ಕೆಎಸ್‌ಸಿಎ ಚುನಾವಣೆ: ಪತ್ರಿಕೋದ್ಯಮಿ ಶಾಂತಕುಮಾರ್‌ ನಾಮಪತ್ರದ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್‌

ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ಕ್ಲಬ್‌ ₹200 ಚಂದಾ ಪಾವತಿಸಿಲ್ಲ ಎಂದು ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ ಎನ್‌ ಶಾಂತಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಕೆಎಸ್‌ಸಿಎ ಚುನಾವಣೆ: ಪತ್ರಿಕೋದ್ಯಮಿ ಶಾಂತಕುಮಾರ್‌ ನಾಮಪತ್ರದ ಸಿಂಧುತ್ವ ಎತ್ತಿ ಹಿಡಿದ ಹೈಕೋರ್ಟ್‌
Published on

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಪತ್ರಿಕೋದ್ಯಮಿ ಕೆ ಎನ್‌ ಶಾಂತಕುಮಾರ್‌ ಅವರ ನಾಮಪತ್ರ ಸಿಂಧುವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಆದೇಶಿಸಿದೆ. ಇದರಿಂದ ಕೆಎಸ್‌ಸಿಎ ಗಾದಿಗಾಗಿ ಮಾಜಿ ವೇಗಿ ಬಿ ಕೆ ವೆಂಟಕೇಶ್‌ ಪ್ರಸಾದ್‌ ಮತ್ತು ಶಾಂತಕುಮಾರ್‌ ನಡುವೆ ಹಣಾಹಣಿ ನಡೆಯಲಿದೆ.

ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ಕ್ಲಬ್‌ ₹200 ಚಂದಾ ಪಾವತಿಸಿಲ್ಲ ಎಂದು ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ ಎನ್‌ ಶಾಂತಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ ಶನಿವಾರ ಪ್ರಕಟಿಸಿತು.

ಅರ್ಜಿಯನ್ನು ಮಾನ್ಯ ಮಾಡಿರುವ ಪೀಠವು ಶಾಂತಕುಮಾರ್ ಅವರ ನಾಮಪತ್ರ ತಿರಸ್ಕರಿಸಿ ನವೆಂಬರ್ 24ರಂದು ಚುನಾವಣಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿದೆಯಲ್ಲದೆ, ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 7ರಂದೇ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಲಭ್ಯವಾಗಬೇಕಿದೆ.

ಕಳೆದ ವಿಚಾರಣೆಯಲ್ಲಿ ಚುನಾವಣಾಧಿಕಾರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಮೊದಲಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಹಿಂಬಾಕಿಯ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಕೆಎಸ್‌ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು (ಸಿಇಒ) ಹಿಂಬಾಕಿ ಪಾವತಿಸದಿರುವವರ ದಾಖಲೆಯನ್ನು ಇಟ್ಟಿರಲಿಲ್ಲ. ಹೀಗಾಗಿ, ಆ ಪಟ್ಟಿಯನ್ನು ತರುವಂತೆ ಸಿಇಒಗೆ ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ ಸಮಯ ಉಳಿತಾಯ ಮಾಡುವ ದೃಷ್ಟಿಯಿಂದ ಅಧ್ಯಕ್ಷ ಆಕಾಂಕ್ಷಿಗಳ ನಾಮಪತ್ರ ಪರಿಶೀಲನೆಯನ್ನು ಬದಿಗಿಟ್ಟು ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ನಾಮಪತ್ರ ಕೈಗೆತ್ತಿಕೊಳ್ಳಲಾಗಿತ್ತು. ಆನಂತರ ಸಿಇಒ ದಾಖಲೆ ತಂದು ಮಂಡಿಸುವ ವೇಳೆಗೆ ಶಾಂತಕುಮಾರ್‌ ಅವರು ಹಿಂಬಾಕಿ ರಸೀದಿಯನ್ನು ಸಲ್ಲಿಸಿದ್ದರು. ಆದರೆ, ನಾಮಪತ್ರ ಸಲ್ಲಿಸುವ ವೇಳೆಯಲ್ಲಿಯೇ ಹಿಂಬಾಕಿ ಪಾವತಿಸಬೇಕಿತ್ತು ಎಂಬ ವಿಚಾರವನ್ನು ನಾಮಪತ್ರ ತಿರಸ್ಕೃತ ಆದೇಶದಲ್ಲಿ ಉಲ್ಲೇಖಿಸಿರುವುದರ ಕುರಿತು ನ್ಯಾಯಾಲಯ ನಿರ್ಧರಿಸಬಹುದು” ಎಂದಿದ್ದರು.

Also Read
[ಕೆಎಸ್‌ಸಿಎ ಚುನಾವಣೆ] ಶಾಂತಕುಮಾರ್‌ ನಾಮಪತ್ರ ತಿರಸ್ಕೃತ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಡಿಸೆಂಬರ್ 7ರಂದು ನಡೆಯಲಿರುವ ಕೆಎಸ್‌ಸಿಎ ಚುನಾವಣೆಯ ಪ್ರಕ್ರಿಯೆಯ ಭಾಗವಾಗಿ ಶಾಂತಕುಮಾರ್ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ಕ್ಲಬ್‌ ₹200 ಚಂದಾ ಪಾವತಿಸಿಲ್ಲ ಎಂಬ ಕಾರಣಕ್ಕೆ ನಾಮಪತ್ರ ತಿರಸ್ಕರಿಸಲಾಗಿತ್ತು.

ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಶಾಂತಕುಮಾರ್ ಅವರು, ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿಯ ಆದೇಶ ರದ್ದುಪಡಿಸಬೇಕು. ತಮ್ಮ ಉಮೇದುವಾರಿಕೆ ಎತ್ತಿ ಹಿಡಿಯಲು ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು ಹಾಗೂ ಚುನಾವಣಾ ಕ್ಯಾಲೆಂಡರ್‌ನ ನಿಯಮಾನುಸಾರ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com