ಲೋಕಸಭಾ ಚುನಾವಣೆ ವೇಳೆ ₹4.8 ಕೋಟಿ ಜಪ್ತಿ: ಸಂಸದ ಸುಧಾಕರ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಐಎಎಸ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌ಗೆ ಸುಧಾಕರ್‌ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ಸಹಾಯ ಮಾಡುವಂತೆ ವಾಟ್ಸಪ್‌ ಕರೆ, ಮೆಸೇಜ್‌ ಮಾಡಿದ್ಧಾರೆ. ಆಗ ಪತ್ತೆಯಾಗಿದ್ದ ಹಣವನ್ನು ಮತದಾರರಿಗೆ ಲಂಚ ನೀಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿತ್ತು.
MP Dr. K Sudhakar and Karnataka HC
MP Dr. K Sudhakar and Karnataka HC
Published on

ಕಳೆದ ಲೋಕಸಭಾ ಚುನಾವಣೆ ವೇಳೆ ಮಾದಾವರದ ಬಳಿ ₹4.8 ಕೋಟಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಕೆ ಸುಧಾಕರ್‌ ವಿರುದ್ಧದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸಿ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ತಮ್ಮ ವಿರುದ್ಧದ ಎಫ್‌ಐಆರ್‌ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಡಾ.ಕೆ ಸುಧಾಕರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Justice M I Arun
Justice M I Arun

ಪ್ರಕರಣದ ಹಿನ್ನೆಲೆ: ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಗೆ ಚುನಾವಣಾ ವಿಚಕ್ಷಣಾ ತಂಡದ ಸದಸ್ಯ ದಶರಥ್‌ ವಿ.ಕುಂಬಾರ್‌ ದೂರು ನೀಡಿ, 2024ರ ಸಂಸತ್‌ ಚುನಾವಣೆ ವೇಳೆ ಏಪ್ರಿಲ್‌ 25ರಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಅಧಿಕಾರಿ ಮುನೀಶ್‌ ಮೌದ್ಗಿಲ್‌ ಅವರ ಮೊಬೈಲ್‌ಗೆ ₹10 ಕೋಟಿ ಹಣವನ್ನು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಇಡಲಾಗಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಮಾದಾವರ ಗ್ರಾಮದ ಗೋವಿಂದಪ್ಪ ಎಂಬುವರ ಮನೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾಗ ₹4.8 ಕೋಟಿ ಹಣ ಜಪ್ತಿ ಮಾಡಲಾಯಿತು ಎಂದು ತಿಳಿಸಿದ್ದರು.

Also Read
ಲೋಕಸಭಾ ಚುನಾವಣೆ ವೇಳೆ ₹4.8 ಕೋಟಿ ಜಪ್ತಿ: ಬಿಜೆಪಿ ಸಂಸದ ಸುಧಾಕರ್‌ ವಿರುದ್ಧ ಪ್ರಕರಣ ಪರಿಗಣನೆಗೆ ಹೈಕೋರ್ಟ್‌ ತಡೆ

ಅಲ್ಲದೇ, ಮುನೀಶ್‌ ಮೌದ್ಗಿಲ್‌ ಅವರಿಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ ಸುಧಾಕರ್‌ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ ಸಹಾಯ ಮಾಡುವಂತೆ ವಾಟ್ಸಪ್‌ ಕರೆ, ಮೆಸೇಜ್‌ ಮಾಡಿದ್ಧಾರೆ. ಆಗ ಪತ್ತೆಯಾಗಿದ್ದ ಹಣವನ್ನು ಮತದಾರರಿಗೆ ಲಂಚ ನೀಡಲು ಮುಂದಾಗಿದ್ದರು ಎಂದು ಆರೋಪಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಕೆ ಸುಧಾಕರ್‌, ಗೋವಿಂದಪ್ಪ ಮತ್ತಿತರ ವಿರುದ್ಧ ಪೊಲೀಸರು, ಭಾರತೀಯ ದಂಡ ಸಂಹಿತೆ ಸೆಕ್ಷನ್‌ 171ಇ, (ಚುನಾವಣೆಯಲ್ಲಿ ಲಂಚ)  171ಎಫ್‌ (ಚುನಾವಣೆಯಲ್ಲಿ ಅನುಚಿತ ಪ್ರಭಾವ ಬೀರುವುದು), 171 ಬಿ (ಚುನಾವಣೆಯಲ್ಲಿ ಲಂಚ, ಉಡುಗೊರೆ ನೀಡಿ ಮತದಾರರ ಮೇಲೆ ಪ್ರಭಾವ ಬೀರುವುದು) , 171ಸಿ (ಮತ ಚಲಾವಣೆ ಹಕ್ಕಿನಲ್ಲಿ ಮಧ್ಯಪ್ರವೇಶ ಮಾಡುವುದು) ಮತ್ತು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123ರಡಿ (ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಸುವುದು) ಆರೋಪದ ಮೇಲೆ ಎಫ್‌ಐಆರ್‌ ದಾಖಲು ಮಾಡಿದ್ದರು. ನಂತರ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಇದರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದ ಸಂಸದ ಸುಧಾಕರ್‌ ಎಫ್‌ಐಆರ್‌ ಮತ್ತು ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.

Kannada Bar & Bench
kannada.barandbench.com