

ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಆರೋಪಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸದ ಜೈಲು ಅಧಿಕಾರಿಗಳು ಮತ್ತು ಜಾಮೀನುರಹಿತ ವಾರೆಂಟ್ ಆದೇಶ ಜಾರಿಗೊಳಿಸಲು ವಿಫಲವಾಗಿರುವ ಎಚ್‌ಎಎಲ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಕಾರಾಗೃಹಗಳ ಮಹಾ ನಿರೀಕ್ಷಕರು (ಡಿಐಜಿ) ಮತ್ತು ವೈಟ್‌ಫೀಲ್ಡ್ ವಿಭಾಗದ ಡಿಸಿಪಿಯವರು ಶನಿವಾರ ಖುದ್ದು ವಿಚಾರಣೆಗೆ ಹಾಜರಾಗಲು ನಿರ್ದೇಶಿಸಿದೆ.
ಎನ್‌ಡಿಪಿಎಸ್ ಮತ್ತು ದರೋಡೆ ಪ್ರಕರಣ ರದ್ದುಪಡಿಸಬೇಕು; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಮತ್ತು ತನಗೆ ಪರಿಹಾರ ನೀಡಲು ಆದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಇಮ್ರಾನ್ ಅಲಿಯಾಸ್ ಕುಳ್ಳ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “20.12.2022ರಂದು ಆರೋಪಿ ಇಮ್ರಾನ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಜಾಮೀನುರಹಿತ ವಾರೆಂಟ್ ಆದೇಶ ಮಾಡಲಾಗಿದೆ. ಆತ ಮನೆಯಲ್ಲಿ ಇಲ್ಲದೇ ಇರುವುದರಿಂದ ಅದನ್ನು ಜಾರಿಗೊಳಿಸಿಲ್ಲ ಎಂದು ಎಚ್‌ಎಎಲ್ ಪೊಲೀಸರು ಹೇಳಿದ್ದಾರೆ. ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದ ನಂತರ ಪೊಲೀಸರು ಜೈಲಿಗೆ ತೆರಳಿ ಆರೋಪಿಗೆ ಎನ್‌ಬಿಡಬ್ಲ್ಯು ಜಾರಿಗೊಳಿಸಿದ್ದಾರೆ. ಇಮ್ರಾನ್ ವಿರುದ್ಧದ ಎರಡೂ ಪ್ರಕರಣಗಳು ದಾಖಲಾಗಿರುವುದು ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿಯೇ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಎಚ್‌ಎಎಲ್ ಪೊಲೀಸರಿಂದ ಸಂವಹನ ಬಂದಿದ್ದು, ಆರೋಪಿ ಪತ್ತೆ ಮಾಡಲಾಗದೇ ಇರುವುದರಿಂದ ಎನ್‌ಬಿಡಬ್ಲ್ಯು ಜಾರಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ಸಕ್ಷಮ ನ್ಯಾಯಾಲಯವು 20.12.2022ರಂದು ಎನ್‌ಡಬ್ಲು ಜಾರಿ ಮಾಡಿ ಆದೇಶಿಸಿದೆ. ಪೊಲೀಸರಿಂದ ತಪ್ಪಾಗಿದೆ” ಎಂದರು.
ಆಗ ಪೀಠವು “ಅರ್ಜಿದಾರ ಅಕ್ರಮ ಕಸ್ಟಡಿಯಲ್ಲಿದ್ದಾರೆ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಎನ್‌ಬಿಡಬ್ಲ್ಯು ಜಾರಿ ಮಾಡಿರುವುದು ಕಾನೂನಿನ ತತ್ವದ ಉಲ್ಲಂಘನೆಯಾಗಿದೆ” ಎಂದಿತು.
ಇಮ್ರಾನ್‌ಗೆ ಸಂಬಂಧಿಸಿದ ಬೇರೊಂದು ಪ್ರಕರಣದಲ್ಲಿ ಇಮ್ರಾನ್‌ನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲವಾದ ಜೈಲು ಅಧಿಕಾರಿಗಳನ್ನೂ ನ್ಯಾಯಾಲಯ ಕಟುವಾಗಿ ಟೀಕಿಸಿತು.
