ಹಿಜಾಬ್ ನಿಷೇಧ ಪ್ರಶ್ನಿಸಿದ ಮೇಲ್ಮನವಿಯ ತ್ವರಿತ ವಿಚಾರಣೆ ಇಲ್ಲ, ಹೋಳಿ ನಂತರ ಪರಿಗಣನೆ ಎಂದ ಸುಪ್ರೀಂ ಕೋರ್ಟ್

ತಮಗೆ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೇಲ್ಮನವಿಯ ತ್ವರಿತ ವಿಚಾರಣೆಗೆ ಅರ್ಜಿದಾರ ವಿದ್ಯಾರ್ಥಿನಿಯರು ಕೋರಿದ್ದರು.
Hijab Ban, Supreme Court

Hijab Ban, Supreme Court


A1

ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಕುರಿತ ನಿಷೇಧ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ತ್ವರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

ಇಂದು ಈ ವಿಷಯವನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು, "ತುರ್ತು ಏನೆಂದರೆ ಹಲವಾರು ಹುಡುಗಿಯರು ಕಾಲೇಜುಗಳಿಗೆ ಹಾಜರಾಗಬೇಕಾಗಿದೆ" ಎಂದರು. ಆದರೆ ಸೋಮವಾರಕ್ಕೆ ಪ್ರಕರಣವನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನಿರಾಕರಿಸಿದರು. “ಬೇರೆಯವರ ಪ್ರಕರಣಗಳೂ (ಇದೇ ವಿಷಯಕ್ಕೆ ಸಂಬಂಧಿಸಿದ) ಇವೆ. ಹೋಳಿ ರಜೆಯ ಬಳಿಕ ಪ್ರಕರಣವನ್ನು ಪಟ್ಟಿ ಮಾಡುತ್ತೇವೆ” ಎಂದು ವಿವರಿಸಿದರು.

ಸಂವಿಧಾನದ ಮೂಲಭೂತ ರಚನೆಯ ಭಾಗವಾಗಿರುವ ಜಾತ್ಯತೀತತೆಯ ಪರಿಕಲ್ಪನೆಯನ್ನು ಉಲ್ಲಂಘಿಸಿರುವ ಹೈಕೋರ್ಟ್ ತೀರ್ಪು ಮುಸ್ಲಿಂ ಮತ್ತು ಮುಸ್ಲಿಮೇತರ ವಿದ್ಯಾರ್ಥಿನಿಯರ ನಡುವೆ ವಿವೇಚನಾರಹಿತ ವರ್ಗೀಕರಣ ಮಾಡುತ್ತದೆ ಎಂದು ಹೆಗ್ಡೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Also Read
ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಎತ್ತಿ ಹಿಡಿದ ಹೈಕೋರ್ಟ್‌; ಹಿಜಾಬ್‌ ಧಾರಣೆ ಇಸ್ಲಾಂನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ

ತಮಗೆ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿಸದ ಕಾರಣ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ತರಗತಿಗಳಿಂದ ವಂಚಿತರಾಗುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನವಿಯ ತ್ವರಿತ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರ ವಿದ್ಯಾರ್ಥಿನಿಯರು ಕೋರಿದ್ದರು.


ತೀರ್ಪನ್ನು ಪ್ರಶ್ನಿಸಿರುವ ಇಂಥದ್ದೇ ಮೇಲ್ಮನವಿಯೊಂದು "ಹಿಜಾಬ್ ಧರಿಸುವ ಹಕ್ಕು 'ಅಭಿವ್ಯಕ್ತಿ' ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ ಈ ಹಕ್ಕನ್ನು ಹೀಗಾಗಿ ಸಂವಿಧಾನದ 19(1)(ಎ) ಪರಿಚ್ಛೇದದ ಅಡಿ ರಕ್ಷಿಸಲಾಗಿದೆ” ಎಂದು ಪ್ರಸ್ತಾಪಿಸಿದೆ.

Also Read
ಹಿಜಾಬ್‌ ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

ಹಿಜಾಬ್ ಧರಿಸುವ ಹಕ್ಕು ಭಾರತದ ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಖಾಸಗಿತನದ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಅಂಶವನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಅದು ಹೇಳಿದೆ.

ಕಾಲೇಜು ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ನಿಷೇಧಿಸುವ ಅಧಿಕಾರವನ್ನು ರಾಜ್ಯದ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೀಡಿದ್ದ ಸರ್ಕಾರಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠ ಹೀಗೆ ಹೇಳಿದೆ:

  • ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯಲ್ಲ ;

  • ಸಮವಸ್ತ್ರದ ಅವಶ್ಯಕತೆಯು ಸಂವಿಧಾನದ 19(1)(ಎ) ವಿಧಿಯಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲಿನ ನ್ಯಾಯೋಚಿತ ನಿರ್ಬಂಧವಾಗಿದೆ;

  • ಸರ್ಕಾರಿ ಆದೇಶ ರವಾನಿಸಲು ಸರ್ಕಾರಕ್ಕೆ ಅಧಿಕಾರವಿದೆ; ಅದನ್ನು ಅಸಿಂಧುವೆಂದು ನಿರೂಪಿಸಲಾಗಿಲ್ಲ.

Related Stories

No stories found.
Kannada Bar & Bench
kannada.barandbench.com