“ಆರೋಗ್ಯ ತುರ್ತು ಪರಿಸ್ಥಿತಿಯೆಡೆಗೆ ಗುಜರಾತ್‌:” ಕೋವಿಡ್‌ ಹೆಚ್ಚಳ - ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್‌

“ಕೋವಿಡ್‌ ನಿಯಂತ್ರಣದಲ್ಲಿ ಅನಿಯಂತ್ರಿತ ಉಲ್ಬಣ ಮತ್ತು ಗಂಭೀರ ನಿರ್ವಹಣಾ ಸಮಸ್ಯೆಗಳು” ಎಂಬ ಹೆಸರಿನಲ್ಲಿ ಭಾನುವಾರ ಪ್ರಕರಣ ದಾಖಲಿಸಿಕೊಂಡು ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಆದೇಶ ಹೊರಡಿಸಿದ್ದಾರೆ.”
Gujarat High Court Chief Justice Vikram Nath
Gujarat High Court Chief Justice Vikram Nath

ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳ, ಸೋಂಕು ಪರೀಕ್ಷೆಯ ವ್ಯವಸ್ಥೆಯ ಕೊರತೆ ಮತ್ತು ಇದನ್ನು ನಿಯಂತ್ರಿಸಲು ಹಾಸಿಗೆ ಮತ್ತು ವೈದ್ಯಕೀಯ ವ್ಯವಸ್ಥೆಯ ಸಮಸ್ಯೆಗಳನ್ನು ಗುಜರಾತ್‌ ಹೈಕೋರ್ಟ್‌ ಭಾನುವಾರ ಸ್ವಯಂಪ್ರೇರಿತವಾಗಿ ಪರಿಗಣಿಸಿದೆ.

ಮಾಧ್ಯಮ ವರದಿಗಳಲ್ಲಿ ಗುಜರಾತ್‌ ಆರೋಗ್ಯ ತುರ್ತು ಪರಿಸ್ಥಿತಿಯೆಡೆಗೆ ಮುಖ ಮಾಡಿದೆ ಎಂಬುದನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಅವರು “ಕೋವಿಡ್‌ ನಿಯಂತ್ರಣದಲ್ಲಿ ಅನಿಯಂತ್ರಿತ ಉಲ್ಬಣ ಮತ್ತು ಗಂಭೀರ ನಿರ್ವಹಣಾ ಸಮಸ್ಯೆಗಳು” ಎಂಬ ತಲೆಬರಹದಡಿ ಪ್ರಕರಣ ದಾಖಲಿಸಿಕೊಂಡು ಆದೇಶ ಹೊರಡಿಸಿದ್ದಾರೆ.

“ಪತ್ರಿಕೆಗಳು, ಸುದ್ದಿ ಮಾಧ್ಯಮಗಳಲ್ಲಿ (ಕೋವಿಡ್‌ಗೆ ಸಂಬಂಧಿಸಿದ) ಭಯಾನಕ, ದುರದೃಷ್ಟಕರ ಮತ್ತು ಅನೂಹ್ಯವಾದ ಸಮಸ್ಯೆಗಳು, ನಿರ್ವಹಿಸಲಾಗದ ಅತ್ಯಂತ ಕೆಟ್ಟ ಪರಿಸ್ಥಿತಿಯ ಬಗ್ಗೆ, ಪರೀಕ್ಷೆ ನಡೆಸಲು ಸೌಲಭ್ಯದ ಕೊರತೆ, ಹಾಸಿಗೆಗಳ ಕೊರತೆ, ತುರ್ತು ನಿಗಾ ಘಟಕ ಹಾಗೂ ಆಮ್ಲಜನಕ ಪೂರೈಕೆಯ ಕೊರತೆಯ ಬಗ್ಗೆ, ಅಗತ್ಯ ಔಷಧಗಳಾದ ರಾಮ್ದೆಸಿವಿರ್‌ ಕಡಿಮೆ ಪ್ರಮಾಣದ ಲಭ್ಯತೆಯ ಬಗ್ಗೆ ಹೀಗೆ ಇತ್ಯಾದಿ ವಿಷಯಗಳ ಕುರಿತಾದ ವರದಿಗಳಿಂದ ತುಂಬಿ ಹೋಗಿವೆ” ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಮಾಧ್ಯಮಗಳಲ್ಲಿ ಇಲ್ಲೊಂದು ಅಲ್ಲೊಂದು ಸುದ್ದಿ ಪ್ರಕಟವಾಗಿದ್ದರೆ ಅದರ ಬಗ್ಗೆ ಅಲಕ್ಷ್ಯವಹಿಸಬಹುದಿತ್ತು. ದೇಶಾದ್ಯಂತ ಪ್ರಸರಣ ವ್ಯವಸ್ಥೆ ಹೊಂದಿರುವ ಮಹತ್ವದ ಸುದ್ದಿ ಮಾಧ್ಯಮಗಳಲ್ಲಿ ಹಲವಾರು ವರದಿಗಳು ಪ್ರಕಟವಾಗುತ್ತಿರುವುದನ್ನು ನಿರ್ಲಕ್ಷಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಪೀಠವು ಉಲ್ಲೇಖಿಸಿದೆ.

Also Read
ಬ್ರೇಕಿಂಗ್:‌ ಮುಖ್ಯ ನ್ಯಾಯಮೂರ್ತಿ ಕೊಠಡಿಯಿಂದ ಕಲಾಪಗಳ ಲೈವ್‌ ಸ್ಟ್ರೀಮಿಂಗ್ ಆರಂಭಿಸಿದ ಗುಜರಾತ್‌ ಹೈಕೋರ್ಟ್

“ಉಲ್ಲೇಖಿಸಲಾದ ಪತ್ರಿಕೆಗಳಲ್ಲಿನ ಲೇಖನಗಳು ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದು, ರಾಜ್ಯವು ಆರೋಗ್ಯ ತುರ್ತು ಪರಿಸ್ಥಿತಿ ಎಡೆಗೆ ಹೆಜ್ಜೆ ಇಟ್ಟಿದೆ ಎಂಬುದನ್ನು ವರದಿಯಲ್ಲಿ ಬಿಂಬಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಹೀಗಾಗಿ ಪ್ರಕರಣದ ವಿಚಾರಣೆ ನಡೆಸಲು ಸ್ವತಃ ಮುಖ್ಯ ನ್ಯಾಯಮೂರ್ತಿ ಅವರು ತಾವು ಹಾಗೂ ನ್ಯಾಯಮೂರ್ತಿ ಭಾರ್ಗವ್‌ ಡಿ ಕರಿಯಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ರಚಿಸಿದ್ದು, ತಮ್ಮ ನಿವಾಸದಲ್ಲಿ ಸ್ವಯಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯನ್ನು ನಡೆಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com