ಬಾಗ್ಮನೆ ಟೆಕ್‌ಪಾರ್ಕ್ ಒತ್ತುವರಿ ತೆರವಿಗೆ ಲೋಕಾಯುಕ್ತ ನಿರ್ಬಂಧ ಆದೇಶಕ್ಕೆ ಹೈಕೋರ್ಟ್ ತಡೆ; ನೋಟಿಸ್ ಜಾರಿ
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ನಗರದ ಪ್ರತಿಷ್ಠಿತ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ (ಬಾಗ್ಮನೆ ಟೆಕ್‌ಪಾರ್ಕ್) ದೂರು ಆಧರಿಸಿ ಲೋಕಾಯುಕ್ತರು ನಡೆಸಿದ್ದ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ
ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್) ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಹಿರೇಮಠ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಲೋಕಾಯುಕ್ತ ರಿಜಿಸ್ಟ್ರಾರ್, ಬಿಬಿಎಂಪಿ ಆಯುಕ್ತರು, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
“ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬಾಗ್ಮನೆ ಟೆಕ್‌ಪಾರ್ಕ್ ಸಲ್ಲಿಸಿದ್ದ ಅರ್ಜಿಯಲ್ಲಿನ ಕೋರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಕಾಯಿದೆ ಸೆಕ್ಷನ್ 18(ಬಿ) ಮೀರಿ ನಿರ್ಧಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಕರ್ನಾಟಕ ಲೋಕಾಯುಕ್ತದಲ್ಲಿ ಬಾಗ್ಮನೆ ಟೆಕ್ ಪಾರ್ಕ್‌ಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣದ ಪ್ರಕ್ರಿಯೆಗೆ ತಡೆ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಅರ್ಜಿದಾರರನ್ನು ಆಲಿಸಿ ಲೋಕಾಯುಕ್ತದಲ್ಲಿನ ಪ್ರಕ್ರಿಯೆಗೆ ಪೀಠ ತಡೆ ನೀಡಿದ್ದಕ್ಕೆ ಲೋಕಾಯುಕ್ತ ಪರ ವಕೀಲರು ಆಕ್ಷೇಪಿಸಿದರು. ಆಗ ಪೀಠವು “ಬಾಗ್ಮನೆ ಟೆಕ್‌ಪಾರ್ಕ್ ಬಳಿಯ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಮುಂದಾದಾಗ ಒಂದು ಪ್ರಾಧಿಕಾರವು (ಲೋಕಾಯುಕ್ತವು) ಭಾನುವಾರ ತಡೆ ನೀಡುತ್ತದೆ. ಏನಿದು? ಭಾನುವಾರ ಅರ್ಜಿ ಸಲ್ಲಿಸುತ್ತಾರೆ, ಲೋಕಾಯುಕ್ತ ತಡೆ ನೀಡುತ್ತದೆ. ಏನಿದು?” ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.
ಮುಂದುವರಿದು, “ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ನಾವು ಸರ್ಕಾರವನ್ನು ಪ್ರಶ್ನಿಸುತ್ತಿದ್ದರೆ ನೀವು (ಲೋಕಾಯುಕ್ತ) ಒತ್ತುವರಿ ತೆರವಿಗೆ ತಡೆ ನೀಡುತ್ತೀರಿ? ಏನಿದು? ಬಾಗ್ಮನೆ ಟೆಕ್ ಪಾರ್ಕ್ ಲೋಕಾಯುಕ್ತಕ್ಕೆ ನೀಡಿರುವ ಅರ್ಜಿಯಲ್ಲಿನ ಕೋರಿಕೆಯನ್ನು ಓದಿ. ಅದು ಹೇಗೆ ಲೋಕಾಯುಕ್ತದ ವ್ಯಾಪ್ತಿಗೆ ಬರುತ್ತದೆ ತಿಳಿಸಿ. ಇದು ಲೋಕಾಯುಕ್ತ ಕಾಯಿದೆ ಹೊರಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಲೋಕಾಯುಕ್ತವೇ ಕಟ್ಟಡ ತೆರವಿಗೆ ತಡೆ ನೀಡುವುದಾದರೆ, ಜನರು ಏಕೆ ನ್ಯಾಯಾಲಯಕ್ಕೆ ಬರಬೇಕು. ಪ್ರತಿಬಂಧಕಾದೇಶ ಏಕೆ ಕೋರಬೇಕು? ಇದು ನಮ್ಮ ಹೊರೆಯನ್ನು ಕಡಿಮೆ ಮಾಡುತ್ತದೆ. ಲೋಕಾಯುಕ್ತ ಯಾರಿಗಾದರೂ ತಡೆ ನೀಡಬಹುದು ಅಲ್ಲವೆ? ಇದು ಸುಲಭ ಅಲ್ಲವೇ?” ಎಂದು ಪೀಠವು ಪ್ರಶ್ನಿಸಿತು.
ಇಷ್ಟಾದರೂ ಲೋಕಾಯುಕ್ತ ಪ್ರತಿನಿಧಿಸಿದ್ದ ವಕೀಲರು ಆಕ್ಷೇಪಿಸಿದ್ದರಿಂದ ಅತೃಪ್ತಗೊಂಡ ಪೀಠವು “ನಾವು ತಡೆ ನೀಡಿರುವುದರಿಂದ ಲೋಕಾಯುಕ್ತಕ್ಕೆ ಏನಾಗುತ್ತದೆ? ನೀವು ಬಿಲ್ಡರ್ ಅಲ್ಲ. ಬಿಲ್ಡರ್ ನಮ್ಮ ಮುಂದೆ ಬಂದಿಲ್ಲ. ನಿಮಗೆ ಇದರಿಂದ ಏನು ಸಮಸ್ಯೆಯಾಗುತ್ತದೆ?” ಎಂದಿತು. “ಅರ್ಜಿದಾರರ ಮನವಿಯನ್ನು ವಿಸ್ತೃತವಾಗಿ ಓದಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ನಿಮ್ಮ ಆಕ್ಷೇಪಣೆ ಸಲ್ಲಿಸಿ, ಆನಂತರ ವಾದ ಮಾಡಿ” ಎಂದು ಹೇಳಿ, ವಿಚಾರಣೆ ಮುಂದೂಡಿತು.