ಸ್ಮಾರ್ಟ್‌ ಮೀಟರ್‌ ಅಳವಡಿಕೆಯಲ್ಲಿ ಅಕ್ರಮ ಆರೋಪ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಟೆಂಡರ್‌ಗೆ ಸಂಬಂಧಿಸಿದ ಮಾಹಿತಿಯು ಬೆಸ್ಕಾಂ ವೆಬ್‌ಸೈಟ್‌ನಲ್ಲಿದ್ದು, ಐವರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಮೂವರು ಟೆಂಡರ್‌ನ ಐದು ಷರತ್ತುಗಳನ್ನು ಪೂರೈಸಲು ವಿಫಲವಾದ್ದರಿಂದ ಅನರ್ಹರಾಗಿದ್ದರು” ಎಂದು ತಿಳಿಸಿದ ಅರಬಟ್ಟಿ.
Energy Minister K J George
Energy Minister K J George
Published on

ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಬೇಕು ಎಂದು ಆದೇಶಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಇಂಧನ ಸಚಿವ ಕೆ ಜೆ ಜಾರ್ಜ್‌ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶ ಕಾಯ್ದಿರಿಸಿದೆ.

ಖಾಸಗಿ ದೂರು ದಾಖಲಿಸಲು ಕಚೇರಿಗೆ ನಿರ್ದೇಶಿಸಿರುವುದು ಮತ್ತು ಸ್ಮಾರ್ಟ್‌ ಮೀಟರ್‌ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿರುವ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೆ ಜೆ ಜಾರ್ಜ್‌ ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಹಾಗೂ ತಾಂತ್ರಿಕ ವಿಭಾಗದ ನಿರ್ದೇಶಕ ಎಚ್‌ ಜೆ ರಮೇಶ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠವು ನಡೆಸಿತು.

ಲೋಕಾಯುಕ್ತ ಪರ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ದೇಶದಲ್ಲಿ 97 ಮತ್ತು ಅದಕ್ಕೂ ಹೆಚ್ಚು ಅರ್ಹ ಟೆಂಡರ್‌ದಾರರು ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕೆಲಸ ಮಾಡುತ್ತಾರೆ. ಇವರೆಲ್ಲರೂ ಬೇರೆಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಾರೆ. ಅವರೂ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು. ಇದರ ಸಂಬಂಧಿತ ಮಾಹಿತಿಯು ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಐವರು ಟೆಂಡರ್‌ದಾರರ ಜೊತೆ ಚರ್ಚೆ ನಡೆದಿದೆ. ಪುನರ್‌ ಬಿಡ್‌ ಸಹ ಐವರ ನಡುವೆ ನಡೆದಿದೆ. ಎಲ್ಲರೂ ಕರ್ನಾಟಕದವರೇ ಇದ್ದರು. ಈ ಪೈಕಿ ಟೆಂಡರ್‌ನ ಐದು ಷರತ್ತುಗಳನ್ನು ಪೂರೈಸಲು ಮೂವರು ಬಿಡ್‌ದಾರರು ವಿಫಲವಾದ್ದರಿಂದ ಅನರ್ಹರಾಗಿದ್ದರು” ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಅದನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.

ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “97 ಮಂದಿ ಇದ್ದರು ಎಂದು ಅರಬಟ್ಟಿ ಹೇಳಿದ್ದು, ಆನಂತರ ಅದಕ್ಕೂ ಹೆಚ್ಚು ಮಂದಿ ಬಿಡ್‌ದಾರರು ಇರಬಹುದು ಎಂದಿದ್ದಾರೆ. ನಮ್ಮ ಪ್ರಕಾರ 2 ಸಾವಿರ ಮಂದಿ ಟೆಂಡರ್‌ದಾರರು ಇದ್ದಾರೆ. ಇದರರ್ಥ ನಾವು ಏನು ಹೇಳಬೇಕು ಎಂದುಕೊಂಡಿದ್ದೆವೋ ಅದನ್ನು ಅವರ ಹೇಳಿಕೆ ಸಾಬೀತುಪಡಿಸಿದೆ” ಎಂದರು.

