

ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ 2014ರಲ್ಲಿ ನಡೆದಿದ್ದ ಆರು ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೊ ಪ್ರಕರಣ ಕಾನೂನಿನ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ವಿಚಾರಣಾ ಹಂತದಲ್ಲೇ ಇದೆ ಎಂಬುದಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ವಿಚಾರಣೆಗೆ ಗಡುವು ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಕಾನೂನಾತ್ಮಕ ತಾಂತ್ರಿಕ ಅಂಶಗಳಡಿ ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದ್ದು, ಇದಕ್ಕಿಂತ ದುರದೃಷ್ಟಕರ ಸಂಗತಿ ಇನ್ನೊಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.
“ಐಪಿಸಿ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತ ಬಾಲಕಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯ ಪ್ರತಿಯಲ್ಲಿ ಬಾಲಕಿ ಮತ್ತು ಮ್ಯಾಜಿಸ್ಟ್ರೇಟ್ ಸಹಿಗಳು ಇಲ್ಲ ಎಂಬ ಕಾರಣಕ್ಕಾಗಿ ಹೇಳಿಕೆ ದಾಖಲು ಮಾಡಿಕೊಂಡ ಮ್ಯಾಜಿಸ್ಟ್ರೇಟ್ ಅವರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿದ್ದ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗದು. ಈ ರೀತಿ ಅವಕಾಶ ಕೊಟ್ಟರೆ ಮುಂದೆ ಇಂತಹ ವಿಶೇಷ ಸನ್ನಿವೇಶಗಳು ಸಹಜವಾಗಿಬಿಡುವ ಸಾಧ್ಯತೆ ಇದೆ” ಎಂದು ಪೀಠ ಉಲ್ಲೇಖಿಸಿದೆ.
“ಮುಗ್ಧ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರದ ಪ್ರಕರಣ ಕೋರ್ಟ್‌ನಲ್ಲಿ ಸುದೀರ್ಘ 12 ವರ್ಷಗಳ ಕಾಲ ಬಾಕಿ ಉಳಿದಿದೆ ಎಂಬ ಆಘಾತಕಾರಿ ಸಂಗತಿಗಿಂತಲೂ ಮತ್ತೊಂದಿಲ್ಲ. ಇದು ಹೈಕೋರ್ಟ್‌ನ ಮನಃಸಾಕ್ಷಿಯನ್ನೇ ಬೆಚ್ಚಿಬೀಳಿಸುವಂತಿದೆ” ಎಂದು ನ್ಯಾಯಾಲಯ ಹೇಳಿದೆ.
“ಈ ಸಂಬಂಧ ಬಾಲಕಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದ ಮ್ಯಾಜಿಸ್ಟ್ರೇಟ್ ಅವರಿಗೆ ಸಮನ್ಸ್ ಜಾರಿಗೊಳಿಸಲು ಕೋರಲಾಗಿದ್ದ ಅರ್ಜಿಯ ಆದೇಶಕ್ಕೆ ಎರಡು ವರ್ಷಗಳಿಂದ ಇದ್ದ ತಡೆ ಆದೇಶವನ್ನು ತೆರವುಗೊಳಿಸಿದ್ದು, ವಿಚಾರಣೆಯಲ್ಲಿ ತೀರಾ ಅಗತ್ಯ ಎನಿಸಿದರೆ ಮ್ಯಾಜಿಸ್ಟ್ರೇಟ್ ಅವರನ್ನು ಸಾಕ್ಷ್ಯದಾಖಲು ಸಂದರ್ಭದಲ್ಲಿ ಬರಮಾಡಿಕೊಳ್ಳಬಹುದು” ಎಂದು ಸ್ಪಷ್ಟಪಡಿಸಿದೆ.
“ಪ್ರಕರಣ ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ನೆಪದಲ್ಲಿ ಅನಗತ್ಯ ಮುಂದೂಡಿಕೆಗೆ ಒಳಗಾಗಿರುವುದನ್ನು ಸುತಾರಾಂ ಒಪ್ಪಲಾಗದು. ಇದೊಂದು ವಿವೇಚನಾರಹಿತ ನಡೆ. ಇಂತಹ ವಿಷಯಗಳಲ್ಲಿ ವಿಶೇಷವಾಗಿ ಪ್ರಾಸಿಕ್ಯೂಷನ್ ಮತ್ತು ಸತ್ರ ನ್ಯಾಯಾಲಯ ಜಾಗರೂಕವಾಗಿ ಇರಬೇಕಿತ್ತು” ಎಂದು ಎಚ್ಚರಿಸಿದೆ.
“ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದ ಚಿಕ್ಕ ಮಗುವೊಂದು ಸಹಿಯ ಮಹತ್ವವನ್ನು ಹೇಗೆ ತಾನೆ ಅರ್ಥಮಾಡಿಕೊಂಡೀತು? ವಯಸ್ಸು, ಪ್ರಬುದ್ಧತೆ ಅಥವಾ ಮಾನಸಿಕ ಸ್ಥಿತಿಯನ್ನು ಲೆಕ್ಕಿಸದೆ ಮಗುವಿನ ಸಹಿಗೆ ಒತ್ತಾಯ ಸಲ್ಲದು. ಪೋಕ್ಸೊ ಕಾಯಿದೆ ಎಂಬುದು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ರಕ್ಷಣಾತ್ಮಕ ಆಸರೆಯನ್ನು ವಿಸ್ತರಿಸುತ್ತದೆ ಎಂಬುದು ನೆದರಿನಲ್ಲಿರಬೇಕು” ಎಂದು ವಿಷದಪಡಿಸಿದರು.
“ಅಪರಾಧ ನ್ಯಾಯ ವ್ಯವಸ್ಥೆಯು, ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಗೆ ಶರಣಾಗಿರುವುದು ಇಲ್ಲಿ ದೃಗ್ಗೋಚರ. ಲೈಂಗಿಕ ದೌರ್ಜನ್ಯದಡಿ ಅವಮಾನಕ್ಕೆ ಒಳಗಾದ ಮಗುವನ್ನು ವಿಚಾರಣೆಯ ಭರದಲ್ಲಿ ಅದೇ ಆಘಾತವನ್ನು ಪದೇ ಪದೇ ಅನುಭವಿಸುವಂತಹ ಸ್ಥಿತಿಗೆ ನೂಕುವುದು ಯಾವ ನ್ಯಾಯ? ಇದನ್ನು ತಿಲಮಾತ್ರವೂ ಒಪ್ಪಲಾಗದು. ಪ್ರತಿಯೊಂದು ಅನಗತ್ಯ ಮುಂದೂಡಿಕೆ ಮೂಲ ಗಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಮತ್ತು ಆ ಪ್ರಕ್ರಿಯೆಯನ್ನೇ ದಬ್ಬಾಳಿಕೆಯ ಸಾಧನವನ್ನಾಗಿ ಪರಿವರ್ತಿಸುತ್ತದೆ. ಅಷ್ಟೇ ಅಲ್ಲ, ಸತ್ಯದ ಹುಡುಕಾಟವನ್ನೇ ಬೆದರಿಸುತ್ತದೆ” ಎಂದು ಪೀಠ ವಿಷಾದ ವ್ಯಕ್ತಪಡಿಸಿದೆ.
ಪೋಕ್ಸೊ ಪ್ರಕರಣಗಳು ಒಂದು ವರ್ಷದೊಳಗೆ ಕಾನೂನು ಪ್ರಕ್ರಿಯೆಯನ್ನು ದಾಟಿ ಅಂತಿಮ ಹಂತ ತಲುಪಬೇಕೆಂಬ ಶಾಸನಬದ್ಧ ಆದೇಶಕ್ಕೆ ಜೀವ ತುಂಬುವುದು ಅತ್ಯಗತ್ಯ. ವಿಚಾರಣೆಯನ್ನು ಪದೇ ಪದೇ ಮುಂದೂಡುವ ಸಂಸ್ಕೃತಿ ಖಂಡನೀಯ. ಆದ್ದರಿಂದ, ಉಭಯ ಪಕ್ಷಗಾರರು ಈ ಆದೇಶ ತಲುಪಿದ ಎಂಟು ವಾರಗಳಲ್ಲಿ ವಿಚಾರಣಾ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಪೀಠ ತಾಕೀತು ಮಾಡಿದೆ.