ಮೆಗಾ ಕೃಷಿ ಮಾರುಕಟ್ಟೆ ನಿರ್ಮಾಣಕ್ಕಾಗಿ 272 ಎಕರೆ ಭೂಸ್ವಾಧೀನ ಮಾಡಿದ್ದ ರಾಜ್ಯ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಮಾಗಡಿ ಮುಖ್ಯ ರಸ್ತೆಯ ಶ್ರೀಗಂಧ ಕಾವಲ್‌ನಲ್ಲಿ 172 ಎಕರೆ 22 ಗುಂಟೆ, ಹೇರೋಹಳ್ಳಿಯ ಎರಡು ಪ್ರದೇಶಗಳಲ್ಲಿ ಕ್ರಮವಾಗಿ 104 ಎಕರೆ 05 ಗುಂಟೆ ಹಾಗೂ 3 ಎಕರೆ 34 ಗುಂಟೆ ಜಮೀನು ಸ್ವಾಧೀನಕ್ಕೆ ಸರ್ಕಾರವು 1999ರ ಏ.13ರಂದು ಅಧಿಸೂಚನೆ ಹೊರಡಿಸಿತ್ತು.
Justice Krishna S Dixit and Karnataka HC
Justice Krishna S Dixit and Karnataka HC
Published on

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾಗಡಿ ಮುಖ್ಯ ರಸ್ತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವತಿಯಿಂದ ಮೆಗಾ ಕೃಷಿ ಮಾರುಕಟ್ಟೆ ನಿರ್ಮಾಣಕ್ಕಾಗಿ 272 ಎಕರೆಗೂ ಹೆಚ್ಚಿನ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ.

ಜಮ್ನಾಲಾಲ್‌ ಬಜಾಜ್‌ ಸೇವಾ ಟ್ರಸ್ಟ್‌ ಅಧ್ಯಕ್ಷ ರಾಹುಲ್ ಬಜಾಜ್‌ ಸೇರಿದಂತೆ ಒಟ್ಟು ಎಂಟು ಜನ ಟ್ರಸ್ಟಿಗಳು ಭೂ ಸ್ವಾಧೀನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಪ್ರಕರಣದ ವಿಚಾರಣೆಗೆ ನ್ಯಾ. ದೀಕ್ಷಿತ್‌ ಅವರನ್ನು ನಿಯೋಜಿಸಲಾಗಿತ್ತು.

“ಮೆಗಾ ಕೃಷಿ ಮಾರುಕಟ್ಟೆ ಎಂಬುದು ಒಂದು ಸಾಮಾಜಿಕ ಕಾಳಜಿಯುಳ್ಳ ಯೋಜನೆ. ಕೃಷಿ ನಮ್ಮ ಜೀವನಾಡಿ ಎಂದು ಸುಪ್ರೀಂ ಕೋರ್ಟ್ ಮಹತ್ವದ ಪ್ರಕರಣಗಳಲ್ಲಿ ಈಗಾಗಲೇ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಮೆಗಾ ಕೃಷಿ ಮಾರುಕಟ್ಟೆ ನಿರ್ಮಾಣದ ಉದ್ದೇಶಕ್ಕಾಗಿ ಈ ಪ್ರದೇಶವನ್ನು ವಶಕ್ಕೆ ಪಡೆದಿದೆ. ಇದರಿಂದ ಕೃಷಿ ಮತ್ತು ಕೃಷಿಕರಿಗೆ ಉಪಯೋಗವಾಗಲಿದೆ. ಅಂತೆಯೇ, ರಾಜ್ಯ ಸರ್ಕಾರದ ಈ ಕ್ರಮ ಸಂವಿಧಾನಕ್ಕೆ ಪೂರಕ” ಎಂದು ಪೀಠ ತೀರ್ಪಿನಲ್ಲಿ ವಿವರಿಸಿದೆ.

“ಭಾರತದಲ್ಲಿ ಭೂ ಸ್ವಾಧೀನ ಮತ್ತು ಪರಿಹಾರ ನೀಡಿಕೆ ಕಾನೂನಿನ ಅಧಿಕೃತ ವಕ್ತಾರ ಎನಿಸಿರುವ ವಿ ಜಿ ರಾಮಚಂದ್ರನ್‌ ಅವರು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನು ಕಳೆದುಕೊಳ್ಳುವ ರೈತ ಅಥವಾ ಸಂತ್ರಸ್ತ ಪರಿಹಾರ ಪಡೆಯುವುದಕ್ಕಾಗಿ ಒಂದೇ ಒಂದು ಬಾರಿ ಆಸಕ್ತಿ ತೋರಿಸಿದರೂ ಸಾಕು. ಅವನ ಆಕ್ಷೇಪಣೆಯನ್ನು ಕೋರ್ಟ್‌ ಅಸಿಂಧುಗೊಳಿಸಬಹುದು” ಎಂದಿರುವುದನ್ನು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

“ಪ್ರಕರಣದಲ್ಲಿ ಅರ್ಜಿದಾರರು ಪರಿಹಾರ ನೀಡಿಕೆಯ ಮೂರು ಸಭೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ, ಅವರು ಪರಿಹಾರ ಪಡೆಯಲು ತೋರಿರುವ ಆಸಕ್ತಿಯನ್ನು ಗಮನಿಸಿದರೆ ಅವರ ಆಕ್ಷೇಪಣೆ ಒಪ್ಪಲಾದು. ಅಂತೆಯೇ, ರಾಜ್ಯ ಹೈಕೋರ್ಟ್‌ನಲ್ಲಿಯೂ ಇಂತಹ ಪ್ರಕರಣಗಳಲ್ಲಿ 1991ರಿಂದಲೂ ಈ ಪೂರ್ವನಿದರ್ಶನವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಹೇಳಿದೆ.

“ಅರ್ಜಿದಾರರಿಗೆ ಅನ್ಯಾಯವಾಗಬಾರದು. ಹೀಗಾಗಿ, ಅವಾರ್ಡ್‌ ಘೋಷಣೆಯಾದ ದಿನದಿಂದ ಶಾಸನದನ್ವಯ ಕೊಡುವ ಪರಿಹಾರ, ಬಡ್ಡಿಯನ್ನು ಹೊರತುಪಡಿಸಿ ಪ್ರತಿವರ್ಷ ಶೇ 12ರಷ್ಟು ಬಡ್ಡಿಯನ್ನು ಹೆಚ್ಚುವರಿಯಾಗಿ ಅರ್ಜಿದಾರರಿಗೆ ಮೂರು ತಿಂಗಳ ಒಳಗೆ ಪಾವತಿಸಬೇಕು” ಎಂದೂ ನ್ಯಾಯಾಲಯ ನಿರ್ದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಸಾರ್ವಜನಿಕ ಧರ್ಮಾರ್ಥಕ್ಕಾಗಿ ರೂಪುಗೊಂಡ ಟ್ರಸ್ಟ್‌ಗಳ ವಶದಲ್ಲಿರುವ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬಾರದು ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ತಮ್ಮ ವಾದ ಪುಷ್ಟೀಕರಿಸುವ ಒಂದೇ ಒಂದು ತೀರ್ಪನ್ನೂ ಪ್ರಸ್ತುತಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಪೀಠ ತಿಳಿಸಿದೆ. ಎಪಿಎಂಸಿ ಪರ ಹಿರಿಯ ವಕೀಲ ಕೆ ಜಿ ರಾಘವನ್‌ ವಾದಿಸಿದ್ದರು.

ಮಾಗಡಿ ಮುಖ್ಯ ರಸ್ತೆಯಲ್ಲಿನ ಶ್ರೀಗಂಧ ಕಾವಲ್‌ನಲ್ಲಿ 172 ಎಕರೆ 22 ಗುಂಟೆ, ಹೇರೋಹಳ್ಳಿಯ ಎರಡು ಪ್ರದೇಶಗಳಲ್ಲಿ ಕ್ರಮವಾಗಿ 104 ಎಕರೆ 05 ಗುಂಟೆ ಹಾಗೂ 3 ಎಕರೆ 34 ಗುಂಟೆ ಜಮೀನನ್ನು ಸ್ವಾಧೀನಕ್ಕೆ ಪಡೆಯಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿ ಮತ್ತು ಬೆಂಗಳೂರು ಜಿಲ್ಲಾಧಿಕಾರಿ 1999ರ ಏಪ್ರಿಲ್‌ 13ರಂದು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದರು. ಇದರೊಂದಿಗೆ ಸುಮಾರು 25 ವರ್ಷಗಳ ಸುದೀರ್ಘ ವ್ಯಾಜ್ಯ ಮುಕ್ತಾಯವಾಗಿದೆ.

Attachment
PDF
Jamnalal Bajaj Seva Trust Vs State of Karanataka
Preview
Kannada Bar & Bench
kannada.barandbench.com