ಹಿಜಾಬ್‌ ನಿಷೇಧ: ಅರ್ಜಿ ವಿಚಾರಣೆಗೆ ಪೀಠ ರಚಿಸುವುದಾಗಿ ತಿಳಿಸಿದ ಸಿಜೆಐ ಚಂದ್ರಚೂಡ್‌

ಇನ್ನು ಐದು ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದೆ ಎಂದು ಅರ್ಜಿದಾರರ ಪರ ವಕೀಲರು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದಿದೆ.
Supreme Court, Hijab
Supreme Court, Hijab

ಕಾಲೇಜು ಅವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ತುರ್ತಾಗಿ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದರು.

ಹೋಳಿ ಹಬ್ಬದ ರಜೆಯ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ಹೇಳಿದರು. “ಐದು ದಿನಗಳ ಬಳಿಕ ಪರೀಕ್ಷೆ ನಿಗದಿಯಾಗಿದೆ” ಎಂದು ವಕೀಲರು ಪ್ರತಿಕ್ರಿಯಿಸಿದರು. ಇದಕ್ಕೆ ಸಿಜೆಐ ಅವರು “ನೀವು ಕೊನೆಯ ದಿನ ಬಂದಿದ್ದೀರಿ” ಎಂದರು. ಆಗ ವಕೀಲರು “ಇದಾಗಲೇ ಎರಡು ಬಾರಿ ಇದನ್ನು ಉಲ್ಲೇಖಿಸಲಾಗಿದೆ. 10 ದಿನಗಳ ಹಿಂದೆಯೂ ಉಲ್ಲೇಖಿಸಲಾಗಿತ್ತು” ಎಂದರು. ಈ ವೇಳೆ ಸಿಜೆಐ ಅವರು “ಪ್ರಕರಣವನ್ನು ಆಲಿಸಲು ನಾನು ಪೀಠ ರಚಿಸುತ್ತೇನೆ” ಎಂದು ಭರವಸೆ ನೀಡಿದರು.

Also Read
ಹಿಜಾಬ್‌ ನಿಷೇಧ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌; ಪ್ರಕರಣ ಮುಂದೂಡಲು ನಕಾರ

ಜನವರಿ 23 ಮತ್ತು ಫೆಬ್ರವರಿ 22ರಂದು ಎರಡು ಬಾರಿ ಹಿಬಾಜ್‌ ಪ್ರಕರಣವನ್ನು ನ್ಯಾಯಾಲಯದ ಮುಂದೆ ಪಟ್ಟಿ ಮಾಡಲು ಕೋರಲಾಗಿತ್ತು. ಹಿಜಾಬ್‌ ನಿಷೇಧಿಸಲು ಅನುಮತಿಸುವುದಕ್ಕೆ ಬಲ ತಂದಿದ್ದ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಭಿನ್ನ ನಿಲುವು ತಳೆದಿತ್ತು.

ಇದಕ್ಕೂ ಮುನ್ನ, ಕರ್ನಾಟಕ ಹೈಕೋರ್ಟ್‌ ನಿಷೇಧವನ್ನು ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ನಿವೃತ್ತರಾಗಿರುವ ನ್ಯಾ. ಹೇಮಂತ್‌ ಗುಪ್ತಾ ಅವರು ಹಿಜಾಬ್‌ ನಿಷೇಧ ತೀರ್ಪು ಎತ್ತಿ ಹಿಡಿದರೆ, ನ್ಯಾ. ಸುಧಾಂಶು ಧುಲಿಯಾ ಅವರು ಸರ್ಕಾರದ ಆದೇಶ ವಜಾ ಮಾಡಿದ್ದರು. ಹೀಗಾಗಿ, ಪ್ರಕರಣವು ವಿಸ್ತೃತ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ.

Related Stories

No stories found.
Kannada Bar & Bench
kannada.barandbench.com