ಹಿಜಾಬ್ ನಿಷೇಧಿಸುವ ಸಲುವಾಗಿ ಕರ್ನಾಟಕ ಹೈಕೋರ್ಟ್ ಕುರಾನ್ ಅನ್ನು ವ್ಯಾಖ್ಯಾನಿಸಬಾರದಿತ್ತು ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಎಂದು ವಾದಿಸಿದ ಬಳಿಕ ಹೈಕೋರ್ಟ್ ಹಾಗೆ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಹೇಳಿದೆ.
ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಯೂಸುಫ್ ಮುಚ್ಚಾಲ ಅವರು, ಹೈಕೋರ್ಟ್ ಕುರಾನನ್ನು ವ್ಯಾಖ್ಯಾನಿಸಲು ಹೋಗಬಾರದಿತ್ತು ಎಂದು ವಾದಿಸಿದ ನಂತರ, ನ್ಯಾಯಾಲಯ "ನೀವು (ಅರ್ಜಿದಾರರು) ನ್ಯಾಯಾಲಯಕ್ಕೆ ಹೋಗಿ ಇದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಹೇಳಿದ್ದೀರಿ. ಇದನ್ನು ಸೂಚಿಸುವುದನ್ನು ಬಿಟ್ಟು ಹೈಕೋರ್ಟ್‌ಗೆ ಯಾವ ಆಯ್ಕೆ ಇದೆ? ಈಗ ನೀವು ಹೈಕೋರ್ಟ್ ಹೀಗೆ ಮಾಡಬಾರದಿತ್ತು ಎಂದು ಹೇಳುತ್ತೀರಿ" ಎಂಬುದಾಗಿ ನ್ಯಾಯಾಲಯ ಪ್ರತಿಕ್ರಿಯಿಸಿತು.
ಆಗ ಮುಚ್ಚಾಲ “ತಾವು ಪರಿಣತರಲ್ಲದ ಕ್ಷೇತ್ರಕ್ಕೆ ಕೈ ಹಾಕದಿರುವುದು ನ್ಯಾಯಾಂಗದ ವಿವೇಕಕ್ಕೆ ಬಿಟ್ಟ ವಿಚಾರವಾಗಿದೆ. ಇಆರ್‌ಪಿ ಪ್ರಶ್ನೆ ಎದುರಾದಾಗ ನಾವಿದನ್ನು ವಿಚಾರಣೆ ನಡೆಸುವುದಿಲ್ಲ ಎಂದು ಅದು ಹೇಳಬೇಕಿತ್ತು” ಎಂದರು.
ಕರ್ನಾಟಕ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ನಡೆಸಿತು.
ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಿರುವುದು ಇತ್ತೀಚಿನ ಪ್ರವೃತ್ತಿ ಎಂದು ಹೈಕೋರ್ಟ್ ತಪ್ಪಾಗಿ ತಿಳಿದುಕೊಂಡಿದೆ ಎಂಬುದಾಗಿ ಮುಚ್ಚಾಲ ಅವರು ನ್ಯಾಯಾಲಯಕ್ಕೆ ತಿಳಿಸಿದರು. “ಈ ಹೇಳಿಕೆಗಳನ್ನು ಸರ್ಕಾರ ಹೈಕೋರ್ಟ್‌ನಲ್ಲಿ ನಿರಾಕರಿಸಿಲ್ಲ. ಹೀಗಾಗಿ ಅವರು ತಮ್ಮ ಮನವಿಯಲ್ಲಿ ಹೇಳಿರುವ ವಿಚಾರಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ” ಎಂದರು.
ಅಲ್ಲದೆ ಹಿಜಾಬ್ ಧರಿಸಿದ ಕಾರಣಕ್ಕೆ ಶಿಕ್ಷಣ ನಿರಾಕರಿಸಿದ ಉದಾಹರಣೆಗಳಿವೆ ಎಂದು ಅವರು ಪೀಠಕ್ಕೆ ತಿಳಿಸಿದರು. ಆಗ ನ್ಯಾ. ಗುಪ್ತಾ ಅವರು “ಹೈಕೋರ್ಟ್‌ನಲ್ಲಿ ಈ ವಿಚಾರ ಪ್ರಸ್ತಾಪವಾಗದಿದ್ದರೆ ಅದನ್ನು ನಾವು ವಿಚಾರಣೆ ನಡೆಸಲಾಗದು. ಹೊಸ ಆಧಾರದಲ್ಲಿ ಇದನ್ನು ಆಲಿಸಲಾಗದು. ನಿಮ್ಮ ಅಭಿಪ್ರಾಯ ಸೂಕ್ತ ರೀತಿಯಲ್ಲಿ ಮಂಡಿತವಾಗಿದೆ” ಎಂದರು.
