
ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದ ಕಾರಣಕ್ಕಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್‌ಐಆರ್ ಕೋರಿ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ.
ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ವೈಭವ್ ಚೌರಾಸಿಯಾ ಅವರು ಸಂಕ್ಷಿಪ್ತವಾಗಿ ಪ್ರಕರಣ ಆಲಿಸಿ ಸೆಪ್ಟೆಂಬರ್ 10 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಸೋನಿಯಾ ಗಾಂಧಿ ಅವರು 1983ರಲ್ಲಷ್ಟೇ ಭಾರತೀಯ ಪೌರತ್ವ ಪಡೆದರಾದರೂ, 1980ರಲ್ಲಿಯೇ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತು ಎಂದು ವಿಕಾಸ್ ತ್ರಿಪಾಠಿ ಎಂಬುವವರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಸೋನಿಯಾ ಅವರ ಹೆಸರನ್ನು 1980ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಯಿತು. ಆದರೆ 1982ರಲ್ಲಿ ಅಳಿಸಿಹಾಕಲಾಯಿತು. ನಂತರ 1983ರಲ್ಲಿ ಮತ್ತೆ ಸೇರ್ಪಡೆ ಮಾಡಲಾಯಿತು ಎಂದು ತ್ರಿಪಾಠಿ ಆರೋಪಿಸಿದ್ದಾರೆ.
1980ರಲ್ಲಿ ಮತದಾರರ ಪಟ್ಟಿಗೆ ಅವರ ಹೆಸರು ಸೇರ್ಪಡೆ ಮಾಡುವುದಕ್ಕಾಗಿ ಕೆಲವು ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದ್ದು ಸಂಜ್ಞೇಯ ಅಪರಾಧ ಎಸಗಲಾಗಿದೆ. ಆದ್ದರಿಂದ, ಎಫ್‌ಐಆರ್ ದಾಖಲಿಸಲು ಆದೇಶಗಳನ್ನು ಹೊರಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
ವಾದ ಆಲಿಸಿದ ನ್ಯಾಯಾಲಯ ಮುಂದಿನ ವಾರ ಪ್ರಕರಣ ಆಲಿಸಲಾಗುವುದು ಎಂದು ತಿಳಿಸಿದರು. ಸೋನಿಯಾ ಅಥವಾ ದೆಹಲಿ ಪೊಲೀಸರಿಗೆ ನ್ಯಾಯಾಲಯ ಇನ್ನೂ ಔಪಚಾರಿಕ ನೋಟಿಸ್ ನೀಡಿಲ್ಲ.