ಅರಬಟ್ಟಿ ಅವರು “ದೂರುದಾರರು ಸಂಪೂರ್ಣವಾದ ಖಾಸಗಿ ದೂರು ನೀಡಿದ್ದಾರೆ. ಖಾಸಗಿ ದೂರಿನ ಜೊತೆ 14 ದಾಖಲೆಗಳಿವೆ. ದೂರುದಾರರು ಮತ್ತು ಟೆಂಡರ್‌ದಾರರು ಹಾಗೂ ಆರೋಪಿತ ಅಧಿಕಾರಿಗಳು ನಮ್ಮ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದಾರೆ” ಎಂದು ವಾದ ವಿಸ್ತರಿಸಿದರು.

ಇದನ್ನು ಆಲಿಸಿದ ಪೀಠವು “ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಯ ವರದಿಯನ್ನು ದೂರುದಾರರು ಮತ್ತು ಅರ್ಜಿದಾರರಿಗೆ ನೀಡಬೇಕು. ಇದನ್ನು ಪರಿಶೀಲಿಸಿ, ಅವರು ತಮ್ಮ ವಾದಾಂಶಗಳನ್ನು ನ್ಯಾಯಾಲಯಕ್ಕೆ ಶುಕ್ರವಾರದೊಳಗೆ ಸಲ್ಲಿಸಬೇಕು. ಹೀಗಾದಲ್ಲಿ ಮುಂದಿನ ವಾರದಲ್ಲಿ ಆದೇಶ ಪ್ರಕಟಿಸಲಾಗುವುದು” ಎಂದು ಮೌಖಿಕವಾಗಿ ಹೇಳಿ, ಆದೇಶ ಕಾಯ್ದಿರಿಸಿತು.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ ಕಾನೂನುಬಾಹಿರವಾಗಿದೆ ಮತ್ತು ಈ ಟೆಂಡರ್‌ ನೀಡಿಕೆಯಿಂದ ಅಂದಾಜು ₹16 ಸಾವಿರ ಕೋಟಿ ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕರಾದ ಡಾ.ಸಿ ಎನ್‌ ಅಶ್ವತ್ಥ ನಾರಾಯಣ, ಎಸ್‌ ಆರ್‌ ವಿಶ್ವನಾಥ್ ಮತ್ತು ಧೀರಜ್‌ ಮುನಿರಾಜು ಅವರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

Also Read
ಸ್ಮಾರ್ಟ್‌ ಮೀಟರ್‌ ಅಳವಡಿಕೆಯಲ್ಲಿ ಅಕ್ರಮ ಆರೋಪ: ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ

ಸ್ಮಾರ್ಟ್‌ ಮೀಟರ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 26ರಂದು ಟೆಂಡರ್‌ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಎಂಬ ಶೆಲ್‌ ಕಂಪನಿಗೆ ಟೆಂಡರ್‌ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಮುಂದುವರೆದು, ಈ ಟೆಂಡರ್‌ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್‌ ಕರೆಯದೆ ಬೆಸ್ಕಾಂ ಕಂಪನಿ ಮೂಲಕವೇ ನೇರವಾಗಿ ಟೆಂಡರ್‌ ನೀಡಲಾಗಿದೆ. ಇದರಿಂದ ಅಂದಾಜು ₹16 ಸಾವಿರ ಕೋಟಿ ಮೊತ್ತವನ್ನು ಪಡೆಯುವ ಅಕ್ರಮ ನಡೆದಿದೆ. ಕಾನೂನು ಬಾಹಿರವಾದ ಈ ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ.

ಸಚಿವ ಕೆ ಜೆ ಜಾರ್ಜ್‌, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್‌ ಜೆ ರಮೇಶ್‌ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಇದನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರು ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ವರದಿ ನೀಡಲು ಆದೇಶಿಸಿತ್ತು. ಇದಕ್ಕೆ ಹೈಕೋರ್ಟ್‌ ತಡೆ ನೀಡಿದೆ.

Kannada Bar & Bench
kannada.barandbench.com