
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಿರುವ ಅಲ್ಲಮಪ್ರಭು ಸ್ವಾಮಿ ಮತ್ತು ವಿಠ್ಠಲ ದೇವಸ್ಥಾನಗಳ ಸ್ಥಳಾಂತರ ವಿಚಾರದಲ್ಲಿ ಸ್ಥಳೀಯರ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಸೂಚಿಸಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಿದ್ಯಾರ್ಥಿ ನಿಖಿಲ್ ವಿಠ್ಠಲ ಪಾಟೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ನಡೆಸಿತು.
“ನ್ಯಾಯಾಲಯದ ನಿರ್ದೇಶನದಂತೆ ಮುಖ್ಯ ಕಾರ್ಯದರ್ಶಿ ನೇಮಿಸಿದ್ದ ತಜ್ಞರ ಸಮಿತಿಯು ಡಿಸೆಂಬರ್ 13ರಂದು ವರದಿ ಸಲ್ಲಿಸಿದ್ದು, ಅಲ್ಲಮಪ್ರಭು ಸ್ವಾಮಿ ಮತ್ತು ವಿಠ್ಠಲ ದೇವಸ್ಥಾನಗಳು ಜಲಾವೃತಗೊಂಡಿರುವುದರಿಂದ ಸಮೀಕ್ಷೆ ನಡೆಸಲಾಗದು ಎಂಬ ಅಭಿಪ್ರಾಯವನ್ನು ಒಳಗೊಂಡ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಏಪ್ರಿಲ್ ಸಂದರ್ಭಕ್ಕೆ ನೀರು ಖಾಲಿಯಾಗಲಿದ್ದು, ಆಗ ತಜ್ಞರ ಸಮಿತಿ ಅಲ್ಲಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಹೊಸ ವರದಿ ಸಲ್ಲಿಸಬೇಕು” ಎಂದು ಆದೇಶಿಸಿ ಹೈಕೋರ್ಟ್ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಎರಡೂ ದೇವಸ್ಥಾನಗಳನ್ನು ಸ್ಥಳಾಂತರಿಸಬೇಕು ಎಂದು ಅರ್ಜಿದಾರರು ಕೋರುತ್ತಿದ್ದಾರೆ. ಇದರಿಂದ ಖಂಡಿತವಾಗಿಯೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ. ದೇವಸ್ಥಾನ ಮುಳುಗಡೆಯಾದಾಗಲೂ ಸಾಕಷ್ಟು ಜನರು ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಇದರೊಂದಿಗೆ ಮೂಢನಂಬಿಕೆಯು ತಳುಕು ಹಾಕಿಕೊಂಡಿದೆ. ಸ್ಥಳಾಂತರದ ವಿಚಾರವನ್ನು ಜಿಲ್ಲಾಡಳಿತದ ದೃಷ್ಟಿಯಿಂದಲೂ ನೋಡಬೇಕಿದೆ” ಎಂದರು.
ಆಗ ನ್ಯಾ. ಅರುಣ್ ಅವರು “ತಜ್ಞರ ವರದಿಯಲ್ಲಿ ನೀರು ಕಡಿಮೆಯಾದ ಬಳಿಕ ಸಮೀಕ್ಷೆ ನಡೆಸಬಹುದು ಎಂದು ಹೇಳಲಾಗಿದೆ. ಸ್ಥಳೀಯರಿಗೆ ದೇವಸ್ಥಾನ ಅಲ್ಲೇ ಇರಬೇಕು ಎಂಬ ಅಭಿಪ್ರಾಯವಿದೆಯೇ ಅಥವಾ ಬೇರೆ ಕಡೆ ಸ್ಥಳಾಂತರಿಸಬೇಕು ಎಂಬ ಅಭಿಪ್ರಾಯವಿದೆಯೇ ಎಂಬುದನ್ನು ಸರ್ಕಾರ ತಿಳಿಸಬೇಕು. ಸ್ಥಳಾಂತರವು ಜನಮತಕ್ಕೆ ಪೂರಕವಾಗಿರಬೇಕು” ಎಂದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಪ್ರಾಚೀನ ಕಾಲದ ದೇವಸ್ಥಾನವನ್ನು ಸಂರಕ್ಷಿಸಬೇಕು ಎಂಬುದು ಅರ್ಜಿದಾರರ ಕಳಕಳಿಯಾಗಿದೆ. ಇದನ್ನು ರಾಜ್ಯ ಸರ್ಕಾರ ಸಂರಕ್ಷಿಸದಿದ್ದರೆ ಅದು ನಾಶವಾಗಲಿದೆ. ಈ ನಿಟ್ಟಿನಲ್ಲಿ ಅದರ ರಕ್ಷಣೆ ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಹಿಡಕಲ್ ಜಲಾಶಯ ನಿರ್ಮಿಸುವಾಗಲೇ ಜನ ವಸತಿಯನ್ನು ಸ್ಥಳಾಂತರಿಸಿದಂತೆ ದೇವಾಲಯವನ್ನು ಸ್ಥಳಾಂತರಿಸಬೇಕಿತ್ತು” ಎಂದರು.