ಮಂಗಳೂರಿನಲ್ಲಿ ಹೈಕೋರ್ಟ್ ಪೀಠ: ಸರ್ಕಾರದೆದುರು ಪ್ರಸ್ತಾವನೆ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ

ಕರಾವಳಿ ಮತ್ತು ಮಲೆನಾಡು ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಈ ವರ್ಷದುದ್ದಕ್ಕೂ ವ್ಯಾಪಕ ಕೂಗು ಕೇಳಿಬಂದಿತ್ತು.
Suvarna Soudha, Belagavi.
Suvarna Soudha, Belagavi.
Published on

ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್‌ ಪೀಠ ಸ್ಥಾಪನೆ ಸಂಬಂಧ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಪೀಠ ಸ್ಥಾಪನೆ ಸಂಬಂಧ ಮೂಡಬಿದ್ರೆಯ ಬಿಜೆಪಿ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಲಿಖಿತವಾಗಿ ಉತ್ತರಿಸಿದ್ದರು.

Also Read
ಸುಪ್ರೀಂ ಕೋರ್ಟ್ ಪ್ರಾದೇಶಿಕ ಪೀಠ ಸ್ಥಾಪನೆ: ಸಂಸದೀಯ ಸಮಿತಿ ಶಿಫಾರಸು ಒಪ್ಪಿಕೊಂಡ ಕಾನೂನು ಸಚಿವಾಲಯ

ಮಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಮಂಗಳೂರು ಜೈಲು ಕಾರ್ಯಾಲಯ ಸ್ಥಳಾಂತರಗೊಳ್ಳಲಿರುವ ಕಾರಣ ಆ ಕಾರ್ಯಾಲಯದ ವ್ಯಾಪ್ತಿಯಲ್ಲಿನ ಅಂದಾಜು ಐದು ಎಕರೆ ಸ್ಥಳದಲ್ಲಿ ಪೀಠ ಸ್ಥಾಪನೆಯ ಪ್ರಸ್ತಾವ ಸರ್ಕಾರದ ಮುಂದಿದೆಯೇ? ಪೀಠ ಸ್ಥಾಪಿಸಿದಲ್ಲಿ ಮೂಲ ಸೌರ್ಕಯ ಸೇರಿದಂತೆ ಆಧುನಿಕ ವ್ಯವಸ್ಥೆ ಸೇರಿದಂತೆ ಆ ಪ್ರದೇಶ ವ್ಯಾಪ್ತಿಯ ಹಲವು ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲ ಒದಗಿಸಿಕೊಡುವಲ್ಲಿ ಸರ್ಕಾರದ ಕ್ರಮಗಳು ಯಾವುವು ಎಂದು ಅವರು ಪ್ರಶ್ನಿಸಿದ್ದರು.

Also Read
ಧಾರವಾಡ, ಕಲಬುರ್ಗಿಗಳಲ್ಲಿ ಹೈಕೋರ್ಟ್ ಪೀಠಗಳ ಸ್ಥಾಪನೆ ಪ್ರಶ್ನಿಸಿದ್ದ ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ, ಮಡಿಕೇರಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಈ ವರ್ಷದುದ್ದಕ್ಕೂ ವ್ಯಾಪಕ ಕೂಗು ಕೇಳಿಬಂದಿತ್ತು.

ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಐವಾನ್‌ ಡಿಸೋಜಾ ನೇತೃತ್ವದ ಸರ್ವಪಕ್ಷಗಳ ಜನಪ್ರತಿನಿಧಗಳ ನಿಯೋಗ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಮಂಗಳೂರು ವಕೀಲರ ಸಂಘ, ಕರಾವಳಿ, ಮಲೆನಾಡು ಭಾಗದ ವಿವಿಧ ತಾಲೂಕುಗಳ ವಕೀಲರ ಸಂಘಗಳು ಕೂಡ ಈ ನಿಟ್ಟಿನಲ್ಲಿ ಹಲವು ಪ್ರಯತ್ನ ಮಾಡಿದ್ದವು.

Kannada Bar & Bench
kannada.barandbench.com