

ರಿಪಬ್ಲಿಕ್ ಟಿವಿ ಕನ್ನಡ, ಅದರ ನಿರೂಪಕಿ ಸ್ಮಿತಾ ರಂಗನಾಥ್, ಮಾಜಿ ಸಂಪಾದಕ ನಿರಂಜನ್ ಸ್ವಾಮಿ, ಮಾಜಿ ನಿರೂಪಕ ಜಯಪ್ರಕಾಶ್ ಶೆಟ್ಟಿ, ವರದಿಗಾರ ವಿಜಯ್ ವಿರುದ್ಧ ಐಎಎಸ್ ಅಧಿಕಾರಿ ಸಂಗಪ್ಪ ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ರಿಪಬ್ಲಿಕ್ ಟಿವಿ ಮತ್ತು ಅದರ ಹಾಲಿ ಮತ್ತು ಮಾಜಿ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ನಡೆಸಿತು.
“ಅರ್ಜಿದಾರರ ವಾದ ಆಲಿಸಿದ್ದು, ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.
ಅರ್ಜಿದಾರರು ಇತರರೊಂದಿಗೆ ಸೇರಿಕೊಂಡು ಸಂದರ್ಶನ ಮತ್ತು ಚರ್ಚೆಯ ಮೂಲಕ ತನ್ನ ಘನತೆಗೆ ಚ್ಯುತಿ ಉಂಟು ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಸಂಗಪ್ಪ ಅವರು ಆರೋಪಿಸಿದ್ದಾರೆ. ಐಪಿಸಿ ಸೆಕ್ಷನ್ 499ರ ಅಡಿ ದಾಖಲಿಸಿರುವ ದೂರನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಇಟ್ಟಿದ್ದಾರೆ.
ಮೊದಲ ಮತ್ತು ಎರಡನೇ ಆರೋಪಿಗಳು ಕಿಯೋನಿಕ್ಸ್‌ಗೆ ಪಟ್ಟಿ ಮಾಡಲಾದ ಮಾರಾಟಗಾರ ಸಂಘಟನೆಯಾಗಿದ್ದು, ದೂರುದಾರರಾದ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂಗಪ್ಪ ಅವರು ಕೆಲವು ಬಿಲ್‌ಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿದ್ದರು. ದೂರುದಾರ ಸಂಗಪ್ಪ ವಿರುದ್ಧ ಅರ್ಜಿದಾರ/ ಆರೋಪಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದಕ್ಕೆ ಸುದ್ದಿ ವಾಹಿನಿ ಜವಾಬ್ದಾರಿಯಲ್ಲ ಎಂದು ವಾದಿಸಲಾಗಿದೆ.
ದೂರು ಹೊರತುಪಡಿಸಿ ಸಾರ್ವಜನಿಕರ ದೃಷ್ಟಿಯಲ್ಲಿ ಸಂಗಪ್ಪ ಅವರ ಘನತೆಗೆ ಚ್ಯುತಿ ಉಂಟು ಮಾಡಲಾಗಿದೆ ಎಂದು ಹೇಳಲು ಯಾವುದೇ ದಾಖಲೆಗಳು ಇಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.