ಹೈಕೋರ್ಟ್‌ ಬಳಕೆಗೆ ಶೀಘ್ರ ಕಾವೇರಿ ಭವನ ಲಭ್ಯ: ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಘೋಷಣೆ

ಕಾವೇರಿ ಭವನದ ಎ, ಬಿ ಮತ್ತು ಸಿ ಬ್ಲಾಕ್‌ಗಳಲ್ಲಿನ 1,21,210 ಚದರ ಅಡಿ ಜಾಗದಲ್ಲಿ ಬಳಕೆಗೆ ಸಿದ್ಧವಿರುವ ಕಚೇರಿಗಳು, ಬೋರ್ಡ್‌ ರೂಮ್‌ಗಳು, ಕಾನ್ಫರೆನ್ಸ್‌ ರೂಮ್‌ಗಳು, ಆಡಿಟೊರಿಯಂ ಮತ್ತು ಅತಿಥಿ ಗೃಹವನ್ನು ಹೈಕೋರ್ಟ್‌ ಪಡೆಯಲಿದೆ.
Chief Justice N V Anjaria salutes to National Flag
Chief Justice N V Anjaria salutes to National Flag
Published on

“ಸರ್ವ ರೀತಿಯಲ್ಲಿಯೂ ಬಳಕೆಗೆ ಸಿದ್ಧವಾಗಿರುವ ಕಾವೇರಿ ಭವನದ ಮೂರು ಬ್ಲಾಕ್‌ಗಳನ್ನು ಒಳಗೊಂಡ 1,21,210 ಚದರ ಅಡಿ ಜಾಗ ಶೀಘ್ರದಲ್ಲೇ ಕರ್ನಾಟಕ ಹೈಕೋರ್ಟ್‌ಗೆ ಹಸ್ತಾಂತರವಾಗಲಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೈಕೋರ್ಟ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

“ಸದ್ಯ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್‌) ಬಳಕೆಯಲ್ಲಿರುವ ಕಾವೇರಿ ಭವನದ ಎ, ಬಿ ಮತ್ತು ಸಿ ಬ್ಲಾಕ್‌ಗಳಲ್ಲಿನ 1,21,210 ಚದರ ಅಡಿ ಜಾಗದಲ್ಲಿ ಬಳಕೆಗೆ ಸಿದ್ಧವಿರುವ ಕಚೇರಿಗಳು, ಬೋರ್ಡ್‌ ರೂಮ್‌ಗಳು, ಕಾನ್ಫರೆನ್ಸ್‌ ರೂಮ್‌ಗಳು, ಆಡಿಟೊರಿಯಂ ಮತ್ತು ಅತಿಥಿ ಗೃಹವನ್ನು ಹೈಕೋರ್ಟ್‌ ಪಡೆಯಲಿದೆ” ಎಂದು ಸಂತೃಪ್ತಿಯಿಂದ ಘೋಷಣೆ ಮಾಡುತ್ತಿದ್ದೇನೆ ಎಂದು ನ್ಯಾ. ಅಂಜಾರಿಯಾ ಹೇಳಿದರು.

“ಕಾವೇರಿ ಭವನದ ಜಾಗವನ್ನು ಹೈಕೋರ್ಟ್‌ಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಪಿಟಿಸಿಎಲ್‌ ಸಲ್ಲಿಸಿದ್ದ ಪ್ರಸ್ತಾವವನ್ನು ಪೂರ್ಣ ನ್ಯಾಯಾಲಯವು ಒಪ್ಪಿಕೊಂಡಿದೆ. ಕಾವೇರಿ ಭವನದಲ್ಲಿನ ಸ್ಥಳವನ್ನು ಹೈಕೋರ್ಟ್‌ಗೆ ಹಂಚಿಕೆ ಮಾಡುವುದನ್ನು ಕೆಪಿಟಿಎಸ್‌ಎಲ್‌ ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಇದಕ್ಕೆ ಸರ್ಕಾರದ ಪ್ರಾಧಿಕಾರಗಳು ಒಪ್ಪಿಗೆ ಸೂಚಿಸಿವೆ. ಈ ಕುರಿತ ವರದಿ ಲಭ್ಯವಾದ ಬಳಿಕ ಔಪಚಾರಿಕವಾಗಿ ಕಾವೇರಿ ಭವನವನ್ನು ವಶಕ್ಕೆ ಪಡೆಯಲಾಗುವುದು” ಎಂದು ತಿಳಿಸಿದರು.

