ಜಾಮೀನು ನೀಡಲು ಜಿಲ್ಲಾ ನ್ಯಾಯಾಧೀಶರು ಹೆದರುತ್ತಿರುವುದರಿಂದ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ಮಹಾಪೂರ: ಸಿಜೆಐ

ಈ ಭಯದ ಭಾವನೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಕೆಳ ನ್ಯಾಯಾಲಯಗಳು ಹಲ್ಲಿಲ್ಲದಂತೆ ಮತ್ತು ನಿಷ್ಕಿಯವಾಗದಂತೆ ನೋಡಿಕೊಳ್ಳಲು ಸಮಸ್ಯೆಯನ್ನು ಎದುರಿಸಬೇಕಿದೆ ಎಂದು ಅವರು ಹೇಳಿದರು.
Justice DY Chandrachud
Justice DY Chandrachud
Published on

ಜಾಮೀನು ನೀಡಿದರೆ ತನ್ನನ್ನು ಗುರಿಮಾಡಬಹುದೆಂಬ ಭೀತಿಯಿಂದ ಜಿಲ್ಲಾ ನ್ಯಾಯಾಲಯಗಳು ಜಾಮೀನು ನೀಡಲು ಹಿಂಜರಿಯುತ್ತಿದ್ದು ಇದರಿಂದಾಗಿ ಹೈಕೋರ್ಟ್‌ಗಳು ಜಾಮೀನು ಅರ್ಜಿಗಳಿಂದ ತುಂಬಿ ತುಳುಕುತ್ತಿವೆ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ತಿಳಿಸಿದರು.

ಸುಪ್ರೀಂ ಕೋರ್ಟ್‌ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗೆ  ಅಧಿಕಾರ ಸ್ವೀಕರಿಸಿದ  ಅವರಿಗೆ ಶನಿವಾರ ಭಾರತೀಯ ವಕೀಲರ ಪರಿಷತ್ (ಬಿಸಿಐ) ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ನ್ಯಾಯಮೂರ್ತಿಗಳು ಮಾತನಾಡಿದರು.

“ಉನ್ನತ ನ್ಯಾಯಾಂಗ ಜಾಮೀನು ಅರ್ಜಿಗಳಿಂದ ತುಂಬಿ ತುಳುಕಲು ಕಾರಣ ಎಂದರೆ ಕೆಳ ನ್ಯಾಯಾಲಯಗಳು ಜಾಮೀನು ನೀಡಲು ತೋರುತ್ತಿರುವ ಹಿಂಜರಿಕೆಯಾಗಿದೆ. ಅವರಿಗೆ ಸಾಮರ್ಥ್ಯ ಇಲ್ಲ ಎಂದಲ್ಲ. ಅವರಿಗೆ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗಿಂತಲೂ ಚೆನ್ನಾಗಿ ಅಪರಾಧ ಅರ್ಥ ಆಗಿರುತ್ತದೆ ಏಕೆಂದರೆ ಅವರು ಬೇರುಮಟ್ಟದಿಂದಲೇ ಅಪರಾಧ ಪ್ರಕರಣಗಳನ್ನು ಬಲ್ಲವರಾಗಿರುತ್ತಾರೆ. ಆದರೆ ಹೇಯ ಕೃತ್ಯ ಎಸಗಿದ ಪ್ರಕರಣದಲ್ಲಿ ತಾನು ಜಾಮೀನು ನೀಡಿದರೆ  ನಾಳೆ ಯಾರಾದರೂ ತನ್ನನ್ನು ಗುರಿಯಾಗಿಸಿಕೊಳ್ಳುತ್ತಾರೆ ಎಂಬ ಭಯದ ಭಾವನೆ ಅವರಿಗೆ ಇದೆ” ಎಂದರು.

Also Read
ಪುರುಷ ಪ್ರಧಾನ, ಜಾತಿ ಆಧಾರಿತವಾಗಿರುವ ಕಾನೂನು ವೃತ್ತಿ ಎಲ್ಲ ವರ್ಗಗಳಿಗೂ ಮುಕ್ತವಾಗಬೇಕು: ಸಿಜೆಐ ಚಂದ್ರಚೂಡ್

ಈ ಭಯದ ಭಾವನೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಕೆಳ ನ್ಯಾಯಾಲಯಗಳು ಹಲ್ಲಿಲ್ಲದಂತೆ ಮತ್ತು ನಿಷ್ಕಿಯವಾಗದಂತೆ ನೋಡಿಕೊಳ್ಳಲು ಸಮಸ್ಯೆಯನ್ನು ಎದುರಿಸಬೇಕಿದೆ ಎಂದು ಅವರು ಹೇಳಿದರು.  

"ನೀವು ತಪ್ಪು ಮಾಡಿದರೆ, ಖಂಡಿತವಾಗಿ ಆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿದೆ. ನಾವು ಸುಪ್ರೀಂ ಕೋರ್ಟ್, ನಮ್ಮಿಂದ ಎಂದಿಗೂ ತಪ್ಪಾಗದು ಎಂದಲ್ಲ. ಯಾವಾಗಲೂ ಹೇಳುವ ಮಾತಿನಂತೆ 'ಸರಿ ಇರುವ ಕಾರಣಕ್ಕೆ ಸುಪ್ರೀಂ ಕೋರ್ಟ್ ಆತ್ಯಂತಿಕವಾದುದಾಗಿಲ್ಲ, ಬದಲಿಗೆ ಅದು ಆತ್ಯಂತಿಕವಾಗಿ ಇರುವುದರಿಂದ ಸರಿ ಇರುವಂತೆ ಕಾಣುತ್ತದೆ” ಎಂದರು.

