ಅನುಕಂಪದ ಆಧಾರದಲ್ಲಿ ನ್ಯಾಯ ಬೆಲೆ ಅಂಗಡಿ ಪರವಾನಗಿ: ಷರತ್ತು ವಿಧಿಸುವ ಅಧಿಕಾರ ಸರ್ಕಾರಕ್ಕಿದೆ ಎಂದ ಹೈಕೋರ್ಟ್‌

ಪರವನಾಗಿ ಕೋರುವವರು 10ನೇ ತರಗತಿ ಪಾಸಾಗಿರಬೇಕು ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು ಎಂದು ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ವ್ಯವಸ್ಥೆ (ನಿಯಂತ್ರಣ) ಆದೇಶದಲ್ಲಿ ಸರ್ಕಾರ ತಿದ್ದುಪಡಿ ಮಾಡಿದೆ.
Karnataka High Court
Karnataka High Court
Published on

ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್‌) ಅಡಿ ನ್ಯಾಯಬೆಲೆ ಅಂಗಡಿ ತೆರೆಯಲು ಮಾನವೀಯ ನೆಲೆಗಟ್ಟಿನಲ್ಲಿ ಅನುಮತಿ ನೀಡುವಾಗ ಷರತ್ತುಗಳನ್ನು ವಿಧಿಸುವ ವಿಶೇಷ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ವ್ಯವಸ್ಥೆ (ನಿಯಂತ್ರಣ) ಆದೇಶವನ್ನು ಪ್ರಶ್ನಿಸಿ ಮನಮೋಹನ್‌ ಕುಮಾರ್‌ ವಿ ಸಿ ಮತ್ತಿತರರು ಸಲ್ಲಿಸಿದ್ದ ಮನವಿಗಳನ್ನು ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ಅವರಿದ್ದ‌ ಏಕಸದಸ್ಯ ಪೀಠವು ವಿಲೇವಾರಿ ಮಾಡಿದೆ.

“ಅಗತ್ಯ ವಸ್ತುಗಳನ್ನು ವಿತರಣೆ ಮಾಡುವುದಕ್ಕೆ ಪರವಾನಗಿ ವಿಚಾರದಲ್ಲಿ ಉದಾಹರಣೆಗೆ ಹಾಲಿ ಮಾನವೀಯ ನೆಲೆಗಟ್ಟಿನಲ್ಲಿ ನೇಮಕಾತಿಯೂ ಸೇರಿದಂತೆ ರಾಜ್ಯ ಸರ್ಕಾರವು ನೀತಿ ನಿರೂಪಣೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ” ಎಂದು ಪೀಠ ಹೇಳಿದೆ.

ಹತ್ತನೇ ತರಗತಿ ಪಾಸಾಗಿರಬೇಕು ಎನ್ನುವುದು ಸೇರಿದಂತೆ ಮರು ನವೀಕರಣ ಅವಧಿ ಕುರಿತಾದ ತಿದ್ದುಪಡಿ ಮಾಡಲಾದ ನಿಬಂಧನೆಗಳನ್ನು ಪ್ರಶ್ನಿಸಿ ನ್ಯಾಯ ಬೆಲೆ ಅಂಗಡಿ ಪರವಾನಗಿ ಹೊಂದಿದ್ದ ಮೃತ ವ್ಯಕ್ತಿಯನ್ನು ಆಧರಿಸಿದ್ದ ಕುಟುಂಬದವರು ಮನವಿ ಸಲ್ಲಿಸಿದ್ದರು. 2016ರ ಜೂನ್‌ 10ರ ಅಧಿಸೂಚನೆಯಲ್ಲಿ 10ನೇ ತರಗತಿಯಲ್ಲಿ ಪಾಸಾಗಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದ್ದು, 2017ರ ಮೇ 20 ಮತ್ತು 2021ರ ಜನವರಿ 16ರ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದೆ.

