ಸಹಾಯಕ ಆಯುಕ್ತರಿಗೆ ಜನನ, ಮರಣ ನೋಂದಣಿ ಅಧಿಕಾರ: ಕೇಂದ್ರ ಸರ್ಕಾರದ ತಿದ್ದುಪಡಿ ಕಾಯಿದೆಗೆ ಎಎಬಿ ವಿರೋಧ

ಕಾಯಿದೆಗೆ ತಿದ್ದುಪಡಿ ಮಾಡಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾಗೆ ಅದನ್ನು ಹಿಂಪಡೆಯುವಂತೆ ಕೋರಲಾಗಿದ್ದು, ಈ ಹಿಂದೆ ಇದ್ದಂತೆ ನ್ಯಾಯಾಲಯಗಳ ಮೂಲಕ ಸರ್ಟಿಫಿಕೇಟ್‌ ಪಡೆಯುವ ಕ್ರಮವನ್ನು ಮರಳಿ ಜಾರಿಗೊಳಿಸುವಂತೆ ಎಎಬಿ ಮನವಿ ಮಾಡಿದೆ.
AAB
AAB
Published on

ಜನನ ಮತ್ತು ಮರಣ ನೋಂದಣಿ ಕಾಯಿದೆಗೆ ಆಗಸ್ಟ್‌ನಲ್ಲಿ ತಿದ್ದುಪಡಿ ಮಾಡಿ ಮರಣ ಅಥವಾ ಜನನ ದಿನಾಂಕ ಪರಿಶೀಲಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ ಮತ್ತು ಮುನ್ಸಿಫ್‌ ನ್ಯಾಯಗಳಿಂದ ಕಸಿದು ಕಂದಾಯ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಬೆಂಗಳೂರು ವಕೀಲರ ಸಂಘವು (ಎಎಬಿ) ತೀವ್ರ ವಿರೋಧ ದಾಖಲಿಸಿದೆ.

ಕಾಯಿದೆಗೆ ತಿದ್ದುಪಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಅದನ್ನು ಹಿಂಪಡೆಯುವಂತೆ ಕೋರಲಾಗಿದ್ದು, ಈ ಹಿಂದೆ ಇದ್ದಂತೆ ನ್ಯಾಯಾಲಯಗಳ ಮೂಲಕ ಸರ್ಟಿಫಿಕೇಟ್‌ ಪಡೆಯುವ ಕ್ರಮವನ್ನು ಮರಳಿ ಜಾರಿಗಿಳಿಸುವಂತೆ ಎಎಬಿ ಮನವಿ ಮಾಡಿದೆ.