ಈ ನಿಟ್ಟಿನಲ್ಲಿ, ಸಂಬಂಧಪಟ್ಟ ವ್ಯಕ್ತಿ ನಿರೀಕ್ಷಣಾ ಜಾಮೀನಿಗಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 438ರ ಅಡಿಯಲ್ಲಿ ಅರ್ಜಿ ಸಲ್ಲಿಸಿದಾಗ ಬಂಧನ ಅಥವಾ ಬಂಧನದ ಬೆದರಿಕೆಯಂತಹ ಘಟನೆಗಳು ನಡೆದಿರುವುದನ್ನು ಅವರು ಉಲ್ಲೇಖಿಸಿದರು.

Also Read
ವಕೀಲರ ಪ್ರತಿಭಟನೆಗೆ ರಿಜಿಜು ಬೇಸರ: ನ್ಯಾಯವಾದಿಗಳು ರಾಷ್ಟ್ರೀಯ ದೃಷ್ಟಿಯಿಂದ ಕೊಲಿಜಿಯಂ ನಿರ್ಧಾರ ನೋಡಲಿ ಎಂದ ಸಿಜೆಐ

ಜಿಲ್ಲಾ ನ್ಯಾಯಾಲಯ ಎಂಬುದು ಸಾಮಾನ್ಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸುವ ಮೊದಲ ಹಂತ. ಹೀಗಾಗಿ ಜಿಲ್ಲಾ ನ್ಯಾಯಾಂಗ ಎಂಬುದು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಷ್ಟೇ ಮಹತ್ವದ್ದಾಗಿದೆ ಎಂದು ಅವರು ಒತ್ತಿ ಹೇಳಿದರು.

“ಅದಕ್ಕಾಗಿಯೇ ನಾನು ಯಾವಾಗಲೂ ಹೇಳುತ್ತೇನೆ ನಮ್ಮ ಜಿಲ್ಲಾ ನ್ಯಾಯಾಂಗವು ಅಧೀನ ನ್ಯಾಯಾಂಗವಲ್ಲ ಬದಲಿಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಸಮಾನವಾದ ನ್ಯಾಯಾಂಗವಾಗಿದೆ. ಸುಪ್ರೀಂ ಕೋರ್ಟ್ ಪ್ರಮುಖ ವಿಷಯಗಳ ಬಗ್ಗೆ  ದೊಡ್ಡ ತೀರ್ಪುಗಳನ್ನು ನೀಡುತ್ತದೆ, ಆದರೆ ಜಿಲ್ಲಾ ನ್ಯಾಯಾಲಯ ತನ್ನ ಸಣ್ಣ ಅಖಾಡದಲ್ಲಿಯೇ ಸಾಮಾನ್ಯ ನಾಗರಿಕರ ಶಾಂತಿ, ಸಂತೋಷ ಮತ್ತು ವಿಶ್ವಾಸವನ್ನು ವ್ಯಾಖ್ಯಾನಿಸುತ್ತದೆ, ”ಎಂದು ಸಿಜೆಐ ಹೇಳಿದರು.

“ಅಲ್ಲದೆ ಕಳಪೆ ಮೂಲಸೌಕರ್ಯಗಳ ಸಮಸ್ಯೆಯ ಸವಾಲನ್ನೂ ಜಿಲ್ಲಾ ನ್ಯಾಯಾಧೀಶರು ಎದುರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ  ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ, ಮೂಲಭೂತ ಸೌಕರ್ಯ ಸುಧಾರಣೆಗಾಗಿ  ಹಣ ವಿನಿಯೋಗಿಸುವುದು ಸರ್ಕಾರಕ್ಕೆ ಮುಖ್ಯವಾಗಿದೆ. ಆದರೆ ಇದು ಕೇವಲ ನಿಧಿಗೆ ಸಂಬಂಧಿಸಿದ ವಿಚಾರವಲ್ಲ. ಉದ್ದೇಶಿತ ಕಾರ್ಯಕ್ಕಾಗಿ ಹಣವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನೂ ಅದು ಅವಲಂಬಿಸಿದೆ” ಎಂದರು.

ಸಮಸ್ಯೆಗಳ ಹೊರತಾಗಿಯೂ, ಕೋವಿಡ್ ಸಾಂಕ್ರಾಮಿಕದ ಎದುರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಂಗ ಕೆಲಸ ಮಾಡಿದ ಬಗೆಯನ್ನು ನ್ಯಾಯಮೂರ್ತಿಗಳು ಶ್ಲಾಘಿಸಿದರು. ಜೊತೆಗೆ ಮಧ್ಯವಯಸ್ಕ ವಕೀಲರ ರಕ್ಷಣೆಗಾಗಿ ನ್ಯಾಯವಾದಿಗಳ ಸಮುದಾಯ ನಡೆಸಿದ ಹೋರಾಟವನ್ನು ಅವರು ಮೆಚ್ಚಿಕೊಂಡರು. ಇದೇ ವೇಳೆ ಜಿಲ್ಲಾ ನ್ಯಾಯಾಧೀಶರಲ್ಲಿ ಘನತೆ, ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ಮೂಡಿಸುವುದರ ಮಹತ್ವವನ್ನು ಅವರು ಎತ್ತಿ ತೋರಿಸಿದರು.

Kannada Bar & Bench
kannada.barandbench.com