![[ಕೆಎಸ್‌ಸಿಎ ಚುನಾವಣೆ] ಶಾಂತಕುಮಾರ್ ನಾಮಪತ್ರ ತಿರಸ್ಕೃತ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್](http://media.assettype.com/barandbench-kannada%2F2025-11-27%2Fpneb8ssy%2FWhatsApp-Image-2025-11-26-at-8.00.23-PM.jpeg?w=480&auto=format%2Ccompress&fit=max)
![[ಕೆಎಸ್‌ಸಿಎ ಚುನಾವಣೆ] ಶಾಂತಕುಮಾರ್ ನಾಮಪತ್ರ ತಿರಸ್ಕೃತ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್](http://media.assettype.com/barandbench-kannada%2F2025-11-27%2Fpneb8ssy%2FWhatsApp-Image-2025-11-26-at-8.00.23-PM.jpeg?w=480&auto=format%2Ccompress&fit=max)
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿರುವ ಪತ್ರಿಕೋದ್ಯಮಿ ಕೆ ಎನ್ ಶಾಂತಕುಮಾರ್ ಅವರು ನಾಮಪತ್ರ ಪರಿಶೀಲನೆಯ ವೇಳೆ ₹200 ಹಿಂಬಾಕಿ ಪಾವತಿಸಿರುವ ರಶೀದಿ ಹಾಜರುಪಡಿಸಿದ್ದರು ಎಂದು ಚುನಾವಣಾಧಿಕಾರಿಯು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್ ₹200 ಚಂದಾ ಪಾವತಿಸಿಲ್ಲ ಎಂದು ತಮ್ಮ ನಾಮಪತ್ರ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಹಾಗೂ ತಮ್ಮ ಉಮೇದುವಾರಿಕೆ ಎತ್ತಿ ಹಿಡಿಯಲು ಚುನಾವಣಾಧಿಕಾರಿಗೆ ನಿರ್ದೇಶಿಸಲು ಕೋರಿ ಕೆ ಎನ್ ಶಾಂತಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ನ್ಯಾಯಾಲಯವು ಬುಧವಾರ ನಿರ್ದೇಶಿಸಿದಂತೆ ಚುನಾವಣಾಧಿಕಾರಿಯ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ನಾಮಪತ್ರ ಪರಿಶೀಲನೆಯ ವಿಡಿಯೊ ರೆಕಾರ್ಡ್ ಅನ್ನು ಪೀಠಕ್ಕೆ ಸಲ್ಲಿಸಿದರು. ಇದನ್ನು ಮುಕ್ತ ನ್ಯಾಯಾಲಯದಲ್ಲಿ ಪರಿಶೀಲಿಸಿದ ಪೀಠವು ದಾಖಲೆಯಾಗಿ ಸ್ವೀಕರಿಸಿತು.
ಆನಂತರ ಫಣೀಂದ್ರ ಅವರು “ಮೊದಲಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲನೆ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಹಿಂಬಾಕಿಯ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಕೆಎಸ್‌ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು (ಸಿಇಒ) ಹಿಂಬಾಕಿ ಪಾವತಿಸದಿರುವವರ ದಾಖಲೆಯನ್ನು ಇಟ್ಟಿರಲಿಲ್ಲ. ಹೀಗಾಗಿ, ಆ ಪಟ್ಟಿಯನ್ನು ತರುವಂತೆ ಸಿಇಒಗೆ ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ ಸಮಯ ಉಳಿತಾಯ ಮಾಡುವ ದೃಷ್ಟಿಯಿಂದ ಅಧ್ಯಕ್ಷ ಆಕಾಂಕ್ಷಿಗಳ ನಾಮಪತ್ರ ಪರಿಶೀಲನೆಯನ್ನು ಬದಿಗಿಟ್ಟು ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ನಾಮಪತ್ರ ಕೈಗೆತ್ತಿಕೊಳ್ಳಲಾಗಿತ್ತು. ಆನಂತರ ಸಿಇಒ ದಾಖಲೆ ತಂದು ಮಂಡಿಸುವ ವೇಳೆಗೆ ಶಾಂತಕುಮಾರ್ ಅವರು ಹಿಂಬಾಕಿ ರಸೀದಿಯನ್ನು ಸಲ್ಲಿಸಿದ್ದರು. ಆದರೆ, ನಾಮಪತ್ರ ಸಲ್ಲಿಸುವ ವೇಳೆಯಲ್ಲಿಯೇ ಹಿಂಬಾಕಿ ಪಾವತಿಸಬೇಕಿತ್ತು ಎಂಬ ವಿಚಾರವನ್ನು ನಾಮಪತ್ರ ತಿರಸ್ಕೃತ ಆದೇಶದಲ್ಲಿ ಉಲ್ಲೇಖಿಸಿರುವುದರ ಕುರಿತು ನ್ಯಾಯಾಲಯ ನಿರ್ಧರಿಸಬಹುದು” ಎಂದರು.
ಶಾಂತಕುಮಾರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಎಸ್ ನಾಗಾನಂದ್ ಅವರು "ನಾಮಪತ್ರ ಪರಿಶೀಲನೆಯ ವೇಳೆಗೆ ಹಿಂಬಾಕಿ/ಚಂದಾ ಪಾವತಿಸಿದ್ದರೆ ಸಾಕು ಎಂಬುದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್ ತೀರ್ಪಿದೆ. ಹಿಂಬಾಕಿ ಇರುವವರ ಪಟ್ಟಿಯನ್ನು ಕೆಎಸ್‌ಸಿಎ ಪ್ರಕಟಿಸಬೇಕಿತ್ತು. ಚುನಾವಣಾಧಿಕಾರಿ ಇಂದು ಸ್ಪಷ್ಟಪಡಿಸಿದ್ದು, ವಾಸ್ತವಿಕ ವಿಚಾರಗಳ ಕುರಿತು ಯಾವುದೇ ತಕರಾರು ಉಳಿದಿಲ್ಲ” ಎಂದು ವಿಸ್ತೃತವಾಗಿ ವಾದಿಸಿದರು.
ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಮತ್ತು ಮಾಜಿ ಕ್ರಿಕೆಟಿಗ ಬಿ ಕೆ ವೆಂಕಟೇಶ್ ಪ್ರಸಾದ್ ಪರ ವಕೀಲ ಎ ಎಸ್ ವಿಶ್ವಜಿತ್ ಅವರು “ಸಮಸ್ಯೆ ಬಗೆಹರಿಸಲು ಶಾಂತಕುಮಾರ್ ಅವರಿಗೆ ಸಮಯ ಸಿಕ್ಕಾಗ ದೋಷವನ್ನು ಸರಿಪಡಿಸಿದ್ದಾರೆ. ಕೆಎಸ್‌ಸಿಎ ಅಧ್ಯಕ್ಷ ಗಾದಿಯ ಆಕಾಂಕ್ಷಿಯು ₹200 ಬಾಕಿ ಉಳಿಸಿಕೊಂಡಿದ್ದಾರೆ. ₹200 ರೂಪಾಯಿ ಏನೇನೂ ಅಲ್ಲ, ಆದರೆ ಅವರು ಕೆಎಸ್‌ಸಿಎ ಗಾದಿಯ ಆಕಾಂಕ್ಷಿ. ನಾಮಪತ್ರ ಸಲ್ಲಿಸುವಾಗಲೇ ಅವರು ಹಿಂಬಾಕಿ ಪಾವತಿಸಬೇಕಿತ್ತು” ಎಂದು ಬಲವಾಗಿ ಸಮರ್ಥಿಸಿದರು.
ಕೆಎಸ್‌ಸಿಎ ಸಿಇಒ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಹಿಂಬಾಕಿ ಪಾವತಿಸದಿದ್ದರು ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ಲಬ್ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿಸಲಾಗಿತ್ತು. ಹಿಂಬಾಕಿ ಪಾವತಿ ಮಾಡದಿದ್ದವರ ಪಟ್ಟಿಯನ್ನು ಕೆಎಸ್‌ಸಿಎ ಸಿದ್ಧಪಡಿಸಬೇಕಿತ್ತು. ಅದನ್ನು ಮಾಡದಿರುವುದು ನಮ್ಮ ತಪ್ಪು” ಎಂದರು.
ಅಧ್ಯಕ್ಷ ಗಾದಿಯ ಮತ್ತೊಬ್ಬ ಆಕಾಂಕ್ಷಿ ಕಲ್ಪನಾ ವೆಂಕಟಾಚಾರ್ ಪರವಾಗಿ ವಕೀಲ ಕರಣ್ ಗುಪ್ತ ವಾದಿಸಿದರು.
ಎಲ್ಲರ ವಾದ ಆಲಿಸಿದ ನ್ಯಾಯಾಲಯವು “ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಗಳ ಪೈಕಿ ಕಣದಲ್ಲಿರುವವರ ಪಟ್ಟಿಯನ್ನು ತಾನು ತೀರ್ಪು ನೀಡುವವರೆಗೆ ಬಿಡುಗಡೆ ಮಾಡಬಾರದು” ಎಂಬ ಆದೇಶವನ್ನು ಮುಂದುವರಿಸಿ ಆದೇಶ ಕಾಯ್ದಿರಿಸಿತು. ಸೋಮವಾರ ನ್ಯಾಯಾಲಯವು ಅಂತಿಮ ಆದೇಶ ಪ್ರಕಟಿಸುವ ಸುಳಿವು ನೀಡಿದೆ.