ನ್ಯಾಯಾಲಯದ ಆದೇಶ ಅಥವಾ ತೀರ್ಪಿನ ಪ್ರಮಾಣಿತ ಪ್ರತಿಗಳಿಗೆ ಕಾಯುವುದರಿಂದ ಖುಲಾಸೆ ಪ್ರಕರಣಗಳನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ವಿಳಂಬವಾಗುತ್ತಿರಬಹುದು ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಹೇಳಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯಿದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳನ್ನು ಸರಿಯಾಗಿ ಜಾರಿ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಪೀಠ ನಡೆಸಿತು.
ಕಳೆದ ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ 1989ರ ಅಡಿ ದಾಖಲಾಗಿದ್ದ ಪ್ರಕರಣಗಳ ಪೈಕಿ 1,787 ಪ್ರಕರಣಗಳು ಖುಲಾಸೆಯಲ್ಲಿ ಮುಕ್ತಾಯವಾಗಿವೆ. ಈ ಪೈಕಿ ಕೇವಲ 85 ಪ್ರಕರಣಗಳನ್ನು ಮಾತ್ರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಕಳೆದ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ತಿಳಿಸಿತ್ತು. ಆಗ ಪೀಠವು ಅತ್ಯಂತ ಕಡಿಮೆ ಪ್ರಕರಣಗಳನ್ನು ಮಾತ್ರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವುದು ಏಕೆ ಎಂದು ಪ್ರಶ್ನಿಸಿತ್ತು.
ಹೀಗಾಗಿ, ರಾಜ್ಯ ಸರ್ಕಾರವು ಜೂನ್ 9ರಂದು ತನ್ನ ವಿಶೇಷ ಕಾರ್ಯದರ್ಶಿ ಎಚ್ ಕೆ ಜಗದೀಶ್ ಅವರ ಮೂಲಕ ಅಫಿಡವಿಟ್ ಸಲ್ಲಿಸಿದೆ. ಇದರಲ್ಲಿ ಪ್ರಮಾಣಿತ ದಾಖಲೆಗಳನ್ನು ಪಡೆಯದ ಹೊರತು ಮೇಲ್ಮನವಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡಲಾಗದು ಎಂದು ಉಲ್ಲೇಖಿಸಲಾಗಿದೆ.
ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ದಾಖಲಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸುಲಭವಾಗಿ ಖುಲಾಸೆ ತೀರ್ಪಿನ ಸಾಮಾನ್ಯ ಪ್ರತಿಗಳು ಮತ್ತು ಅದರ ಸಂಬಂಧಿ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪೀಠ ಹೇಳಿದೆ.
“ಖುಲಾಸೆ ತೀರ್ಪು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳ ಸಾಮಾನ್ಯ ಪ್ರತಿಗಳು, ನ್ಯಾಯಾಲಯದ ಮುಂದೆ ಮಂಡಿಸಲಾದ ದಾಖಲೆಗಳು ವಾದ ಮಂಡಿಸುವ ಪ್ರಾಸಿಕ್ಯೂಟರ್ ಬಳಿ ಇರುತ್ತವೆ. ಪ್ರಮಾಣಿತ ದಾಖಲೆಗಳನ್ನು ಪಡೆಯದ ಹೊರತು ಮೇಲ್ಮನವಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡಲಾಗದು ಎಂದು ಜಗದೀಶ್ ಹೇಳಿದ್ದಾರೆ. ಹಳೆಯ ಪದ್ಧತಿಯ ರೀತಿಯಲ್ಲಿ ಪ್ರಮಾಣಿತ ಪ್ರತಿಗಳಿಗಾಗಿ ಕಾಯುತ್ತಿರುವುದು ಖುಲಾಸೆಯ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರುವುದಕ್ಕೆ ಕಾರಣವಾಗಿದೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ, ಹಳೆಯ ವಿಧಾನವನ್ನು ಪರಿಪಡಿಸಿಕೊಂಡು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗದ ದಾಖಲೆ ಮತ್ತು ತೀರ್ಪಿನ ಸಾಮಾನ್ಯ ಪ್ರತಿಗಳನ್ನು ಇಟ್ಟುಕೊಂಡು ಅಭಿಪ್ರಾಯ ನೀಡುವುದನ್ನು ಖಾತರಿಪಡಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಅಭಿಪ್ರಾಯ ನೀಡಬೇಕಾದ ಪ್ರಾಸಿಕ್ಯೂಟರ್ ಕೆಲವು ದಾಖಲೆಗಳು ಇಲ್ಲ ಎಂದು ಹೇಳಿದರೆ ಆಗ ಪ್ರಮಾಣಿತ ಪ್ರತಿಗಳಿಗೆ ಮನವಿ ಸಲ್ಲಿಸಬಹುದು ಎಂದು ಪೀಠ ಹೇಳಿದ್ದು, ಸರಿಯಾದ ಮಾರ್ಗಸೂಚಿಗಳನ್ನು ರೂಪಿಸುವಂತೆ ಪ್ರಾಸಿಕ್ಯೂಷನ್ ನಿರ್ದೇಶಕರಿಗೆ ಆದೇಶಿಸಿದೆ.
ಕಳೆದ ವರ್ಷದ ನವೆಂಬರ್ 12ರ ನಂತರ ನಡೆದಿರುವ ಉನ್ನತಮಟ್ಟದ ವಿಚಕ್ಷಣಾ ಸಮಿತಿ, ಜಿಲ್ಲಾ ಮತ್ತು ಉಪ ವಿಭಾಗಗಳ ನಿಗಾ ಸಮಿತಿಗಳ ಸಭೆಯ ವಿವರವನ್ನು ದಾಖಲೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದು, ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿದೆ.