ಕೇಂದ್ರದ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯಿದೆ ಸೆಕ್ಷನ್‌ 13 (3)ಕ್ಕೆ ಮಧ್ಯಂತರ ತಡೆ ವಿಧಿಸಿದ ಹೈಕೋರ್ಟ್‌

“ಕಾಯಿದೆಯ ಸೆಕ್ಷನ್‌ 13(3) ರ ಅನ್ವಯ ಮ್ಯಾಜಿಸ್ಟ್ರೇಟ್‌ ಮುಂದೆ ಪರಿಗಣನೆಗೆ ಬಾಕಿ ಇರುವ ಅರ್ಜಿಗಳ ಕುರಿತು ಸದ್ಯ ಗೊಂದಲ ಇರುವುದರಿಂದ ಸರ್ಕಾರ ಆಕ್ಷೇಪಣೆ ಸಲ್ಲಿಸುವವರೆಗೆ ಅಥವಾ ಮುಂದಿನ ವಿಚಾರಣೆಯವರೆಗೆ ತಡೆ ನೀಡಲಾಗಿದೆ” ಎಂದಿರುವ ನ್ಯಾಯಾಲಯ.
AAB
AAB

ಮರಣ ಅಥವಾ ಜನನ ದಿನಾಂಕ ಪರಿಶೀಲಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ ಮತ್ತು ಮುನ್ಸಿಫ್‌ ನ್ಯಾಯಗಳಿಂದ ಕಸಿದು ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡಿರುವ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯಿದೆ 2023ರ ಸೆಕ್ಷನ್‌ 13 (3)ಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯಿದೆ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಕಾಯಿದೆಯ ಸೆಕ್ಷನ್‌ 13(3)ರ ಅನ್ವಯ ಮ್ಯಾಜಿಸ್ಟ್ರೇಟ್‌ ಮುಂದೆ ಪರಿಗಣನೆಗೆ ಬಾಕಿ ಇರುವ ಅರ್ಜಿಗಳ ಕುರಿತು ಸದ್ಯ ಗೊಂದಲ ಇರುವುದರಿಂದ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸುವವರೆಗೆ ಅಥವಾ ಮುಂದಿನ ವಿಚಾರಣೆಯವರೆಗೆ ಸೆಕ್ಷನ್‌ 13(3)ಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿರುವುದರಿಂದ ಪ್ರಕರಣದ ವಿಚಾರಣೆ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Also Read
ಸಹಾಯಕ ಆಯುಕ್ತರಿಗೆ ಜನನ, ಮರಣ ನೋಂದಣಿ ಅಧಿಕಾರ: ಕೇಂದ್ರ ಸರ್ಕಾರದ ತಿದ್ದುಪಡಿ ಕಾಯಿದೆಗೆ ಎಎಬಿ ವಿರೋಧ

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಡಿ ಆರ್‌ ರವಿಶಂಕರ್‌ ಮತ್ತು ಪಿ ಪಿ ಹೆಗ್ಡೆ ಅವರು “ಕಾಯಿದೆಯ ಸೆಕ್ಷನ್‌ 13(3) ಕ್ಕೆ ತಿದ್ದುಪಡಿ ಮಾಡುವ ಮೂಲಕ ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡಲಾಗಿದೆ. ಆದರೆ, ಸಿಆರ್‌ಪಿಸಿ ಪ್ರಕಾರ ತನಿಖೆ ನಡೆಸುವ ನ್ಯಾಯಾಂಗ ಅಧಿಕಾರ ಅವರಿಗೆ ಇರುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ. ಸಿಆರ್‌ಪಿಸಿ ಸೆಕ್ಷನ್‌ 3, 4 ಮತ್ತು 5 ಅನ್ನು ಉಲ್ಲೇಖಿಸಿದ ಅರ್ಜಿದಾರರು ಸಿಆರ್‌ಪಿಸಿಯಲ್ಲಿ ಚಾಪ್ಟರ್‌ 10 ಮತ್ತು 11 ರಲ್ಲಿ ಕಾರ್ಯಕಾರಿ ಮ್ಯಾಜಿಸ್ಟ್ರೇಟ್‌ಗೆ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವುದಕ್ಕೆ ಸಂಬಂಧಿಸಿದ ಅಧಿಕಾರ ಮಾತ್ರ ನೀಡಲಾಗಿದೆ” ಎಂದು ವಾದಿಸಿದರು.

ಅರ್ಜಿಯ ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com