ಸಾರಿಗೆ ಮುಷ್ಕರ: ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಹೈಕೋರ್ಟ್‌ ಸಿಡಿಮಿಡಿ, ಬಂಧನದ ಎಚ್ಚರಿಕೆ; ಮುಷ್ಕರ ವಾಪಸ್

“ಜನರ ಹಿತಾಸಕ್ತಿಯನ್ನು ಒತ್ತೆ ಇಟ್ಟು ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಲಾಗದು. ಆದರೆ, ಒಕ್ಕೂಟ ಮಾಡುತ್ತಿರುವುದು ಅದನ್ನೇ” ಎಂದು ನ್ಯಾಯಾಲಯ ಕಿಡಿಕಾರಿತು.
Chief Justice Vibhu Bakhru & Justice CM Joshi
Chief Justice Vibhu Bakhru & Justice CM Joshi
Published on

ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಪದಾಧಿಕಾರಿಗಳನ್ನು ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ (ಎಸ್ಮಾ) ಅಡಿ ಬಂಧಿಸಲು ಪೊಲೀಸರಿಗೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಎಚ್ಚರಿಸಿದ ಬೆನ್ನಿಗೇ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಕೆಲಸಗಾರರ ಒಕ್ಕೂಟವು ಮುಷ್ಕರ ಸ್ಥಗಿತಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಆಕ್ಷೇಪಿಸಿ ಬೆಂಗಳೂರಿನ ಜೆ ಸುನೀಲ್‌ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

“ರಾಜ್ಯ ಸರ್ಕಾರವು ಜುಲೈ 17ರಂದು ಎಸ್ಮಾ ಜಾರಿ ಮಾಡಿದ್ದು, ಕಾಯಿದೆಯ ನಿಬಂಧನೆಯ ಪ್ರಕಾರ ಯೂನಿಯನ್‌ ಕರೆ ನೀಡಿರುವ ಮುಷ್ಕರವು ಅಕ್ರಮವಾಗಿದೆ. ಹೀಗಾಗಿ, ದಂಡನೀಯ ಕ್ರಮಕೈಗೊಳ್ಳಬಹುದಾಗಿದೆ. ನಿನ್ನೆ ಮುಷ್ಕರಕ್ಕೆ ತಡೆ ನೀಡಿರುವ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

“ಸಂಧಾನಕ್ಕೆ ಒಳಪಟ್ಟು ಮುಷ್ಕರವನ್ನು ಅಮಾನತುಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಕೆಲಸಗಾರರ ಒಕ್ಕೂಟ (ಐಐಟಿಯುಸಿ) ಪರ ವಕೀಲರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ರಾಜ್ಯ ರಸ್ತೆ ನೌಕರರ ಮಹಾಮಂಡಳಿ; ಉಳಿದ ಯೂನಿಯನ್‌ಗಳನ್ನು ಪ್ರತ್ಯೇಕವಾಗಿ ಪಕ್ಷಕಾರರನ್ನಾಗಿಸಲು ಅರ್ಜಿದಾರರಿಗೆ ಆದೇಶಿಸಿರುವ ನ್ಯಾಯಾಲಯವು ಇಂದಿನ ಆದೇಶವನ್ನು ಅವರಿಗೆ ತಲುಪಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ಪೀಠವು “ಮುಷ್ಕರಕ್ಕೆ ಕರೆ ನೀಡಿರುವ ಯೂನಿಯನ್‌ಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಎಸ್ಮಾ ಕಾಯಿದೆಯ ಪರಿಣಾಮಗಳನ್ನು ಓದಿ. ಯೂನಿಯನ್‌ಗಳು ನಡೆಸುತ್ತಿರುವ ಮುಷ್ಕರ ಕಾನೂನುಬಾಹಿರವಾಗಿದೆ. ಎಸ್ಮಾ ಅಡಿ ಮುಷ್ಕರಕ್ಕೆ ಬೆಂಬಲ ನೀಡುವ ಯಾರನ್ನು ಬೇಕಾದರೂ ಪೊಲೀಸರು ಬಂಧಿಸುವ ಅಧಿಕಾರ ಹೊಂದಲಿದ್ದಾರೆ. ಸದ್ಯ, ಮುಷ್ಕರವು ಕಾನೂನಿನ ಪ್ರಕಾರ ಅಕ್ರಮವಾಗಿದೆ. ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದಕ್ಕೆ ಯೂನಿಯನ್‌ಗಳ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕೈಗೊಳ್ಳಬೇಕಾಗುತ್ತದೆ. ನಾಳೆ ಈ ಮುಷ್ಕರ ನಿಲ್ಲಬೇಕು. ಎಸ್ಮಾ ಕಾಯಿದೆಯ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ ಸೆಕ್ಷನ್‌ 8ರ ಅಡಿ ಪೊಲೀಸರು ಬಂಧಿಸುವ ಅಧಿಕಾರ ಹೊಂದಲಿದ್ದು, ಪದಾಧಿಕಾರಿಗಳನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗುವುದು” ಎಂದು ಮೌಖಿಕವಾಗಿ ಕಟುವಾಗಿ ನ್ಯಾಯಾಲಯ ನುಡಿಯಿತು.

