ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ಹಿಂಪಡೆತ: ಆಕ್ಷೇಪಣೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಾರ್ಚ್‌ 22ಕ್ಕೆ

ಪ್ರಮುಖ ಪ್ರಕರಣದಲ್ಲಿ ತನಿಖೆಗೆ ತಡೆ ನೀಡಲಾಗಿದೆ. ತಡೆಯಾಜ್ಞೆ ತೆರವು ಮಾಡಬೇಕು ಎಂದು ಕೋರಿರುವ ಮಧ್ಯಂತರ ಮನವಿ ಕುರಿತಂತೆ ವಾದವನ್ನು ಮಾರ್ಚ್‌ ಮೊದಲ ಅಥವಾ ಎರಡನೇ ವಾರದಲ್ಲಿ ಆಲಿಸಬೇಕು ಎಂದು ಕೋರಿದ ಎಎಸ್‌ಜಿ ಎಸ್‌ ವಿ ರಾಜು.
Basanagouda R Patil, D K Shivakumar, CBI and Karnataka HC
Basanagouda R Patil, D K Shivakumar, CBI and Karnataka HC

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧದ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಕೋರಿ ಸಿಬಿಐ ವಕೀಲರು ಹಲವು ಬಾರಿ ಕೋರಿದ ಹೊರತಾಗಿಯೂ ಕರ್ನಾಟಕ ಹೈಕೋರ್ಟ್‌ ಅರ್ಜಿಯ ವಿಚಾರಣೆಯನ್ನು ಮಾರ್ಚ್‌ 22ಕ್ಕೆ ಮುಂದೂಡಿತು.

ರಾಜ್ಯ ಸರ್ಕಾರವು ಅನುಮತಿ ಹಿಂಪಡೆದಿರುವ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ಪ್ರಮುಖ ಪ್ರಕರಣದಲ್ಲಿ ಅನುಮತಿ ಹಿಂಪಡೆಯುವ ಮೂಲಕ ತನಿಖೆ ತಡೆಯಲಾಗಿದೆ. ತಡೆಯಾಜ್ಞೆ ತೆರವು ಮಾಡಬೇಕು ಎಂದು ಕೋರಿರುವ ಮಧ್ಯಂತರ ಮನವಿ ಕುರಿತಾಗಿ ವಾದವನ್ನು ಮಾರ್ಚ್‌ ಮೊದಲ ಅಥವಾ ಎರಡನೇ ವಾರದಲ್ಲಿ ಆಲಿಸಬೇಕು. ಇದಕ್ಕಾಗಿ ದಿನಾಂಕ ನಿಗದಿಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಆದರೆ, ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿರುವ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಡಿ ಕೆ ಶಿವಕುಮಾರ್‌ ಅವರನ್ನು ಪ್ರತಿನಿಧಿಸಿರುವ ಮತ್ತೊಬ್ಬ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಬೇರೆ ಪ್ರಕರಣಗಳ ವಿಚಾರಣೆ ಇವೆ ಎಂದು ಪೀಠಕ್ಕೆ ಕೋರಿದರು.

ಅದಾಗ್ಯೂ, ಎಎಸ್‌ಜಿ ರಾಜು ಅವರು ಪೀಠಕ್ಕೆ ತುರ್ತಾಗಿ ಅರ್ಜಿ ವಿಚಾರಣೆ ನಡೆಸುವಂತೆ ಕೋರಿದರು. ಎಲ್ಲವನ್ನೂ ಆಲಿಸಿದ ಪೀಠವು ವಿಭಾಗೀಯ ಪೀಠದ ಮತ್ತೋರ್ವ ನ್ಯಾ. ಅಡಿಗ ಅವರು ಧಾರವಾಡ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಅವರು ಭೌತಿಕವಾಗಿ ಪ್ರಧಾನ ಪೀಠಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾರ್ಚ್‌ 22ಕ್ಕೆ ಮುಂದೂಡಲಾಗುತ್ತಿದೆ ಎಂದು ಆದೇಶಿಸಿದರು.

Also Read
ಡಿಕೆಶಿ ವಿರುದ್ಧದ ಸಿಬಿಐ ತನಿಖೆ ವಾಪಸ್‌: ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಿದ ಹೈಕೋರ್ಟ್‌

ಒಂದು ಹಂತದಲ್ಲಿ ಎಎಸ್‌ಜಿ ರಾಜು ಅವರು ಮಾರ್ಚ್‌ 22ರಂದು ಬೆಳಿಗ್ಗೆ 10.30ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಪೀಠಕ್ಕೆ ಕೋರಿದರು. ಅದಕ್ಕೆ ನ್ಯಾಯಾಲಯವು ಬೆಳಿಗ್ಗೆ 10.30ರಿಂದ ಸಂಜೆ 4.30ರ ನಡುವೆ ಪ್ರಕರಣ ಆಲಿಸಲಾಗುವುದು ಎಂದು ಹೇಳಿತು.

ಈ ಮಧ್ಯೆ, ಬಸನಗೌಡ ಪಾಟೀಲ್‌ ಯತ್ನಾಳ್‌ ಪರವಾಗಿ ಅರ್ಜಿ ಸಲ್ಲಿಸಿರುವ ವಕೀಲ ವೆಂಕಟೇಶ್‌ ದಳವಾಯಿ ಅವರು ಅರ್ಜಿ ತಿದ್ದುಪಡಿ ಮಾಡಿರುವುದನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ಅದನ್ನು ಪಕ್ಷಕಾರರ ಜೊತೆ ಹಂಚಿಕೊಳ್ಳುವಂತೆ ನಿರ್ದೇಶಿಸಿತು.

Related Stories

No stories found.
Kannada Bar & Bench
kannada.barandbench.com