ತಿದ್ದುಪಡಿ ಮಾಡಲಾಗಿರುವ ನಿಬಂಧನೆಯಲ್ಲಿ ಅನುಮತಿ ಪಡೆದಿರುವ ಡೀಲರ್‌ 65 ವರ್ಷ ಮೀರುವುದರೊಳಗೆ ಸಾವನ್ನಪ್ಪಿದರೆ 65 ವರ್ಷ ಮೀರಿರದ ಪತ್ನಿ, 18 ವರ್ಷ ತುಂಬಿದ ನಿರುದ್ಯೋಗಿ ಪುತ್ರ ಅಥವಾ ಅವಿವಾಹಿತ ಪುತ್ರಿ ಅಥವಾ 18 ವರ್ಷ ತುಂಬಿದ ವಿಧವೆ ಪುತ್ರಿಗೆ ಪರವಾನಗಿ ಅಧಿಕಾರ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಪರವಾನಗಿ ಹಸ್ತಾಂತರ ಕೋರುವವರು ಡೀಲರ್‌ ಸಾವನ್ನಪ್ಪಿದ ದಿನಕ್ಕೆ ಅನ್ವಯಿಸುವಂತೆ 10ನೇ ತರಗತಿ ಪಾಸಾಗಿರಬೇಕು ಅಥವಾ ತತ್ಸಂಬಂಧ ಅರ್ಹತೆ ಹೊಂದಿರಬೇಕು. 2016ರ ಅಧಿಸೂಚನೆಯಲ್ಲಿ ಮೂರು ವರ್ಷ ಸಿಂಧುತ್ವ ಹೊಂದಿದ್ದನ್ನು 2020ರಲ್ಲಿ ಐದು ವರ್ಷಕ್ಕೆ ಮತ್ತು 2021ರಲ್ಲಿ 10 ವರ್ಷಗಳಿಗೆ ಹೆಚ್ಚಿಸಲಾಗಿದೆ.

Also Read
ಗುರುತಿನ ಚೀಟಿಗಾಗಿ ಒತ್ತಾಯಿಸದೆ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

10ನೇ ತರಗತಿ ಪಾಸಾಗಿರಬೇಕು ಎಂಬುದು ಸಮರ್ಥನೀಯ ಷರತ್ತಾಗಿದೆ. ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ವ್ಯಕ್ತಿಗೆ ಸಾಮಾನ್ಯ ಅಂಕ ಗಣಿತ, ಬ್ಯಾಂಕಿಂಗ್‌ ಮತ್ತು ಸಾರ್ವಜನಿಕ ಕಚೇರಿಗಳ ಜೊತೆ ವ್ಯವಹರಿಸುವುದು ತಿಳಿದಿರಬೇಕಾಗುತ್ತದೆ. ವಯಸ್ಸಿಗೆ ಸಂಬಂಧಿಸಿದ ವಿಚಾರವು ನೀತಿಯ ಭಾಗವಾಗಿದ್ದು, ಇದು ಸರಿಯಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಹೇಳಿರುವುದು ಸರಿಯಾಗಿದೆ. ಅರ್ಜಿದಾರರ ಪರ ವಕೀಲ ಎಚ್‌ ಸಿ ಶಿವರಾಮು ಅವರು 10ನೇ ತರಗತಿ ಪಾಸಾಗಿರಬೇಕು ಎಂಬುದು ಮತ್ತು ವಯಸ್ಸಿನ ಮಿತಿ ನಿಗದಿಗೊಳಿಸಿರುವುದು ಕಾಯಿದೆಗೆ ವಿರುದ್ದವಾಗಿದೆ ಎಂಬುದನ್ನು ತಿಳಿಸಿಲ್ಲ. ಹೀಗಾಗಿ, 10ನೇ ತರಗತಿ ಪಾಸಾಗಿರಬೇಕು ಎಂಬ ಷರತ್ತಿನಲ್ಲಿ ತಪ್ಪು ಹುಡುಕಲಾಗದು” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿಶೇಷ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು ಅರ್ಜಿದಾರರಿಗೂ ಪರಿಹಾರ ಒದಗಿಸಿದ್ದು, ನಿಯಮಗಳಲ್ಲಿ ಸೂಚಿಸಿರುವಂತೆ ಇದೊಂದು ಬಾರಿ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಬಗ್ಗೆ ಬೆರಳು ಮಾಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

Attachment
PDF
Manmohan Kumar V C Versus State of Karnataka.pdf
Preview
Kannada Bar & Bench
kannada.barandbench.com