
ಲೋಕಸಭೆ ಚುನಾವಣೆ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದಾವರ ಗೋವಿಂದಪ್ಪ ಅವರ ಮನೆಯಲ್ಲಿ ₹4.8 ಕೋಟಿ ಹಣವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿದ ಪ್ರಕರಣದಲ್ಲಿ ಬಿಜೆಪಿ ಸಂಸದ ಡಾ. ಕೆ ಸುಧಾಕರ್ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇಯ ಪರಿಗಣಿಸಿರುವುದಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಜೂನ್ 13ರಂದು ವಿಶೇಷ ನ್ಯಾಯಾಲಯವು ಸುಧಾಕರ್ ಮತ್ತು ಮಾದಾವರ ಗೋವಿಂದಪ್ಪ ಅವರ ವಿರುದ್ಧ ಸಂಜ್ಞೇ ಪರಿಗಣಿಸಿರುವುದನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾಗಿತ್ತು. ಇದಕ್ಕೆ ಸುಧಾಕರ್ ವಿರುದ್ಧ ಐಪಿಸಿ ಸೆಕ್ಷನ್ 171ಎಫ್ ಅನ್ವಯಿಸಲಾಗಿದೆ. ಇದೇ ನ್ಯಾಯಾಲಯವು ಬೇರೊಬ್ಬರ ಮನೆಯಲ್ಲಿ ನಗದು ಪತ್ತೆಯಾದರೆ ಸೆಕ್ಷನ್ 171ಎಫ್ ಅನ್ವಯಿಸಲಾಗದು ಎಂದು ಆದೇಶ ಮಾಡಿದೆ. ಈ ಹಿಂದೆ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದು ಮಾಡಿತ್ತು ಎಂದು ವಾದಿಸಿದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಹೊಸದಾಗಿ ಸಂಜ್ಞೇ ಪ್ರಕ್ರಿಯೆ ಪಾಲಿಸುವಂತೆ ಹೈಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನೆಲಮಂಗಲ ಉಪ ವಿಭಾಗದಲ್ಲಿರುವ ಮಾದನಾಯಕನಹಳ್ಳಿ ಪೊಲೀಸರು ಮತ್ತು ದೂರುದಾರ ದಶರಥ ಕುಂಬಾರ್ ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಂಸದ ಡಾ. ಕೆ ಸುಧಾಕರ್ ಅವರ ಬೆಂಬಲಿಗ ಮಾದಾವರ ಗೋವಿಂದಪ್ಪ ಅವರ ಮನೆಯಲ್ಲಿ ಖಚಿತ ಮಾಹಿತಿ ಮೇರೆಗೆ ಚುನಾವಣಾಧಿಕಾರಿಗಳು ಶೋಧ ನಡೆಸಿದ್ದು, ₹4.8 ಕೋಟಿಯನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಅಭ್ಯರ್ಥಿಯಾಗಿದ್ದ ಸುಧಾಕರ್ ಅವರು ಚುನಾವಣಾಧಿಕಾರಿಯಾಗಿದ್ದ ಮೌನೀಷ್ ಮೌದ್ಗಿಲ್ ಅವರಿಗೆ ವಾಟ್ಸಾಪ್ ಮೂಲಕ “ಮಾದ್ವಾರ ಗೋವಿಂದಪ್ಪ, ಐಟಿ ಟೀಮ್, ದಯಮಾಡಿ ಸಹಾಯ ಮಾಡಿ, ನಿಮಗೆ ಚಿರಋಣಿಯಾಗಿರುತ್ತೇನೆ” ಎಂದು ಸಂದೇಶ ಕಳುಹಿಸಿದ್ದಾರೆ. ಆ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿ, ಚುನಾವಣಾಧಿಕಾರಿಗೆ ಒತ್ತಡ ಹಾಕಿದ್ದಾರೆ ಎಂದು ದೂರಲಾಗಿತ್ತು.
ಇದನ್ನು ಮೊದಲಿಗೆ ಹೈಕೋರ್ಟ್‌ನಲ್ಲಿ ಸುಧಾಕರ್ ಪ್ರಶ್ನಿಸಿದ್ದರು. ಆಗ ನ್ಯಾಯಾಲಯವು ಹೊಸದಾಗಿ ಪ್ರಕ್ರಿಯೆ ನಡೆಸುವಂತೆ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಸುಧಾಕರ್ ಮತ್ತು ಮಾದಾವರ ಗೋವಿಂದಪ್ಪ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 171ಇ, 171ಎಫ್ ಮತ್ತು 511ರ ಸಂಜ್ಞೇ ಪರಿಗಣಿಸಿ, ಪ್ರಕರಣ ದಾಖಲಿಸಲು ಹಾಗೂ ಸಮನ್ಸ್ ಜಾರಿ ಮಾಡಿ ಆದೇಶಿಸಿತ್ತು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.