
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ಮತ್ತಿತರರಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಆಗಿರುವ ಸರ್ಕಾರಿ ಜಮೀನಿನ ಒತ್ತುವರಿ ತೆರವು ಕುರಿತಂತೆ 10 ದಿನಗಳಲ್ಲಿ ವರದಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೊರ್ಟ್ ಬುಧವಾರ ತಾಕೀತು ಮಾಡಿದೆ.
ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಮಾಡಿರುವ ಆದೇಶ ಜಾರಿ ಮಾಡುವಂತೆ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲಿಸದ ರಾಜ್ಯ ಸರ್ಕಾರದ ನಡೆ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆಯ ಆರಂಭದಲ್ಲಿ, ಹೈಕೋರ್ಟ್‌ನ ಹಿಂದಿನ ಆದೇಶದಂತೆ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ಎಂ ರೋಣ ಅವರು “ಕೇತಗಾನಹಳ್ಳಿ ಸುತ್ತಮುತ್ತ ಸ್ಥಳೀಯರಿಗೆ ಸರ್ಕಾರದಿಂದ ಮಂಜೂರಾಗಿರುವ ಗೋಮಾಳ ಜಮೀನು ಕುರಿತಂತೆ ಪರಿಶೀಲನೆ ನಡೆಸಲು ಸಮಿತಿ ರಚನೆಯಾಗಿದೆ. ಸಮಿತಿ ಜಮೀನು ಮಂಜೂರಾತಿ ಅಸಲಿಯೇ ಅಥವಾ ಇಲ್ಲವೇ ವಿಚಾರಣೆ ನಡೆಸುತ್ತಿದೆ. ಈಗಾಗಲೇ 14 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ18 ಎಕರೆ ಒತ್ತುವರಿ ಕುರಿತಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತಿದೆ. ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಲಾಗುವುದು” ಎಂದು ವಿವರಣೆ ನೀಡಿದರು.
ಅದಕ್ಕೆ ತೀವ್ರ ಆಕ್ಷೇಪಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಬಸವರಾಜು ಅವರು “ಒಟ್ಟು 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ಯಾವುದಕ್ಕೂ ಮಂಜರಾತಿ ಪತ್ರ ಇಲ್ಲ. ನಕಲಿ ಮಂಜೂರಾತಿ ಪತ್ರ ಆಧರಿಸಿ ಗೋಮಾಳ ಜಮೀನನ್ನು ರಾಜಕಾರಣಿಗಳು/ಪ್ರಭಾವಿಗಳು ಖರೀದಿಸಿದ್ದಾರೆ. ಈ ಕುರಿತು 2014ರಲ್ಲೇ ರಾಮನಗರ ತಹಸೀಲ್ದಾರ್ ವರದಿ ನೀಡಿದ್ದರು. ಆದ್ದರಿಂದ, ಈವರೆಗೂ ಆ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿಲ್ಲ. ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿ, ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು” ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ಕೇತಗಾನಹಳ್ಳಿಯಲ್ಲಿ ಎಷ್ಟು ಜಮೀನನ್ನು ಸ್ಥಳೀಯರಿಗೆ ಮಂಜೂರು ಮಾಡಲಾಗಿದೆ?” ಎಂದು ವಿಚಾರಣೆಗೆ ಹಾಜರಿದ್ದ ರಾಜೇಂದ್ರ ಕಟಾರಿಯಾ ಅವರನ್ನು ಪ್ರಶ್ನಿಸಿತು.
ಇದಕ್ಕೆ ಕಠಾರಿಯಾ ಅವರು “ಕೇತಗಾನಹಳ್ಳಿಯಲ್ಲಿ ಸರ್ಕಾರದಿಂದ ಜಮೀನು ಮಂಜೂರಾತಿಯ ದಾಖಲೆಗಳು ಇಲ್ಲವಾಗಿದೆ. ಆ ಕುರಿತು ಪರಿಶೀಲನೆ ನಡೆಸುವುದಕ್ಕಾಗಿಯೇ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಭೂ ಮಂಜೂರಾತಿ ಅಸಲಿಯೇ ಅಥವಾ ನಕಲಿಯೇ ಎಂಬದನ್ನು ಪರಿಶೀಲಿಸಲಿದೆ. ಈ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದಿಂದಲೂ ವರದಿ ಪಡೆಯಲಿದ್ದು, ಅದಕ್ಕಾಗಿ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದಕ್ಕೆ ಪೀಠವು “ಈಗ ದಾಖಲೆ ನಾಪತ್ತೆಯಾಗಿವೆ. ಮುಂದೆ ಜಮೀನು ನಾಪತ್ತೆಯಾಗಬಹುದು. ಪ್ರಭಾವಿಗಳು ಒತ್ತುವರಿ ಮಾಡಿರುವುದರಿಂದ ಕೈ ಕಟ್ಟಿ ಕುಳಿತ್ತಿದ್ದೀರಿ. ಅದೇ ಭಿಕ್ಷುಕರು, ಬಡವರು ಐದಾರಡಿ ಒತ್ತುವರಿ ಮಾಡಿದರೆ ಬುಲ್ಡೋಜರ್ ತೆಗೆದುಕೊಂಡು ಹೋಗಿ ತೆರವು ಮಾಡುತ್ತಿದ್ದಿರಿ. ಸರ್ಕಾರಕ್ಕೆ ಧೈರ್ಯವಿದ್ದರೆ ಒತ್ತುವರಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಜಮೀನು ಪಡೆಯಬೇಕು. ಇಲ್ಲವಾದರೆ ನ್ಯಾಯಾಲಯವೇ ಆ ಬಗ್ಗೆ ಸೂಕ್ತ ಆದೇಶ ಹೊರಡಿಸುತ್ತದೆ. ಜಮೀನು ಒತ್ತುವರಿಯಿಂದ ಪಡೆದಿರುವ ಲಾಭವನ್ನೂ ವಸೂಲಿಗೆ ಆದೇಶಿಸಬೇಕಾಗಬಹುದು” ಎಂದು ಎಚ್ಚರಿಸಿತು.
ನಂತರ ಕೇತಗಾನಹಳ್ಳಿಯ ಸರ್ವೇ ನಂ 7, 8, 9, 16 ಮತ್ತು 79ರ ಒತ್ತುವರಿ ತೆರವಿನ ಬಗ್ಗೆ 10 ದಿನಗಳಲ್ಲಿ ವರದಿ ಕೊಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್ 3ಕ್ಕೆ ವಿಚಾರಣೆ ಮುಂದೂಡಿತು.