ಗುರುತಿನ ಚೀಟಿಗಾಗಿ ಒತ್ತಾಯಿಸದೆ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಿಸಲು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ದೇಶಾದ್ಯಂತ ಒಂಭತ್ತು ಲಕ್ಷಕ್ಕೂ ಹೆಚ್ಚು ಮಹಿಳಾ ಮತ್ತು ಮಂಗಳಮುಖಿ ಲೈಂಗಿಕ ಕಾರ್ಯಕರ್ತರು ಕೋವಿಡ್ ಹಿನ್ನೆಲೆಯಲ್ಲಿ ಸಮಸ್ಯೆಗೆ ಸಿಲುಕಿದ್ದು, ಅವರಿಗೆ ಪರಿಹಾರ ಕಲ್ಪಿಸುವಂತೆ ಮನವಿಯಲ್ಲಿ ಕೋರಲಾಗಿದೆ.
Supreme Court
Supreme Court
Published on

ಗುರುತಿನ ಚೀಟಿಗಾಗಿ ಒತ್ತಾಯಿಸದೆ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಅಜಯ್ ರಾಸ್ತೋಗಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಲೈಂಗಿಕ ಕಾರ್ಯಕರ್ತರನ್ನು ಪತ್ತೆಹಚ್ಚುವ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಮತ್ತು ರಾಜ್ಯ ಸಮಿತಿಗಳಿಗೆ ಪಡಿತರ ವಿತರಿಸುವ ಜವಾಬ್ದಾರಿ ನೀಡಬೇಕು ಎಂದು ಸೂಚಿಸಿದೆ.

ನಾಲ್ಕು ವಾರಗಳ ಬಳಿಕ ನ್ಯಾಯಾಲಯದ ಆದೇಶ ಜಾರಿ ಮತ್ತು ಅದರಿಂದ ಎಷ್ಟು ಲೈಂಗಿಕ ಕಾರ್ಯಕರ್ತರಿಗೆ ಅನುಕೂಲವಾಗಿದೆ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರ ವಿರೋಧದ ನಿಲುವು ಕೈಗೊಳ್ಳದಿರುವುದಕ್ಕೆ ನ್ಯಾಯಾಲಯವು ಸಂತೋಷ ವ್ಯಕ್ತಪಡಿಸಿತು.

ಕೋವಿಡ್ ಹಿನ್ನೆಲೆಯಲ್ಲಿ ಲೈಂಗಿಕ ಕಾರ್ಯಕರ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರೇತರ ಸಂಸ್ಥೆಯಾದ ದರ್ಬಾರ್ ಮಹಿಳಾ ಸಮನ್ವಯ ಸಮಿತಿಯು ನ್ಯಾಯಾಲಯದ ಮೆಟ್ಟಿಲೇರಿತು. ಒಂಭತ್ತು ಲಕ್ಷ ಮಹಿಳಾ ಮತ್ತು ಮಂಗಳಮುಖಿಯರಿಗೆ ಪರಿಹಾರ ಒದಗಿಸುವಂತೆ ಮನವಿಯಲ್ಲಿ ಕೋರಲಾಗಿತ್ತು.

ದರ್ಬಾರ್ ಮಹಿಳಾ ಸಮನ್ವಯ ಸಮಿತಿಯು ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪೈಕಿ ಲೈಂಗಿಕ ಕಾರ್ಯಕರ್ತರು ದೇಶದ ಪ್ರಜೆಗಳಾಗಿದ್ದು, ಅವರ ಉದ್ಯೋಗವನ್ನು ನೆಪಮಾಡಿಕೊಂಡು ಅವರಿಗೆ ಗುರುತಿನ ಚೀಟಿ ನಿರಾಕರಿಸಬಾರದು ಎಂಬುದೂ ಸೇರಿದೆ.

ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಹೀಗೆ ಹೇಳಿದೆ.

“ಲೈಂಗಿಕ ಕಾರ್ಯಕರ್ತರಿಗೆ ಗುರುತಿನ ಚೀಟಿ ಅಥವಾ ಬ್ಯಾಂಕ್ ಖಾತೆ ತೆರೆಯಲು ಕಷ್ಟವಾಗುತ್ತಿದೆ. ಉಳಿದ ಪ್ರಜೆಗಳಂತೆ ಅವರಿಗೂ ಅದೇ ಮೂಲಭೂತ ಹಕ್ಕುಗಳಿರುವುದರಿಂದ ಅವರು ತೊಂದರೆ ಅನುಭವಿಸಬಾರದು ಎಂಬುದು ನಮ್ಮ ನಿಲುವು. ಸಮಿತಿಯು ಸಲ್ಲಿಸಿರುವ ಮೂರನೇ ಮಧ್ಯಂತರ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿನ ಶಿಫಾರಸುಗಳನ್ನು ತುರ್ತಾಗಿ ಜಾರಿಗೊಳಿಸಬೇಕು” ಎಂದು ಹೇಳಲಾಗಿದೆ