ಮುಸ್ಲಿಂ ಹುಡುಗಿಯರ ಆತ್ಮಸಾಕ್ಷಿಯ ಸ್ವಾತಂತ್ರ್ಯ, ಖಾಸಗಿತನ ಮತ್ತು ಶಿಕ್ಷಣದ ಪಡೆಯುವಿಕೆ ಪ್ರಮುಖ ಸವಾಲಿನ ಅಂಶಗಳಾಗಿವೆ. ನ್ಯಾಯಾಲಯಗಳು ಘನತೆಗೆ ಸಂಬಂಧಿಸಿದ ಮೂಲಭೂತ ಹಕ್ಕನ್ನು ಕಾಪಾಡಬೇಕು ಎಂದು ಮುಚ್ಚಾಲ ವಾದಿಸಿದರು. ಆಗ ಪೀಠ "ನ್ಯಾಯಾಲಯವು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದ ಸ್ವಾತಂತ್ರ್ಯದ ಬಗ್ಗೆ ಮಾತ್ರ ಮಾತನಾಡುತ್ತಿದೆ. ಅದು ಸಂವಿಧಾನದ 25 ಮತ್ತು 19ನೇ ವಿಧಿಗಳು ಪರಸ್ಪರ ಪ್ರತ್ಯೇಕ ಎಂದು ಹೇಳುತ್ತಿಲ್ಲ" ಎಂದು ತಿಳಿಸಿದರು.
ಎರಡು ಹಕ್ಕುಗಳು ಪರಸ್ಪರ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ ಬದಲಿಗೆ ಪೂರಕವಾಗಿವೆ ಎಂದು ಸಮರ್ಥಿಸಿಕೊಂಡ ವಕೀಲ ಮುಚ್ಚಾಲ "ಈ ಪುಟ್ಟ ಹುಡುಗಿಯರು ಮಾಡುತ್ತಿರುವ ಅಪರಾಧವಾದರೂ ಏನು? ತಮ್ಮ ತಲೆ ಮೇಲೆ ತುಂಡು ಬಟ್ಟೆ ಹಾಕಿಕೊಳ್ಳುವುದು. ಇದಕ್ಕಾಗಿ, ಅವರಿಗೆ ಎಲ್ಲಾ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಹಿಜಾಬ್ ಹಾಕುವವರನ್ನು ವ್ಯಂಗ್ಯಚಿತ್ರದಂತೆ ನೋಡದೆ ಘನತೆಯಿಂದ ನೋಡಬೇಕು” ಎಂದರು.
ಉಡುಗೆ, ತೊಡುಗೆ ಅಥವಾ ಕಾಣಿಸಿಕೊಳ್ಳುವಿಕೆ ಖಾಸಗಿತನದ ಹಕ್ಕಿನ ಭಾಗವಾಗಿದೆ ಎಂದು ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವರು ಉಲ್ಲೇಖಿಸಿದರು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ “ಇಸ್ಲಾಂನಲ್ಲಿ ಕಡ್ಡಾಯ ಮತ್ತು ಕಡ್ಡಾಯವಲ್ಲದ್ದು ಎನ್ನುವ ಯಾವುದೇ ಪ್ರತ್ಯೇಕತೆ ಇಲ್ಲ. ಕುರಾನ್‌ನಲ್ಲಿರುವದು ಕಡ್ಡಾಯವಾಗಿದೆ ಮತ್ತು ಪ್ರವಾದಿಯವರು ಅದನ್ನು ವ್ಯಾಖ್ಯಾನಿಸಿರುವುದು ಸಹ ಕಡ್ಡಾಯವಾಗಿದೆ. ಇದು ನೆನಪಿನಲ್ಲಿಟ್ಟುಕೊಳ್ಳಬೇಕಾದ ನಿರ್ಣಾಯಕ ವಿಚಾರ” ಎಂದರು.
ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ನೀವು ಒತ್ತಾಯಿಸುತ್ತಿದ್ದೀರಾ ಎಂದು ಕೋರ್ಟ್ ಅವರನ್ನು ಕೇಳಿದಾಗ, ಅವರು "ಇದು ಧರ್ಮ, ಸಂಸ್ಕೃತಿ, ಆತ್ಮಸಾಕ್ಷಿ, ಘನತೆಯ ವಿಚಾರವಾಗಿದೆ" ಎಂಬುದಾಗಿ ತಿಳಿಸಿದರು. ನಂತರ ಕುರಾನ್ ಶ್ಲೋಕಗಳ ಮೂಲಕ ಬುರ್ಖಾ, ಹಿಜಾಬ್, ಜಿಲ್ಬಾಬ್‌ಗಳ ನಡುವಿನ ವ್ಯತ್ಯಾಸಗಳನ್ನು ನ್ಯಾಯಾಲಯಕ್ಕೆ ವಿವರಿಸಿದರು.
"ಈ ನ್ಯಾಯಾಲಯವು ದೇಶಕ್ಕೆ ನೀಡಿದ ಅತ್ಯಂತ ಉನ್ನತವಾದ ವಿಚಾರಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ, ನಾನು ವಕೀಲ ವರ್ಗಕ್ಕೆ ಸೇರಿದ್ದರೆ, ಅದಕ್ಕೆ ಸಂಬಂಧಿಸಿದ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು. ಇದರರ್ಥ ನನ್ನ ಸಂಸ್ಕೃತಿ ಮತ್ತು ಧರ್ಮಕ್ಕೆ ಮುಖ್ಯವಾದುದ ಬೇರಾವುದನ್ನೂ ನಾನು ಇದರ ಹೊರತಾಗಿ ಧರಿಸಲು ಸಾಧ್ಯವಿಲ್ಲವೇ?” ಎಂದು ಅವರು ಪ್ರಶ್ನಿಸಿದರು.
ಕುರಾನ್ ಪ್ರಕಾರ ಹಿಜಾಬ್ ಒಂದು ಪರದೆಯಾಗಿದ್ದು ಧರ್ಮ ಅಥವಾ ಸಂಸ್ಕೃತಿಯಾಗಿದೆ. ಉತ್ತರ ಪ್ರದೇಶ ಅಥವಾ ಉತ್ತರ ಭಾರತದಲ್ಲಿ ಘೂಂಘಟ್ (ತಲೆಯನ್ನು ಸೆರಗಿನಿಂದ ಮುಚ್ಚಿಕೊಳ್ಳುವುದು) ಅತ್ಯಂತ ಅಗತ್ಯವೆಂದು ಪರಿಗಣಿಸಲಾಗಿದೆ...." ಎಂದರು.
ಶಿಕ್ಷಣ ಸಂಸ್ಥೆಗಳಿಗೆ ಹೋಗುವಾಗ ಸಿಖ್ ಮಹಿಳೆಯರು ಕೂಡ ಪೇಟ ತೊಡುವ ಹಿನ್ನೆಲೆಯಲ್ಲಿ ತಾವು ಕೂಡ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಸಿಖ್ ಮಹಿಳೆಯೊಬ್ಬರು ಇಂದಿನ ಪ್ರಕರಣದ ವಾದ ಮುಗಿದ ಬಳಿಕ ಕೋರಿದರು.
ನ್ಯಾಯಾಲಯವು ಪ್ರಕರಣವನ್ನು ಸೆಪ್ಟೆಂಬರ್ 14ರ ಬುಧವಾರದಂದು ಮತ್ತೆ ವಿಚಾರಣೆ ನಡೆಸಲಿದ್ದು ಗುರುವಾರದೊಳಗೆ ಅರ್ಜಿದಾರರು ತಮ್ಮ ವಾದಗಳನ್ನು ಪೂರ್ಣಗೊಳಿಸಬೇಕು ಎಂದು ಅದು ಸೂಚಿಸಿತು.