

ಕಚ್ಚಲು ಬಂದ ನಾಯಿಗೆ ಕಲ್ಲಿನಿಂದ ಹೊಡೆದ ವಿಚಾರಕ್ಕೆ ಉಂಟಾದ ಜಗಳದಲ್ಲಿ ನೆರೆಮನೆಯವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಯಿಯ ಮಾಲೀಕರು ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಶನಿವಾರ ಮಧ್ಯಂತರ ತಡೆ ನೀಡಿದೆ.
ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ನಾಯಿಯ ಮಾಲೀಕರಾದ ಮುನಿಕೃಷ್ಣ ಮತ್ತವರ ಮಗಳು ಕಾವ್ಯಾ ಸೇರಿ ಏಳು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಪೀಠವು “ಯಾವ ನಾಯಿ? ನಾಯಿಯನ್ನು ಹೊರಗೆ ಬಿಟ್ಟವರು ಯಾರು?” (Which dog? Who let the dogs out?) ಎಂದು ಮೌಖಿಕವಾಗಿ ಪ್ರಶ್ನಿಸಿತಲ್ಲದೆ, ಅರ್ಜಿದಾರರು ನಾಯಿಯನ್ನು ಹೊರಗೆ ಬಿಡುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟು ಪ್ರಕರಣದ ತನಿಖೆಗೆ ತಡೆ ನೀಡಿ, ಅರ್ಜಿ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿತು.
ಪ್ರಕರಣದ ದೂರುದಾರರಾದ ಎಂ ಮಂಜುಳಾ (ಎರಡನೇ ಪ್ರತಿವಾದಿ) ಅವರು ಅರ್ಜಿದಾರ ಆರೋಪಿಗಳ ನೆರೆಯವರಾಗಿದ್ದು, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದೂರುರಾರರನ್ನು ಮೊದಲನೇ ಆರೋಪಿ ಮುನಿಕೃಷ್ಣ ಅವರಿಗೆ ಸೇರಿದ ನಾಯಿಯು ಬೆನ್ನಟ್ಟಿ ಕಚ್ಚಲು ಯತ್ನಿಸಿದೆ ಎಂದು ಆರೋಪಿಸಲಾಗಿದೆ. ನಾಯಿ ದೂರುದಾರರಿಗೆ ಕಚ್ಚಿಲ್ಲ. ಆದರೆ, ನಾಯಿಯ ವಿಚಾರಕ್ಕೆ ಉಂಟಾದ ಜಗಳದ ಪರಿಣಾಮವಾಗಿ ಅರ್ಜಿದಾರರು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಆದ್ದರಿಂದ, ಬಿಎನ್ಎಸ್ ಸೆಕ್ಷನ್ 115 ಮತ್ತು 118 ಅಡಿಯಲ್ಲಿ ಅಪರಾಧಗಳು ಉದ್ಭವಿಸಿವೆ. ದೂರುದಾರರೂ ಸಹ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಬಯಸಿದ್ದರಾದರೂ, ಅವರ ವಕೀಲರ ಸಹಿ ಇಲ್ಲದ ಕಾರಣ ಇತ್ಯರ್ಥಪಡಿಸಿಕೊಳ್ಳಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ದೂರುದಾರರು ವಿಚಾರಣೆಗೆ ಹಾಜರಾಗುವವರೆಗೆ, ಅರ್ಜಿದಾರರ ವಿರುದ್ಧದ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ದೂರುದಾರೆ ಮಂಜುಳಾ ಅವರು 2026ರ ಜನವರಿ 5ರಂದು ರಾತ್ರಿ 9.45ಕ್ಕೆ ಸೂರ್ಯನಗರ ಪೊಲೀಸ್ ಠಾಣೆಗೆ ತೆರಳಿ ಮುನಿಕೃಷ್ಣ ಸೇರಿ ಏಳು ಮಂದಿ ವಿರುದ್ಧ ದೂರು ನೀಡಿದ್ದರು. ಅದೇ ದಿನ ಸಂಜೆ 5.30ರ ಸುಮಾರಿಗೆ ತಮ್ಮ ನಾದಿನಿಯ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನಾಯಿಯೊಂದು ಅಟ್ಟಿಸಿಕೊಂಡು ಬಂದು ಕಚ್ಚಲು ಯತ್ನಿಸಿತ್ತು. ನಾಯಿಯಿಂದ ರಕ್ಷಿಸಿಕೊಳ್ಳಲು ಅದಕ್ಕೆ ಕಲ್ಲಿನಿಂದ ಹೊಡೆದು ಓಡಿಸಿದ್ದೆವು. ನಂತರ ನಾಯಿಯ ಮಾಲೀಕರಾದ ಮುನಿಕೃಷ್ಣ, ಕಾವ್ಯಾ ಹಾಗೂ ಇತರ ಆರೋಪಿಗಳು ನಾಯಿಗೆ ಹೊಡೆದ ವಿಚಾರಕ್ಕೆ ಜಗಳ ಆರಂಭಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ದೂರು ಆಧರಿಸಿ ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 115(1) (ಗಾಯಗೊಳಿಸುವುದು), 118(1) (ಅಪಾಯಕಾರಿ ಆಯುಧ ಅಥವಾ ವಿಧಾನಗಳಿಂದ ತೀವ್ರವಾಗಿ ಗಾಯಗೊಳಿಸುವುದು), 352 (ಶಾಂತಿ ಭಂಗ ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ), 291 (ಪ್ರಾಣಿಗಳ ವಿಷಯದಲ್ಲಿ ನಿರ್ಲಕ್ಷ್ಯದ ನಡವಳಿಕೆ), 189(2) (ಕಾನೂನುಬಾಹಿರ ಗುಂಪು ಸೇರುವಿಕೆ) ಮತ್ತು 190 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಆರೋಪಿಗಳು, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.