“ಈಗ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಈಗ ನಮ್ಮ ಗಮನವಿದೆ. ಗುರುತಿನ ಚೀಟಿ ಇಲ್ಲದಿರುವುದರಿಂದ ಲೈಂಗಿಕ ಕಾರ್ಯಕರ್ತರು ಪಡಿತರ, ಹಣ ವರ್ಗಾವಣೆ ಸೇರಿದಂತೆ ಹಲವು ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂಬುದು ನ್ಯಾಯಾಲಯಕ್ಕೆ ಕಳವಳ ಉಂಟು ಮಾಡಿದೆ” ಎಂದು ನ್ಯಾಯಪೀಠ ಹೇಳಿತು.

ಗುರುತಿನ ಚೀಟಿ ಬಯಸದೇ ಸವಲತ್ತುಗಳನ್ನು ಕಲ್ಪಿಸುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಕರಾರಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಎಸ್ ಸೂರಿ ಹೇಳಿದರು. ಚುನಾವಣಾ ಚೀಟಿ ಇತ್ಯಾದಿ ಒಳಗೊಂಡು ಯಾವುದೇ ಗುರುತಿನ ಟೀಟಿ ಬಯಸದೇ ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಪಡಿತರ ವಿತರಿಸಲಾಗುತ್ತಿದೆ ಎಂದು ಆ ರಾಜ್ಯಗಳ ವಕೀಲರು ತಿಳಿಸಿದರು.

ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳ ಅಡಿಯಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಸೌಲಭ್ಯ ಕಲ್ಪಿಸುವಂತೆ ಕೋರಿರುವ ಅರ್ಜಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಜಯಂತ್ ಭೂಷಣ್ ಹೇಳಿದರು. ಬ್ಯಾಂಕ್ ಖಾತೆ ತೆರೆಯಲು ಗುರುತಿನ ಚೀಟಿ ಕಡ್ಡಾಯಗೊಳಿಸಬಾರದು. ಇದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡುವ ಆರ್ಥಿಕ ಸವಲತ್ತು ಪಡೆಯಲು ಅನುಕೂಲವಾಗಲಿದೆ ಎಂದು ಮತ್ತೊಬ್ಬ ಅಮಿಕಸ್ ಕ್ಯೂರಿ ವಕೀಲ ಪೀಯೂಷ್ ರಾಯ್ ಹೇಳಿದರು.

Also Read
ಲೈಂಗಿಕ ಅಪರಾಧಗಳ ವಿರುದ್ಧ ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾನ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟಿಗೆ ಪಿಐಎಲ್

ಲೈಂಗಿಕ ಕಾರ್ಯಕರ್ತರನ್ನು ಪತ್ತೆ ಹಚ್ಚುವುದರಲ್ಲಿ ಅಪಾರ ವ್ಯತ್ಯಾಸವಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಆನಂದ್ ಗ್ರೋವರ್ ತಿಳಿಸಿದ್ದಾರೆ.

“ಲೈಂಗಿಕ ಕಾರ್ಯಕರ್ತರಿಗೆ ಬದುಕುಳಿಯಲು ಪಡಿತರ ನೀಡುವ ವಿಚಾರದಲ್ಲಿ ನಾವು ಹೆಚ್ಚು ಕಳಕಳಿ ಹೊಂದಿದ್ದೇವೆ. ಗುರುತಿನ ಚೀಟಿ ಇಲ್ಲದೇ ಇರುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಲಾಭ ಪಡೆಯಲು ಬಹುಸಂಖ್ಯಾತ ಲೈಂಗಿಕ ಕಾರ್ಯಕರ್ತರಿಗೆ ಆಗುತ್ತಿಲ್ಲ ಎಂದು ಸಮಸ್ಯೆ ಹೇಳಲಾಗಿದೆ.”

ನ್ಯಾಯಮೂರ್ತಿ ಎಲ್‌ ನಾಗೇಶ್ವರ್ ರಾವ್

ಗುರುತಿನ ಚೀಟಿ ಕಡ್ಡಾಯಗೊಳಿಸದೇ ಲೈಂಗಿಕ ಕಾರ್ಯಕರ್ತರಿಗೆ ಪಡಿತರ ವಿತರಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ಸೂಚಿಸಿದೆ. ಅಕ್ಟೋಬರ್ 28ಕ್ಕೆ ವಿಚಾರಣೆ ಮೂಂದೂಡಲಾಗಿದ್ದು, ಈ ವೇಳೆಗೆ ಆದೇಶ ಪಾಲನಾ ವರದಿ ಸಲ್ಲಿಸುವಂತೆ ರಾಜ್ಯಗಳಿಗೆ ನ್ಯಾಯಾಲಯ ಸೂಚಿಸಿದೆ.

Kannada Bar & Bench
kannada.barandbench.com