ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ಗೌಪ್ಯ ವಿಚಾರಣೆ ನಡೆಸುವುದಿಲ್ಲ. ಬದಲಿಗೆ ಮುಕ್ತ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಲಾಗುವುದು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹೊಳೆನರಸೀಪುರದ ಟೌನ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಮತ್ತು ಸಿಐಡಿ ಪೊಲೀಸರು ಬೆಂಗಳೂರಿನ ಸೈಬರ್ ಠಾಣೆಯಲ್ಲಿ ದಾಖಲಿಸಿರುವ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಸಂಬಂಧ ಪ್ರತ್ಯೇಕವಾಗಿ ದಾಖಲಾಗಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಪ್ರಜ್ವಲ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಗೌಪ್ಯ ವಿಚಾರಣೆ ನಡೆಸುವುದಾಗಿ ಹೇಳಲಾಗಿತ್ತು” ಎಂದರು.
ಆಗ ಪೀಠವು “ಇಲ್ಲ. ಸಂತ್ರಸ್ತರ ಹೆಸರು ಮತ್ತು ಅಶ್ಲೀಲ ವಿಚಾರಗಳನ್ನು ಹಿರಿಯ ವಕೀಲರು ಓದಬಾರದು. ಅದನ್ನು ನನಗೆ ತಿಳಿಸಿದರೆ ನಾನೇ ಓದಿಕೊಳ್ಳುತ್ತೇನೆ. ಪ್ರತಿದಿನ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುತ್ತಿರುವುದರಿಂದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಹೊಸದೇನಿದೆ?” ಎಂದಿತು.
ವಿಶೇಷ ತನಿಖಾ ದಳ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್ ಅವರು “ಗೌಪ್ಯ ವಿಚಾರಣೆಯ ಕುರಿತು ನ್ಯಾಯಾಲಯದ ವಿವೇಚನೆ ಬಿಡಲಾಗುವುದು” ಎಂದಿತು.
ಆಗ ನಾವದಗಿ ಅವರು “ಆರೋಪ ಪಟ್ಟಿಗಳು ಲಭ್ಯವಾಗಿಲ್ಲ. ಹೀಗಾಗಿ, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಬೇಕು” ಎಂದು ಕೋರಿದರು.
ಇದಕ್ಕೆ ನ್ಯಾಯಮೂರ್ತಿಗಳು “ಆರೋಪ ಪಟ್ಟಿಗಳು ಸಂಪುಟಗಟ್ಟಲೆ ಇವೆ” ಎಂದು ನಕ್ಕು, ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದರು.
ಹೊಳೆನರಸೀಪುರದ ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಜ್ವಲ್ ವಿರುದ್ಧ ಎಸ್‌ಐಟಿಯು 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಮನೆಗೆಲಸದಾಕೆ ಮೇಲೆ ಎಸಗಿದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 1,632 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇನ್ನೂ ಎರಡು ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಬೇಕಿದೆ.
ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376, 376(2)(ಕೆ), 354, 354(ಎ), 354(ಬಿ), 354 (ಡಿ), 506, 509 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66(ಈ) ಅಡಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜಾಮೀನು ಕೋರಿದ್ದಾರೆ.
ಮತ್ತೊಬ್ಬ ಸಂತ್ರಸ್ತೆಯ ಹೇಳಿಕೆ ಆಧರಿಸಿ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ 376(2)(n), 376(2)(k), 506, 354(A), 354(B), 354(c), 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66E ಅಡಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ನಿರೀಕ್ಷಣಾ ಜಾಮೀನು ಕೋರಲಾಗಿದೆ.
ಬೆಂಗಳೂರಿನ ಸೈಬರ್ ಠಾಣೆಯಲ್ಲಿ 354(A),354(B),354(D) 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66E ಮತ್ತು 67 ರ ಅಡಿ ಪ್ರಕರಣ ದಾಖಲಾಗಿದೆ. ಇದರಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.