
ಪೋಕ್ಸೊ ಆರೋಪದ ಪ್ರಕರಣಗಳಲ್ಲಿ ಗಣನೀಯ ಪುರಾವೆಗಳು ಲಭ್ಯವಿದ್ದರೆ, ಪ್ರಾಸಿಕ್ಯೂಷನ್ ವೈದ್ಯಕೀಯ ಪರೀಕ್ಷೆಯ ಕೊರತೆಯನ್ನು ಮುಂದುಮಾಡಿ ಪ್ರಕರಣವನ್ನು ಅಮಾನ್ಯಗೊಳಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಪ್ರಕರಣವೊಂದರಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಎಂಟು ಪುಟ್ಟ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಹಾಯಕ ಪ್ರಾಧ್ಯಾಪಕರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಿರಾಕರಿಸಿದೆ.
‘ಪೋಕ್ಸೊ ಕಾಯಿದೆ ಅಡಿ ವಿಚಾರಣೆಗೆ ಅರ್ಹವಾದ ಒಂದೇ ಒಂದು ವಿಶ್ವಾಸಾರ್ಹ ವಿವರಣೆ ಇದ್ದರೂ ಸಾಕು ಪ್ರಕರಣವನ್ನು ನಿಸ್ಸಂಶಯವಾಗಿ ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬಹುದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಐಐಎಸ್‌ಸಿಯಲ್ಲಿ ಬೋಧನೆ ಮಾಡುತ್ತಿರುವ 44 ವರ್ಷದ ಸಹಾಯಕ ಪ್ರಾಧ್ಯಾಪಕರೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿರುವ ಪೀಠವು ಪ್ರಕರಣದಲ್ಲಿ ಆರೋಪಿಯ ಅನುಚಿತ ವರ್ತನೆಯ ಬಗ್ಗೆ ಎಂಟು ಮಕ್ಕಳು ಏಕರೂಪದ ಹೇಳಿಕೆಗಳನ್ನು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. “ಈ ಹೇಳಿಕೆಗಳು ಇಡೀ ಪ್ರಕರಣದ ಪೂರ್ಣ ವಿಚಾರಣೆಯ ಅಗತ್ಯವನ್ನು ಒತ್ತಿಹೇಳುತ್ತದೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಕರಣದ ಹಿನ್ನೆಲೆ: ಆರೋಪಿಯ ಮಗಳ ಹುಟ್ಟುಹಬ್ಬವನ್ನು ಅವರ ಮನೆಯಲ್ಲಿ 2018ರ ಸೆಪ್ಟೆಂಬರ್ 30ರಂದು ಆಚರಿಸಲಾಗಿತ್ತು. ಅಂದು ನಡೆದ ಪಾರ್ಟಿಯಲ್ಲಿ ಕತ್ತಲೆ ಕೋಣೆಯಲ್ಲಿ ʼಘೋಸ್ಟ್ ಹೌಸ್ʼ (ಭೂತದ ಮನೆ) ಆಟ ಆಯೋಜಿಸಲಾಗಿತ್ತು. ‘ಈ ಆಟ ಆಡುವಾಗ ಸಹಾಯಕ ಪ್ರಾಧ್ಯಾಪಕರು 7ರಿಂದ 8 ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿ ಒಬ್ಬ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದರು.