ರಾಜ್ಯ ವಿಧಾನಸಭೆಗೆ 2023ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ ಸಿ ರಾಮಮೂರ್ತಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಲು ಕೋರಿ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಮಾರ್ಚ್ 2ರಿಂದ ಪ್ರತಿದಿನ ವಿಚಾರಣೆ ನಡೆಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ತಿಳಿಸಿದೆ.
ಬಿಜೆಪಿ ಕೆ ಸಿ ರಾಮಮೂರ್ತಿ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣಾ ಆಯೋಗ ಪ್ರಕಟಿಸಿರುವ ಫಲಿತಾಂಶವನ್ನು ರದ್ದುಪಡಿಸಬೇಕು ಮತ್ತು 827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ಚುನಾವಣಾ ಆಯೋಗಕ್ಕೆನಿರ್ದೇಶಿಸುವಂತೆ ಸೌಮ್ಯಾ ರೆಡ್ಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಪೀಠವು ಮುಂದುವರಿಸಿತು.
ವಿಚಾರಣೆ ವೇಳೆ ಸಿ ಕೆ ರಾಮಮೂರ್ತಿ ಪರ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧರಿಸಬೇಕಾಗಿರುವ ವಿಚಾರಗಳ (ವಿವಾದಾಂಶ) ಕರಡು ಪ್ರತಿಯನ್ನು ಸಲ್ಲಿಸಲು ತಮಗೆ ಕಾಲಾವಕಾಶ ನೀಡುವಂತೆ ಕೋರಿದರು.
ಅದಕ್ಕೆ ಸೌಮ್ಯಾ ರೆಡ್ಡಿ ಪರ ವಕೀಲರು, ನ್ಯಾಯಾಲಯವು ಹಲವು ಬಾರಿಗೆ ಕಾಲಾವಕಾಶ ನೀಡಿದರೂ ರಾಮಮೂರ್ತಿ ಅವರು ಕರಡು ವಿವಾದಾಂಶಗಳ ಪ್ರತಿ ಸಲ್ಲಿಸದೆ ಕಾಲ ದೂಡುತ್ತಿದ್ದಾರೆ ಎಂದು ಬಲವಾಗಿ ಆಕ್ಷೇಪಿಸಿದರು.
ಇದನ್ನು ಪರಿಗಣಿಸಿದ ಪೀಠವು ಸಿ ಕೆ ರಾಮಮೂರ್ತಿ ಅವರು ಫೆಬ್ರವರಿ 18ರೊಳಗೆ ಕರಡು ವಿವಾದಾಂಶಗಳನ್ನು ಸಲ್ಲಿಸಬೇಕು. ಇದೇ ಅವರಿಗೆ ನೀಡುವ ಕೊನೆ ಅವಕಾಶ. ಇನ್ನೂ ಹೆಚ್ಚು ಕಾಲ ಅರ್ಜಿ ವಿಚಾರಣೆ ಬಾಕಿ ಉಳಿಸಿಕೊಳ್ಳಲು ಆಗುವುದಿಲ್ಲ. ತ್ವರಿತವಾಗಿ ಚುನಾವಣಾ ತಕರಾರು ಅರ್ಜಿಗಳನ್ನು ಇತ್ಯರ್ಥಮಾಡಲು ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಹೀಗಾಗಿ, ಮಾರ್ಚ್ 2ರಿಂದ ಈ ಅರ್ಜಿಯನ್ನು ಪ್ರತಿದಿನ ವಿಚಾರಣೆ ನಡೆಸಿ, ಒಂದು ತಿಂಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.