ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ [ಫಾತಿಮಾ ಬುಶ್ರಾ vs ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಹತ್ತು ದಿನಗಳ ಅವಧಿಯಲ್ಲಿ ಮೇಲ್ಮನವಿದಾರರ ಪರ ವಾದಿಸಿದ ಇಪ್ಪತ್ತೊಂದು ವಕೀಲರು ಮತ್ತು ಪ್ರತಿವಾದಿಗಳ ಪರ ವಾದಿಸಿದ ಐವರು ನ್ಯಾಯವಾದಿಗಳು ಸೇರಿದಂತೆ ಎಲ್ಲಾ ಪಕ್ಷಕಾರರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಇಂದು ಪೂರ್ಣಗೊಳಿಸಿತು.
“ನಾವು ನಿಮ್ಮೆಲ್ಲರ ವಾದ ಆಲಿಸಿದ್ದೇವೆ. ಈಗ ನಮ್ಮ ಹೋಂವರ್ಕ್ ಆರಂಭವಾಗುತ್ತದೆ. ತುಂಬಾ ಧನ್ಯವಾದಗಳು” ಎಂದು ಪೀಠ ಹೇಳಿತು.
ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ಮಾರ್ಚ್ 15ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಮೇಲ್ಮನವಿದಾರರು ತಮ್ಮ ಖಂಡನಾ ವಾದದಲ್ಲಿ, ಸರ್ಕಾರದ ಆದೇಶ ನಿರ್ದಿಷ್ಟ ಶಿರವಸ್ತ್ರವನ್ನು ಗುರಿಯಾಗಿಸಿಕೊಂಡಿರುವಾಗ ಅದನ್ನು ಧರ್ಮ ನಿರಪೇಕ್ಷ ನೆಲೆಯಲ್ಲಿ ನೋಡಲಾಗದು ಎಂದು ಒತ್ತಿ ಹೇಳಿದರು.
“ಪೇಟ ಧರಿಸುವಂತಿಲ್ಲ ಎಂಬ ಸುತ್ತೋಲೆ ಹೊರಡಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಇದು ಸಿಖ್ಖರನ್ನು ಗುರಿಯಾಗಿಸಿಕೊಂಡಿಲ್ಲ ಎನ್ನಲಾದೀತೆ?” ಎಂದು ಹಿರಿಯ ವಕೀಲ ಹುಝೆಫಾ ಅಹ್ಮದಿ ಪ್ರಶ್ನಿಸಿದರು.
ಯಾವುದೇ ಮನವಿಯ ಭಾಗವಾಗಿ ಇಲ್ಲದೇ ಇರುವುದರಿಂದ ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದ ಆಂದೋಲನಗಳಿಂದ ಪ್ರೇರಿತರಾಗಿದ್ದಾರೆ ಎಂಬ ವಾದವನ್ನು ಮೌಖಿಕವಾಗಿ ಮಂಡಿಸಲಾಗದು ಎಂದು ಮೇಲ್ಮನವಿದಾರರು ವಾದಿಸಿದರು.
"ಸುತ್ತೋಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಲ್ಲೇಖವಿಲ್ಲ. ಸಾಲಿಸಿಟರ್ ಆ (ಪಿಎಫ್‌ಐ) ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಹೇಳಲು ನಾನು ವಿಷಾದಿಸುತ್ತಿದ್ದು ಅದು ಪ್ರಸ್ತುತವಲ್ಲ. ಅವರು ಅದನ್ನು ಪ್ರಸ್ತಾಪಿಸಿದ್ದರಿಂದ ಇಡೀ ಮಾಧ್ಯಮಗಳು ಅದನ್ನು ಎತ್ತಿಕೊಂಡಿವೆ" ಎಂದು ಹಿರಿಯ ವಕೀಲ ದುಶ್ಯಂತ್ ದವೆ ಹೇಳಿದರು.
ಅಂತಿಮವಾಗಿ, ತೀರ್ಮಾನವೊಂದಕ್ಕೆ ಬರಲು ನ್ಯಾಯಾಲಯ ಪ್ರಕರಣದಲ್ಲಿ ಉಲ್ಲೇಖಿಸಲಾದ ಮೂಲಭೂತ ಹಕ್ಕುಗಳನ್ನು ಪರಿಶೀಲಿಸಬೇಕು ಎಂದು ವಾದಿಸಲಾಯಿತು.
ಇಲ್ಲಿರುವ ಸಮಸ್ಯೆ ಏನೆಂದರೆ ನಾವು ನಡವಳಿಕೆಯ ಗೌಪ್ಯತಾ ಹಕ್ಕನ್ನು ಬಳಸಿ ಏನನ್ನಾದರೂ ಧರಿಸಲು ಹೊರಟು ಅದು ಸವಾಲಿನ ಹಕ್ಕನ್ನು ಉಲ್ಲಂಘಿಸಿದರೆ ಆಗ ಅದನ್ನು ಸಮತೋಲನಗೊಳಿಸಬೇಕು. ಹಾಗೆ (ಉಲ್ಲಂಘನೆ) ಆಗದಿದ್ದರೆ ಆಗ ಈ ಪ್ರಕ್ರಿಯೆಗೆ ಅನುಮತಿಸಬೇಕಾಗುತ್ತದೆ ಎಂದು ವಾದಿಸಲಾಯಿತು.