“ಐದು ವರ್ಷದಿಂದ ಏನು ಮಾಡ್ತಾ ಇದ್ದೀರಿ? ನ್ಯಾಯಾಲಯದ ಆದೇಶ ಸೂಚನೆ ಮಾಡಬೇಕಲ್ಲವೇ? ಐದು ವರ್ಷ? ಬಾಡಿ ವಾರೆಂಟ್‌ನಲ್ಲಿ ಆರೋಪಿಯನ್ನು ವಿ ಸಿ ಮೂಲಕ ಹಾಜರುಪಡಿಸಲಿಲ್ಲವೇ? ಏನಾಗುತ್ತಿದೆ? ಜೈಲು ಡಿಐಜಿ ನಾಳೆ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಮೂರು ವರ್ಷವಾದವರೂ ಆರೋಪಿಯನ್ನು ವಿ ಸಿಯಲ್ಲಿ ಹಾಜರುಪಡಿಸದೇ ಇರುವುದು ನಾಚಿಗೇಡಲ್ಲವೇ? ಬಾಡಿ ವಾರೆಂಟ್ ಇದೆಯಲ್ಲಾ? ರೆಗ್ಯುಲರ್ ಕೇಸಿನಲ್ಲಿ ಆರೋಪಿಯನ್ನು ಐದು ವರ್ಷ ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸದ ಇದು ಎಂಥ ಜೈಲು ಪ್ರಾಧಿಕಾರ? ವಿ ಸಿ ಕನೆಕ್ಷನ್ ಸರಿ ಇರಲಿಲ್ಲವೇ? ತಾಂತ್ರಿಕ ಸಮಸ್ಯೆ ಇತ್ತೇ?” ಎಂದು ಕಿಡಿಕಾರಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಎಚ್‌ಎಎಲ್ ಪೊಲೀಸರಿಂದ ಸಂವಹನ ಬಂದಿದ್ದು, ಆರೋಪಿ ಪತ್ತೆ ಮಾಡಲಾಗದೇ ಇರುವುದರಿಂದ ಎನ್‌ಬಿಡಬ್ಲ್ಯು ಜಾರಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ಸಕ್ಷಮ ನ್ಯಾಯಾಲಯವು 20.12.2022ರಂದು ಎನ್‌ಡಬ್ಲು ಜಾರಿ ಮಾಡಿ ಆದೇಶಿಸಿದೆ. ಅರ್ಜಿದಾರರ ಪರ ವಕೀಲರು ಆರೋಪಿಯು ಜೈಲಿನಲ್ಲಿರುವಾಗ ಎನ್‌ಬಿಡಬ್ಲ್ಯು ಜಾರಿ ಮಾಡಲಾಗದು ಎಂದಿದ್ದಾರೆ. ಎನ್‌ಬಿಡಬ್ಲ್ಯು ಜಾರಿ ಮಾಡಲು ನಿಶ್ಚಿತವಾಗಿರುವ ಪೊಲೀಸರು ನೀಡಿರುವ ಹೇಳಿಕೆಯು ಆಘಾತಕಾರಿಯಾಗಿದೆ. ಎನ್‌ಬಿಡಬ್ಲ್ಯು ಜಾರಿ ಮಾಡಲು ನಿರ್ದೇಶಿಸಿದ್ದ ಎಚ್‌ಎಎಲ್ ಪೊಲೀಸರು ಆರೋಪಿಯು ಪತ್ತೆಯಾಗಿಲ್ಲ ಎಂದು ಸಕ್ಷಮ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದರಿಂದ ಎನ್‌ಬಿಡಬ್ಲ್ಯು ಜಾರಿ ಮಾಡಿರಲಿಲ್ಲ. ಎಚ್‌ಎಎಲ್ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದಲ್ಲಿ ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿರುವುದು ಗೊತ್ತಾಗಿದೆ. ಇಷ್ಟಾದರೂ ಪೊಲೀಸರು ಎನ್‌ಬಿಡಬ್ಲ್ಯು ಜಾರಿಗೊಳಿಸಿದೇ ಠಾಣೆಯ ಚೇಂಬರ್‌ನಲ್ಲಿ ಕುಳಿತಿರುವುದು ಆಘಾತಕಾರಿಯಾಗಿದೆ. ಅಲ್ಲದೇ, ಆರೋಪಿಯು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಎನ್‌ಬಿಡಬ್ಲ್ಯು ಜಾರಿ ಮಾಡಬೇಕಾದ ಎಚ್‌ಎಎಲ್ ಪೊಲೀಸರಲ್ಲಿ ಕರ್ತವ್ಯ ಲೋಪ, ಉಡಾಫೆ ಎದ್ದುಕಾಣುತ್ತಿದೆ. ವೈಟ್‌ಫೀಲ್ಡ್ ವಲಯದ ಡಿಸಿಪಿಯು ನಾಳೆ ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಆದೇಶಿಸಿತು.
ಅಲ್ಲದೇ, ಇನ್ನೊಂದು ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯವು ಆರೋಪಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕು ಎಂದು ನಿರ್ದೇಶಿಸಿದೆ. ಅದನ್ನೂ ಮಾಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಜೈಲು ಸಹಾಯಕ ಮೇಲ್ವಿಚಾರಕ ಹಾಜರಿದ್ದು, ಕ್ಷುಲ್ಲಕ ಕಾರಣಗಳನ್ನು ನೀಡಿ ಆರೋಪಿಯನ್ನು ಸಕ್ಷಮ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿಲ್ಲ ಎಂದಿದ್ದಾರೆ. ನ್ಯಾಯಾಲಯದ ಸೂಚನೆ ಇರಲಿಲ್ಲ. ಮೇಲ್ವಿಚಾರಣಾ ಅಧಿಕಾರಿಯು ಎರಡು ದಿನ ರಜೆ ಇದ್ದರು ಎಂದೂ ಹೇಳಿದ್ದಾರೆ. ಹೀಗಾಗಿ, ನಾಲ್ಕು ವರ್ಷ ಕಳೆದೋಗಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಜೈಲು ಡಿಐಜಿ ಮತ್ತು ವೈಟ್‌ಫೀಲ್ಡ್ ಡಿಸಿಪಿ ಖುದ್ದು ನಾಳೆ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.