“ನಿಮ್ಮ ಬೇಡಿಕೆಗಳನ್ನು ಸರ್ಕಾರದ ಜೊತೆ ಚರ್ಚಿಸಬಹುದು. ಆದರೆ, ಈ ರೀತಿಯಲ್ಲಿ ಜನರಿಗೆ ಸಮಸ್ಯೆ ಉಂಟು ಮಾಡಲಾಗದು. ಜನರ ಹಿತಾಸಕ್ತಿಯನ್ನು ಒತ್ತೆ ಇಟ್ಟು ನಿಮ್ಮ ಬೇಡಿಕೆ ಈಡೇರಿಸಿಕೊಳ್ಳಲಾಗದು. ಆದರೆ, ಒಕ್ಕೂಟ ಮಾಡುತ್ತಿರುವುದು ಅದನ್ನೇ” ಎಂದು ನ್ಯಾಯಾಲಯ ಕಿಡಿಕಾರಿತು.

Also Read
ಒಂದು ದಿನದ ಮಟ್ಟಿಗೆ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಹೈಕೋರ್ಟ್‌ ತಡೆ; ಸಿಎಂ ಸಭೆ ನಿರ್ಣಯ ಸಲ್ಲಿಸಲು ನಿರ್ದೇಶನ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಒಟ್ಟು ನಾಲ್ಕು ನಿಗಮಗಳಿದ್ದು, ಈ ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ ಮೂರು ನಿಗಮಗಳ ಸಿಬ್ಬಂದಿಯು ಮುಷ್ಕರ ಮುಂದುವರಿಸಿದ್ದಾರೆ. ಸಿಬ್ಬಂದಿಯ ಕೊರತೆಯಿಂದ ಶೇ.30-40 ಬಸ್‌ಗಳು ಮಾತ್ರ ಓಡಾಡುತ್ತಿವೆ. ಮುಖ್ಯಮಂತ್ರಿಯು ಸಾರಿಗೆ ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಭೆ ನಡೆಸಿದ್ದಾರೆ. ಕೈಗಾರಿಕಾ ವಿವಾದ ಇತ್ಯರ್ಥ ಕಾಯಿದೆ ಅಡಿ ಸಾರಿಗೆ ಆಯುಕ್ತರ ಜೊತೆ ಸಂಬಂಧಿತ ಸಂಧಾನ ಸಭೆ ನಡೆಸಲಾಗಿದೆ. ಇದರ ಮುಂದಿನ ಸಭೆಯು ಆಗಸ್ಟ್‌ 7ಕ್ಕೆ ನಿಗದಿಯಾಗಿದೆ” ಎಂದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಕೆಲಸಗಾರರ ಒಕ್ಕೂಟದ ಪರ ವಕೀಲರು “ಸೋಮವಾರ ಸಂಜೆ ಮುಷ್ಕರಕ್ಕೆ ತಡೆ ಕೋರಿರುವ ಅರ್ಜಿ ಕೊಟ್ಟಿದ್ದಾರೆ. ಇದಕ್ಕೆ ವಕಾಲತ್ತು ಹಾಕಲಾಗಿದೆ. ಬೆಂಗಳೂರಿನಲ್ಲಿ ಶೇ. 90ರಷ್ಟು ಬಿಎಂಟಿಸಿ ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಸಂಧಾನ ನಡೆಯುತ್ತಿದೆ. ಮುಷ್ಕರವನ್ನು ನಿಲ್ಲಿಸುತ್ತಿದ್ದೇವೆ” ಎಂದು ಪೀಠಕ್ಕೆ ವಾಗ್ದಾನ ನೀಡಿದರು.

Kannada Bar & Bench
kannada.barandbench.com