ಬೇರೆ ರಾಜ್ಯದಲ್ಲಿ ಎಫ್ಐಆರ್ ದಾಖಲಾದರೂ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಬಹುದು: ಸುಪ್ರೀಂ

ನ್ಯಾಯದ ಹಿತಕ್ಕಾಗಿ, ಜನರ ಸ್ವಾತಂತ್ರ್ಯ ಪರಿಗಣಿಸುವಾಗ ನ್ಯಾಯಾಲಯಗಳು ಕೆಲವು ಷರತ್ತುಗಳೊಂದಿಗೆ ಸೀಮಿತ ಮಧ್ಯಂತರ ರಕ್ಷಣೆ ಒದಗಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಬೇರೆ ರಾಜ್ಯದಲ್ಲಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದ್ದರೂ ಕೂಡ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯಗಳು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ [ಪ್ರಿಯಾ ಇಂದೋರಿಯಾ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯದ ಹಿತಕ್ಕಾಗಿ, ಜನರ ಸ್ವಾತಂತ್ರ್ಯ ಪರಿಗಣಿಸುವಾಗ ನ್ಯಾಯಾಲಯಗಳು ಕೆಲವು ಷರತ್ತುಗಳೊಂದಿಗೆ ಸೀಮಿತ ಮಧ್ಯಂತರ ರಕ್ಷಣೆ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಅಭಿಪ್ರಾಯಟ್ಟಿತು.

ಅಂತಹ ಪ್ರಕರಣಗಳಲ್ಲಿ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ಈ ಕೆಳಗಿನ ಷರತ್ತುಗಳನ್ನು ವಿಧಿಸಿತು:

1. ಅಂತಹ ರಕ್ಷಣೆ ನೀಡುವ ಮೊದಲ ದಿನ ತನಿಖಾಧಿಕಾರಿ (ಐಒ) ಮತ್ತು ತನಿಖಾ ಸಂಸ್ಥೆಗೆ ನೋಟಿಸ್ ನೀಡಬೇಕು;

2. ಅರ್ಜಿದಾರರು ಬೇರೆ ಅಧಿಕಾರ ವ್ಯಾಪ್ತಿಯ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತೃಪ್ತಿಯಾಗಬೇಕು. ಜೀವ ಬೆದರಿಕೆ ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯನ್ನು ಇದು ಒಳಗೊಳ್ಳುತ್ತದೆ.

ನಿರೀಕ್ಷಣಾ ಜಾಮೀನು ನೀಡುವಾಗ ಸಂಬಂಧಪಟ್ಟ ನ್ಯಾಯಾಲಯವು ಪ್ರಾದೇಶಿಕ ಸಾಮೀಪ್ಯವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ನ್ಯಾಯಪೀಠ ಒತ್ತಿಹೇಳಿತು.

ಇದಲ್ಲದೆ, ಫೋರಂ ಶಾಪಿಂಗ್ (ಅನುಕೂಲಕರ ತೀರ್ಪು ಪಡೆಯುವುದಕ್ಕಾಗಿ ನಿರ್ದಿಷ್ಟ ನ್ಯಾಯಾಲಯವನ್ನು ಆಯ್ಕೆ ಮಾಡಿಕೊಳ್ಳುವ ತಂತ್ರ) ವಿರುದ್ಧವೂ ಎಚ್ಚರಿಕೆ ನೀಡಿದ ನ್ಯಾಯಾಲಯ, ಸ್ಪಷ್ಟ ಕಾರಣಗಳಿಲ್ಲದೆ ಜಾಮೀನು ಅರ್ಜಿಗಳನ್ನು ಸಲ್ಲಿಸಲು ಆರೋಪಿಗಳು ಬೇರೆ ಯಾವುದೇ ರಾಜ್ಯಕ್ಕೆ ಪ್ರಯಾಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.

Also Read
ಲಂಚಕ್ಕಾಗಿ ಬೆಂಗಳೂರಿನಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಅನುಮತಿ: 3 ಎಸಿಪಿ, 9 ಇನ್‌ಸ್ಪೆಕ್ಟರ್‌ಗಳಿಗೆ ನಿರೀಕ್ಷಣಾ ಜಾಮೀನು

ಎಫ್ಐಆರ್ ದಾಖಲಾದ ರಾಜ್ಯದ ವ್ಯಾಪ್ತಿಯೊಳಗಿರದ ನ್ಯಾಯಾಲಯವು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಹುದೇ ಎಂಬುದು ಸುಪ್ರೀಂ ಕೋರ್ಟ್ ಮುಂದಿರುವ ವಿಚಾರವಾಗಿತ್ತು.

ವರದಕ್ಷಿಣೆ ಕಿರುಕುಳದ ಆರೋಪದಡಿ ತನ್ನ ಪತಿ ವಿರುದ್ಧ ಪತ್ನಿಯೊಬ್ಬರು ರಾಜಸ್ಥಾನದಲ್ಲಿ ಎಫ್‌ಐಆರ್‌ ದಾಖಲಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆದರೆ ಆರೋಪಿ ಪತಿಗೆ ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ನೀಡಿದ್ದರು. ಇದನ್ನು ಪ್ರಶ್ನಿಸಿ ಪತ್ನಿಯು ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ಮಾರ್ಚ್‌ನಲ್ಲಿ ನೋಟಿಸ್‌ ನೀಡಿತ್ತು.

ಮಹಿಳೆಯ ಪರವಾಗಿ ಹಾಜರಾದ ಹಿರಿಯ ವಕೀಲ ಕೆ.ಪಾಲ್, ಈ ವಿಷಯದಲ್ಲಿ ವಿವಿಧ ಹೈಕೋರ್ಟ್‌ಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ. ಹೀಗಾಗಿ ಸುಪ್ರೀಂ ಕೋರ್ಟ್ ಇದನ್ನು ಇತ್ಯರ್ಥಪಡಿಸಬೇಕಿದೆ ಎಂದು ಗಮನಸೆಳೆದರು.

Related Stories

No stories found.
Kannada Bar & Bench
kannada.barandbench.com