and Karnataka HC
Published on

ರಾಜ್ಯದಾದ್ಯಂತ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳಲ್ಲಿ ಕಳೆದ ಆರು ತಿಂಗಳಿನಿಂದ ಈತನಕ ಎಷ್ಟು ಮಂದಿಯನ್ನು ಅವರ ಪ್ರಕರಣದ ವಿಚಾರಣೆಯ ದಿನದಂದು ನಿಯಮಿತವಾಗಿ ಖುದ್ದು ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಸಕ್ಷಮ ನ್ಯಾಯಾಲಯ ವಿಚಾರಣೆಗೆ ಹಾಜರುಪಡಿಸಲಾಗಿದೆ ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಕಾರಾಗೃಹಗಳ ಡಿಐಜಿಗೆ ಕರ್ನಾಟಕ ಹೈಕೋರ್ಟ್‌ ಶನಿವಾರ ನಿರ್ದೇಶಿಸಿದೆ.

ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿ ಇಮ್ರಾನ್‌ ಅಲಿಯಾಸ್ ಕುಳ್ಳನನ್ನು ಸಕ್ಷಮ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆಯ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ಲೋಪಗಳನ್ನು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು “ಒಬ್ಬ ವಿಚಾರಣಾ ಕೈದಿಗೆ ನಾಲ್ಕು ವರ್ಷಗಳಲ್ಲಿ 20 ಬಾರಿ ಸಮನ್ಸ್‌ ನೀಡಿದ್ದರೂ ಕೋರ್ಟ್‌ಗೆ ಹಾಜರುಪಡಿಸಿಲ್ಲ ಎಂದರೆ ಏನರ್ಥ? ಒಬ್ಬ ಸಾಮಾನ್ಯ ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಹೈಕೋರ್ಟ್‌ ಆದೇಶಿಸಬೇಕೆ? ಜೈಲಿನ ಈ ನಡೆಯಿಂದ ನ್ಯಾಯಾಂಗದ ಸಮಯ ವ್ಯರ್ಥವಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.

“ಒಂದೇ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಕೈದಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂಬುದನ್ನು ವಿವೇಚಿಸದೆ ಬಾಡಿ ವಾರಂಟ್‌ ಪೆಂಡಿಂಗ್‌ ಇರುವಾಗ ಜಾಮೀನು ರಹಿತ ವಾರಂಟ್‌ ಜಾರಿಗೆ ಹೆಣಗಾಡಿರುವುಕ್ಕೆ ಏನು ಹೇಳಬೇಕು? ಆರೋಪಿ ಸಿಕ್ಕಿಲ್ಲ ಎಂದು ಬರೆದಿಟ್ಟಿರುವ ಮಹಾಶಯ ಎಚ್‌ಎಲ್‌ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಪೆಬಲ್‌ ಮುತ್ತಣ್ಣ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ಅದರ ವರದಿಯನ್ನು ಸಲ್ಲಿಸಬೇಕು” ಎಂದು ಆದೇಶಿಸಿತು.

“ಕೈದಿಗಳೂ ಕೂಡಾ ನಮ್ಮಂತೆಯೇ ಮನುಷ್ಯರು. ಅವರಿಗೂ ಅನುಕಂಪ ತೋರಬೇಕು. ಶ್ಯೂರಿಟಿ ಕೊಟ್ಟಿಲ್ಲ ಎಂದು ಕೈದಿಯನ್ನು ಅಲ್ಲೇ ಕೊಳೆಯುವಂತೆ ಮಾಡುವುದು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾದ ನಡೆ. ಇನ್ನು ಮುಂದೆ ಹೀಗಾಗಬಾರದು. ಜೈಲಿನ ನಿಯಮಗಳೆಲ್ಲವೂ ಕ್ರಮಬದ್ಧವಾಗಿರಬೇಕು” ಎಂದು ಡಿಐಜಿಗೆ ಖಡಕ್‌ ನಿರ್ದೇಶನ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿ ಪೀಠ ವಿಚಾರಣೆ ಮುಂದೂಡಿತು. ಕಾರಾಗೃಹ ಇಲಾಖೆಯ ಡಿಐಜಿ ದಿವ್ಯಶ್ರೀ ಮತ್ತು ವೈಟ್‌ಫೀಲ್ಡ್‌ ಡಿಸಿಪಿ ಸೈದುಲ್ಲಾ ಅಡಾವತ್‌ ವಿಚಾರಣೆ ವೇಳೆ ಖುದ್ದು ಹಾಜರಿದ್ದರು. ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 6ಕ್ಕೆ ನ್ಯಾಯಾಲಯ ಮುಂದೂಡಿತು.

Also Read
'ಮೂರು ವರ್ಷವಾದವರೂ ಆರೋಪಿಯನ್ನು ವಿ ಸಿ ಮೂಲಕ ಕೋರ್ಟ್‌ಗೆ ಹಾಜರುಪಡಿಸದೇ ಇರುವುದು ನಾಚಿಗೇಡಲ್ಲವೇ?' ಹೈಕೋರ್ಟ್‌ ಕಿಡಿ

ಶ್ರೀಧರ್‌ ಸಾವಿನ ತನಿಖೆ: ಎಸ್‌ಐಟಿ ರಚಿಸಿದ ಸರ್ಕಾರ

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್‌ ಉದ್ಯೋಗಿ ಶ್ರೀಧರ್‌ ಸಾವಿನ ಪ್ರಕರಣದ ಮರು ತನಿಖೆಗಾಗಿ ಹೈಕೋರ್ಟ್‌ ಆದೇಶದ ಅನುಸಾರ ಎಸ್‌ಐಟಿ ರಚನೆ ಮಾಡಲಾಗಿದೆ ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಇದೇ ವೇಳೆ ಪೀಠಕ್ಕೆ ವಿವರಿಸಿದರು.

ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗಿದ್ದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ ವಿ ಶರತ್‌ಚಂದ್ರ ಅವರಿಗೆ ಪೀಠವು “ಈ ಕೋರ್ಟ್‌, ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸುಖಾಸುಮ್ಮನೆ ಬರಮಾಡಿಕೊಳ್ಳಲು ಬಯಸುವುದಿಲ್ಲ” ಎಂದು ಹೇಳಿತು. ಅಂತೆಯೇ, ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತು. ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಹಾಜರಿದ್ದರು.

Kannada Bar & Bench
kannada.barandbench.com