ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ನಿಯಂತ್ರಣ) ಕಾಯಿದೆ 1989ರ ಸೆಕ್ಷನ್ 15ಎ ಅಡಿ ಸಂತ್ರಸ್ತರು ಅಥವಾ ಅವರನ್ನು ಆಧರಿಸಿರುವವರ ವಾದವನ್ನು ಕಡ್ಡಾಯವಾಗಿ ಆಲಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.
ಸೆಕ್ಷನ್ 15ಎ ಅನ್ನು ಪಾಲಿಸದೇ ಆರೋಪಿಗೆ ಜಾಮೀನು ನೀಡಿದ್ದ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠವು ಬದಿಗೆ ಸರಿಸಿದೆ.
ಆರೋಪಿಗೆ ಜಾಮೀನು, ಖುಲಾಸೆ, ಬಿಡುಗಡೆ, ಪೆರೋಲ್, ಶಿಕ್ಷೆ ವಿಧಿಸುವುದಕ್ಕೂ ಮುನ್ನ ಸೆಕ್ಷನ್ 15ಎ ಪ್ರಕಾರ ಸಂತ್ರಸ್ತರು ಅಥವಾ ಅವರನ್ನು ಆಧರಿಸಿರುವವರನ್ನು ಆಲಿಸುವುದು ಅತಿ ಮುಖ್ಯ. ಅವರ ವಾದವನ್ನು ಕಡ್ಡಾಯವಾಗಿ ಆಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
“ತಾರತಮ್ಯ ಮತ್ತು ಪೂರ್ವಾಗ್ರಹಕ್ಕೆ ಒಳಗಾದ ಸಮುದಾಯದ ಸದಸ್ಯರಿಗೆ ಅನುಕೂಲವಾಗಲು ಇವು ಬಹಳ ಮುಖ್ಯವಾದ ರಕ್ಷಣೆಗಳಾಗಿವೆ ಮತ್ತು ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅರ್ಥೈಸಿಕೊಂಡು ಜಾರಿಗೊಳಿಸಬೇಕು” ಎಂದು ನ್ಯಾಯಾಲಯ ಹೇಳಿದೆ.