ಕಬಡ್ಡಿ ಪಂದ್ಯದ ವೇಳೆ ₹500 ಬೆಟ್ಟಿಂಗ್‌: ತುಮಕೂರು ಡಿಸಿ ಶುಭ ಕಲ್ಯಾಣ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಅರ್ಜಿದಾರರ ವಿರುದ್ಧ ಮಾಡಲಾದ ಕ್ಷುಲ್ಲಕ ಬೆಟ್ಟಿಂಗ್ ಆರೋಪದ ದೂರು ಇದಾಗಿದೆ. ಅಲ್ಲದೆ, ಇದೇ ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪ್ರಕರಣಕ್ಕೆ ಹೈಕೋರ್ಟ್‌ ತಡೆ ನೀಡಿದೆ ಎಂದ ವಕೀಲರು.
ಕಬಡ್ಡಿ ಪಂದ್ಯದ ವೇಳೆ ₹500 ಬೆಟ್ಟಿಂಗ್‌: ತುಮಕೂರು ಡಿಸಿ ಶುಭ ಕಲ್ಯಾಣ್‌ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ
Published on

ತುಮಕೂರು ನಗರದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನೂನುಬಾಹಿರವಾಗಿ ₹500 ಬೆಟ್ಟಿಂಗ್‌ ಕಟ್ಟಿದ ಆರೋಪ ಸಂಬಂಧ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರೂ ಆರೋಪಿಯಾಗಿರುವ ಬೆಟ್ಟಿಂಗ್ ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸಿದ್ದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶುಭಾ ಕಲ್ಯಾಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ‌ ಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2026ರ ಏಪ್ರಿಲ್ 21ರಂದು ಎಸಿಜೆಎಂ ನ್ಯಾಯಾಲಯ ನೀಡಿರುವ ಆದೇಶವನ್ನು ಸಹ-ಆರೋಪಿಯಾಗಿರುವ ಗೃಹ ಸಚಿವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅವರ ವಿರುದ್ಧದ ಮುಂದಿನ ಪ್ರಕ್ರಿಯೆಗಳಿಗೆ ಈ ಹಿಂದೆಯೇ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ. ಅದೇ ರೀತಿಯ ವಾದಗಳನ್ನು ಮುಂದಿಟ್ಟಿರುವ ಅರ್ಜಿದಾರರಿಗೂ (ಜಿಲ್ಲಾಧಿಕಾರಿ) ಸಮಾನತೆಯ ಆಧಾರದ ಮೇಲೆ ಅದೇ ಆದೇಶವನ್ನು ಅನ್ವಯಿಸಬಹುದು ಎಂದು ಅಭಿಪ್ರಾಯಪಟ್ಟು, ಡಿಸಿ ಶುಭಾ ಕಲ್ಯಾಣ್ ವಿರುದ್ಧದ ಪ್ರಕರಣರ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಿತು.

ಜತೆಗೆ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠವು ಡಾ. ಜಿ. ಪರಮೇಶ್ವರ್ ಅವರ ಅರ್ಜಿಯೊಂದಿಗೇ ಈ ಅರ್ಜಿಯನ್ನೂ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿತು.

Also Read
[₹500 ಬೆಟ್ಟಿಂಗ್‌] ʼಹಾಸ್ಯ ಮಾಡುವುದು ಕ್ರಿಮಿನಲ್‌ ಅಪರಾಧವೇʼ? ಗೃಹ ಸಚಿವ ಪರಮೇಶ್ವರ್‌ ವಿರುದ್ಧದ ಪ್ರಕರಣಕ್ಕೆ ತಡೆ

ಅರ್ಜಿ ವಿಚಾರಣೆ ವೇಳೆ ಡಿಸಿ ಶುಭಾ ಕಲ್ಯಾಣ್ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಮಾಡಲಾದ ಕ್ಷುಲ್ಲಕ ಬೆಟ್ಟಿಂಗ್ ಆರೋಪದ ದೂರು ಇದಾಗಿದೆ. ಅಲ್ಲದೆ, ಇದೇ ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಎಸಿಜೆಎಂ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ಆದ್ದರಿಂದ, ಈ ಅರ್ಜಿಯಲ್ಲೂ ಅಂಥದೇ ಆದೇಶ ನೀಡಬೇಕು ಎಂದು ಮನವಿ ಮಾಡಿದರು.

Kannada Bar & Bench
kannada.barandbench.com