ನ್ಯಾಯಾಂಗ ಅಕಾಡೆಮಿಗೆ ರಜತ ಸಂಭ್ರಮ

ಆಡಳಿತಾತ್ಮಕ ದೃಷ್ಟಿಯಿಂದ 78 ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾಗಿ, 84 ಅಧಿಕಾರಿಗಳಿಗೆ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿ ಪದೋನ್ನತಿ ನೀಡಲಾಗಿದೆ. ಹಲವು ಜಿಲ್ಲಾ ನ್ಯಾಯಾಧೀಶರು ಮತ್ತು ಸಿವಿಲ್‌ ನ್ಯಾಯಾಧೀಶರ ಪ್ರೊಬೇಷನ್‌ ಅವಧಿಯನ್ನು ಪೂರ್ಣಗೊಳಿಸಲಾಗಿದೆ. ಅರ್ಹ ಜಿಲ್ಲಾ ನ್ಯಾಯಾಧೀಶರಿಗೆ ಸೆಲೆಕ್ಷನ್‌ ಗ್ರೇಡ್‌ ಮತ್ತು ಸೂಪರ್‌ ಟೈಮ್‌ ಸ್ಕೇಲ್‌ಗೆ ಹಾಗೂ ಹೈಕೋರ್ಟ್‌ನ ಹಲವು ಕೇಡರ್‌ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳಿಗೂ ತರಬೇತಿ

ಜುಲೈ 1ರಿಂದ ಜಾರಿಗೆ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮದ ಕುರಿತು ರಾಜ್ಯ ನ್ಯಾಯಾಂಗ ಅಕಾಡೆಮಿಯು ನ್ಯಾಯಾಂಗ ಅಧಿಕಾರಿಗಳು, ವಕೀಲರಿಗಷ್ಟೇ ಅಲ್ಲದೇ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೂ ತರಬೇತಿ ಕಾರ್ಯಕ್ರಮ ನಡೆಸಿದೆ ಎಂದು ನ್ಯಾ. ಅಂಜಾರಿಯಾ ತಿಳಿಸಿದ್ದಾರೆ.

