ನಗದು ಪತ್ತೆ: ಬಿಎಸ್‌ಪಿ ನಾಯಕಿ ಮಾಯಾವತಿ, ಸತೀಶ್‌ ಮಿಶ್ರಾ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿದ ಹೈಕೋರ್ಟ್‌

ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರ ಮುಂದಿದ್ದ ಮಾಯಾವತಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ.
BSP Chief Mayavathi and Karntaka HC

BSP Chief Mayavathi and Karntaka HC

Published on

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಹಾಗೂ ಬಿಎಸ್‌ಪಿ ಮುಖಂಡ ಸತೀಶ್‌ ಚಂದ್ರ ಮಿಶ್ರಾ ಅವರು ಕಲಬುರ್ಗಿಯಲ್ಲಿ 2013ರ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಬೆಳಕಿಗೆ ಬಂದಿದ್ದ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರಾ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈಚೆಗೆ ಮಾನ್ಯ ಮಾಡಿದ್ದು, ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅದನ್ನು ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಜನಪ್ರತಿನಿಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಪ್ರಕ್ರಿಯೆಯನ್ನು ಹೈಕೋರ್ಟ್‌ ಬದಿಗೆ ಸರಿಸಿದೆ.

ಚುನಾವಣಾ ಕರ್ತವ್ಯದಲ್ಲಿದ್ದ ದೂರುದಾರ ಅಧಿಕಾರಿಗಳು ಪರ್ಸ್‌ ಪರಿಶೀಲನೆಗೆ ಮಾಯಾವತಿ ಅವರು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ತಮ್ಮ ಪರ್ಸ್‌ನಲ್ಲಿ ಒಂದು ಲಕ್ಷ ರೂಪಾಯಿ ಇದ್ದು, ಇದರಲ್ಲಿ 50 ಸಾವಿರ ರೂಪಾಯಿ ತನ್ನ ಮತ್ತು ಉಳಿದ 50 ಸಾವಿರ ರೂಪಾಯಿ ಸತೀಶ್ ಚಂದ್ರ ಮಿಶ್ರಾ ಅವರಿಗೆ ಸೇರಿದ್ದಾಗಿದೆ ಎಂದು ಮಾಯಾವತಿ ನೀಡಿರುವ ವಿವರಣೆಯನ್ನು ಭಾರತೀಯ ಚುನಾವಣಾ ಆಯೋಗವು ಒಪ್ಪಿಕೊಂಡಿದೆ. ಅಲ್ಲದೇ, ಒಂದು ಲಕ್ಷ ರೂಪಾಯಿ ವಶಪಡಿಸಿಕೊಂಡಿಲ್ಲ ಎಂದು ಆಯೋಗವು ಸ್ಪಷ್ಟಪಡಿಸಿದೆ.

Also Read
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಅಕ್ರಮ ಆರೋಪ: ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್‌

ಇದಕ್ಕಾಗಿ ಮಾಯಾವತಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 353 ಅಡಿ ದಾವೆ ಹೂಡಲಾಗಿದೆ. ವಾಸ್ತವದಲ್ಲಿ ಮಾಯಾವತಿ ಅವರು ಯಾವುದೇ ಕ್ರಿಮಿನಲ್‌ ಬಲಪ್ರಯೋಗ ನಡೆಸಿಲ್ಲ. ಹೀಗಾಗಿ ಸೆಕ್ಷನ್‌ 353ರ ಪ್ರಕರಣ ದಾಖಲಿಸಲಾಗದು. ಐಪಿಸಿ ಸೆಕ್ಷನ್‌ 188 ಮತ್ತು 34ರ ಅಡಿ ಪ್ರಕರಣ ದಾಖಲಿಸುವಾಗ ಲಿಖಿತ ದೂರು ಸಲ್ಲಿಸುವುದು ಸೇರಿದಂತೆ ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಲಾಗಿಲ್ಲ ಎಂಬ ಅರ್ಜಿದಾರರ ವಾದವನ್ನು ಪೀಠವು ಮಾನ್ಯ ಮಾಡಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಮತ್ತು ಸಿ ಜಗದೀಶ್‌ ಹಾಗೂ ರಾಜ್ಯ ಸರ್ಕಾರವನ್ನು ವಕೀಲ ಎಸ್‌ ವಿಶ್ವ ಮೂರ್ತಿ ಪ್ರತಿನಿಧಿಸಿದ್ದರು.

Attachment
PDF
Mayavati V. State of Karntaka.pdf
Preview
Kannada Bar & Bench
kannada.barandbench.com