ಕಳೆದ ತಿಂಗಳು ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ಜನನ ಅಥವಾ ಮರಣ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಸಹಾಯಕ ಆಯುಕ್ತರು ಅಥವಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅಥವಾ ಕಂದಾಯ ನ್ಯಾಯಾಲಯಗಳಿಗೆ ನೀಡಲಾಗಿದೆ. ಕಳೆದು ಎರಡು ದಶಕಗಳಿಂದ ಕಂದಾಯ ಇಲಾಖೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಈ ನ್ಯಾಯಾಲಯಗಳು ನ್ಯಾಯದಾನ ಮಾಡುತ್ತವೆ ಎಂಬ ಯಾವುದೇ ಗ್ಯಾರಂಟಿ ಇಲ್ಲವಾಗಿದೆ. ವಾಸ್ತವಿಕ ವಿಚಾರಗಳನ್ನು ಆಧರಿಸಿ ಸೂಕ್ತವಾದ ಸರ್ಟಿಫಿಕೇಟ್‌ಗಳನ್ನು ನೀಡುತ್ತವೆ ಎಂಬ ವಿಶ್ವಾಸ ಇಲ್ಲವಾಗಿದೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ತೀರ್ಪು ಬರೆಯುವ ವಿಚಾರದಲ್ಲಿ ಭ್ರಷ್ಟಾಚಾರಕ್ಕೆ ಸಿಲುಕಿ ಬೆಂಗಳೂರಿನಲ್ಲೇ ಮೂವರು ಜಿಲ್ಲಾ ದಂಡಾಧಿಕಾರಿಗಳು ಬಂಧಿಸಲ್ಪಟ್ಟಿದ್ದಾರೆ. ಕಂದಾಯ ನ್ಯಾಯಾಲಯಗಳಲ್ಲಿನ ಪ್ರತಿಯೊಂದು ಆದೇಶವನ್ನು ಖರೀದಿಸುವ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟು ಹೋಗಿದೆ. “ಭೂಮಿ ಯಾವುದೆಂದು ತೋರಿಸಿ, ಆ ಆದೇಶದ ದರವನ್ನು ನಾನು ಹೇಳುತ್ತೇನೆ” ಎಂಬ ಮಾತು ಜನಜನಿತವಾಗಿದೆ. ಕಂದಾಯ ನ್ಯಾಯಾಲಯಗಳಲ್ಲಿ ಪ್ರಾಮಾಣಿಕತೆ ಇಲ್ಲ. ಇದು ಕಂದಾಯ ನ್ಯಾಯಾಲಯಗಳ ಆಘಾತಕಾರಿ ವಾಸ್ತವವಾಗಿದ್ದು, ಈ ನ್ಯಾಯಾಲಯಗಳಿಗೆ ಜನನ ಮತ್ತು ಮರಣ ತನಿಖೆ ನಡೆಸುವ ಹಕ್ಕು ನೀಡುವುದು ಅತ್ಯಂತ ಅಪಾಯಕಾರಿ ನಡೆ ಮತ್ತು ಇದು ಭಾರತದ ಹಿತಾಸಕ್ತಿಗೆ ವಿರುದ್ಧ. ಸಹಾಯಕ ಆಯುಕ್ತರೂ ರಾಜಕೀಯ ಅಥವಾ ರಾಜಕಾರಣಿಗಳಿಗೆ ಪ್ರಭಾವಕ್ಕೆ ಗುರಿಯಾಗಿ, ರಾಜಕಾರಣಿ ಅಥವಾ ಸಚಿವರ ಆದೇಶಕ್ಕೆ ಅನುಗುಣವಾಗಿ ಆದೇಶ ಮಾಡುತ್ತಾರೆ ಎಂದು ಆಕ್ಷೇಪಿಸಲಾಗಿದೆ.

Also Read
ಜನನ ಮತ್ತು ಮರಣ ನೋಂದಣಿ ತಿದ್ದುಪಡಿ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಒಂದು ವರ್ಷದ ಒಳಗೆ ಮರಣ ಅಥವಾ ಜನನವನ್ನು ನೋಂದಾಯಿಸದಿದ್ದರೆ ಅದನ್ನು ನೋಂದಾಯಿಸಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಇದು 1970ರಿಂದ ಚಲಾವಣೆಯಲ್ಲಿರುವ ಪದ್ಧತಿಯಾಗಿದೆ. ಜನನದ ವರ್ಷ, ಸ್ಥಳಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆದು, ಗ್ರಾಮದಲ್ಲಿ ಲಭ್ಯವಾಗುವ ಸಾಕ್ಷ್ಯ ಆಧರಿಸಿ, ಮರಣ ಅಥವಾ ಜನನ ಪ್ರಮಾಣ ಪತ್ರವನ್ನು ನ್ಯಾಯಾಂಗ ಆದೇಶದ ಮೂಲಕ ನ್ಯಾಯಾಲಯಗಳು ನೀಡುತ್ತವೆ.

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ಷಾಂತರ ವಲಸಿಗರು ತಾವು ಭಾರತದಲ್ಲಿ ಜನಿಸಿದ್ದು ಎಂದು ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಸರ್ಟಿಫಿಕೇಟ್‌ ಪಡೆಯುವುದಕ್ಕೆ ಅನುಕೂಲವಾಗಲಿದೆ. ಇದು ರಾಷ್ಟ್ರೀಯ ಪೌರತ್ವ ನೋಂದಣಿ ಆಶಯಕ್ಕೆ ವಿರುದ್ಧವಾಗಿದ್ದು, ಕಂದಾಯ ಇಲಾಖೆಗಳಿಂದ ಅಕ್ರಮ ವಲಸಿಗರು ನಕಲಿ ಸರ್ಟಿಫಿಕೇಟ್‌ಗಳನ್ನು ಪಡೆಯಬಹುದಾಗಿದೆ. ಇದು ನಕಲಿ ಪೌರತ್ವಕ್ಕೆ ನಾಂದಿ ಹಾಡಲಿದ್ದು, ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com