Also Read
ಹೈಕೋರ್ಟ್‌ಗೆ ಹೆಚ್ಚುವರಿ ಕಟ್ಟಡ: ಪಿಐಎಲ್‌ ಇತ್ಯರ್ಥಪಡಿಸಿದ ಹೈಕೋರ್ಟ್‌

ಡಿಜಿಟಲ್‌ ವ್ಯವಸ್ಥೆಗೆ ಒತ್ತು

“ಇಂಟರ್‌ನೆಟ್‌ ಕ್ರಾಂತಿಯಿಂದಾಗಿ ಸಮಾಜವು ಇಂದು ಕವಲುದಾರಿಯಲ್ಲಿದ್ದು, ಇದರಿಂದ ನ್ಯಾಯಾಂಗ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ. ತಾಂತ್ರಿಕ ಶೋಧನೆ ಮತ್ತು ಅವುಗಳ ಅನ್ವಯಿಕತೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅತ್ಯಗತ್ಯವಾಗಿವೆ. ನ್ಯಾಯಿಕವಾಗಿ ತಂತ್ರಜ್ಞಾನವನ್ನು ಬಳಕೆ ಮಾಡಿದರೆ ತುರ್ತಾಗಿ ಮತ್ತು ಪಾರದರ್ಶಕವಾಗಿ ನ್ಯಾಯದಾನ ಮಾಡಬಹುದಾಗಿದೆ. ಇ-ಮೂಲಸೌಲಭ್ಯ, ಜನ ಕೇಂದ್ರಿತ ಇ-ಸೇವೆಗಳು, ಇ-ಸೇವಾ ಕೇಂದ್ರ ಇತ್ಯಾದಿಗಳನ್ನು ಹೊಂದುವ ಮೂಲಕ ಮಹತ್ವದ ಕ್ರಮಕೈಗೊಂಡಿದ್ದರೂ ಈ ಹಾದಿಯಲ್ಲಿ ಇನ್ನೂ ಬಹುದೂರ ಸಾಗಬೇಕಿದೆ” ಎಂದು ನ್ಯಾ. ಅಂಜಾರಿಯಾ ಅಭಿಪ್ರಾಯಪಟ್ಟರು.

“ತಮ್ಮ ಪ್ರಕರಣಗಳ ಬಗ್ಗೆ ತಿಳಿದುಕೊಳ್ಳಲು ಡ್ಯಾಷ್‌ಬೋರ್ಡ್‌ ರೂಪದಲ್ಲಿ ಆನ್‌ಲೈನ್‌ ಡಿಜಿಟಲ್‌ ಕೇಸ್‌ ಡೈರಿ ವೇದಿಕೆಯನ್ನು ರೂಪಿಸುವ ಮೂಲಕ ವಕೀಲರು, ದಾವೆದಾರರು ಮತ್ತು ಸರ್ಕಾರಿ ಇಲಾಖೆಗಳಿಗೆ ಕಾಗದರಹಿತ ಡೈರಿ ವ್ಯವಸ್ಥೆಯನ್ನು ರಾಜ್ಯದಾದ್ಯಂತ ಹೈಕೋರ್ಟ್‌ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಇ-ಫೈಲಿಂಗ್‌, ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣ ಇತರೆ ತಂತ್ರಜ್ಞಾನ ಕೇಂದ್ರಿತ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದರು.

“ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಬಾಕಿ ಪ್ರಕರಣ ಕಡಿತ ಮಾಡಲು ಹೈಕೋರ್ಟ್‌ ಎಲ್ಲಾ ಕ್ರಮಕೈಗೊಳ್ಳುತ್ತಿದೆ. ಲೋಕ ಅದಾಲತ್‌ನಲ್ಲಿ ಹೈಕೋರ್ಟ್‌ ಸಾಧನೆಯು ಸಮಾಧಾನಕರವಾಗಿದೆ. ಕಳೆದ ಜುಲೈ 13ರಲ್ಲಿ ನಡೆದ ಲೋಕ ಅದಾಲತ್‌ನಲ್ಲಿ 44,64,209 ಅವಧಿ ಪೂರ್ವ ಪ್ರಕರಣಗಳ ಪೈಕಿ  40,02,785 ಪ್ರಕರಣಗಳು ಸಂಧಾನದಲ್ಲಿ ಇತ್ಯರ್ಥವಾಗಿವೆ. ಸುಪ್ರೀಂ ಕೋರ್ಟ್‌ನಲ್ಲಿ ಈಚೆಗೆ ನಡೆದ ಲೋಕ ಅದಾಲತ್‌ನಲ್ಲಿ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಪ್ರಕರಣಗಳು ಇತ್ಯರ್ಥವಾಗುವಲ್ಲಿ ನಮ್ಮ ನ್ಯಾಯಾಂಗ ಅಧಿಕಾರಿಗಳ ಕೆಲಸ ಶ್ಲಾಘನಾರ್ಹ” ಎಂದು ಮೆಚ್ಚುಗೆ ಸೂಚಿಸಿದರು. 

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್‌ ಎಲ್‌ ವಿಶಾಲ ರಘು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Kannada Bar & Bench
kannada.barandbench.com