ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಕುರಿತಾದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಹೇಳಿಕೆ ನೀಡಿರುವ ಪ್ರತಿವಾದಿ ವಿದ್ಯಾರ್ಥಿನಿಯರು, ಪ್ರತಿಭಟನೆ ನಡೆಸಿದ್ದ ವಿವಿಧ ಸಂಘಟನೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಎನ್ ಪಿ ಅಮೃತೇಶ್ ಅವರು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯದ ತೀರ್ಪಿನ ವಿರುದ್ಧ ಆಕ್ಷೇಪಾರ್ಹವಾದ ರೀತಿಯಲ್ಲಿ ನಡೆದುಕೊಂಡಿರುವ ಒಂಭತ್ತು ವಿದ್ಯಾರ್ಥಿನಿಯರು ಮತ್ತು 16 ಸಂಘಟನೆ ಮತ್ತು ಅವುಗಳ ಮುಖ್ಯಸ್ಥರ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆ 1971ರ ಸೆಕ್ಷನ್ 2(ಸಿ) ಅಡಿ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು. ಈ ಸಂಬಂಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಮಾರ್ಚ್ 19ರಂದು ಮನವಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಅನುಮತಿ ಪಡೆಯುವಂತೆ ಹೈಕೋರ್ಟ್ ಮಾರ್ಚ್ 24ರಂದು ಸೂಚಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಮನವಿ, ಅದಕ್ಕೆ ಹೈಕೋರ್ಟ್ ನೀಡಿರುವ ಸೂಚನೆ, ಆಕ್ಷೇಪಾರ್ಹ ಹೇಳಿಕೆಗಳ ಸಿ ಡಿಯನ್ನು ಪರಿಶೀಲನೆಗೆ ಲಗತ್ತಿಸಲಾಗಿದೆ. ಇದನ್ನು ಪರಿಶೀಲಿಸಿ ಅನುಮತಿ ನೀಡುವಂತೆ ಕೋರಲಾಗಿದೆ.
“ಉದ್ದೇಶಪೂರ್ವಕವಾಗಿ ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಉದ್ದೇಶದಿಂದ ತೀರ್ಪು ನೀಡಿದ ಗೌರವಾನ್ವಿತ ನ್ಯಾಯಾಲಯವನ್ನು ಟೀಕಿಸಿರುವುದು ಆಘಾತ ಮತ್ತು ಆಶ್ಚರ್ಯ ಉಂಟು ಮಾಡಿದೆ. ಈ ಮೂಲಕ ನ್ಯಾಯಾಲಯದ ಘನತೆಯನ್ನು ಕುಂದಿಸಿ, ನೇರವಾಗಿ ಪೂರ್ವಾಗ್ರಹ ಪೀಡಿತಗೊಳಿಸಲಾಗಿದೆ. ನ್ಯಾಯಿಕ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲಾಗಿದೆ. ಈ ಪ್ರಕ್ರಿಯೆ ನಡುವೆ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಇದರ ಜೊತೆಗೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ಹಲವು ಸಂದರ್ಶನ, ಪ್ರಕಟಣೆ ಬಿಡುಗಡೆ ಮಾಡಲಾಗಿದೆ” ಎಂದು ರಿಜಿಸ್ಟ್ರಾರ್‌ಗೆ ನೀಡಿದ್ದ ಮನವಿಯಲ್ಲಿ ಅಮೃತೇಶ್ ಉಲ್ಲೇಖಿಸಿದ್ದರು.
ಹಿಜಾಬ್ ನಿಷೇಧ ಪ್ರಶ್ನಿಸಿದ್ದ ವಿದ್ಯಾರ್ಥಿನಿಯರಾದ ಶ್ರೀಮತಿ ರೇಶಮ್, ಆಯೇಷಾ ಹಜೀರಾ ಅಲ್ಮಸ್, ಅಲಿಯಾ ಅಸ್ಸಾದಿ, ಶಫಾ, ಮುಸ್ಕಾನ್ ಜೈನಾಬ್, ಐಶತ್ ಶಿಫಾ, ತೈರಿನ್ ಬೇಗಂ, ಶಾಹೀನಾ, ಶಿಫಾ ಮಿನಜ್, ಮೌಲಾನಾ ಸಗೀರ್ ಅಹ್ಮದ್ ರಶ್ದಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಲಾಗಿದೆ.
ಅಲ್ಲದೆ, ಸಂಘಟನೆಗಳಾದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆ, ಭಾರತೀಯ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಸಂಘಟನೆ, ದಲಿತ ವಿದ್ಯಾರ್ಥಿ ಪರಿಷತ್, ಕಲೆಕ್ಟಿವ್, ಇಸ್ಲಾಮಿಕ್ ವಿದ್ಯಾರ್ಥಿನಿಯರ ಸಂಘಟನೆ, ಜಮೈತ್ ಇ ಉಲ್ಮಾ ಹಿಂದ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ, ಜಮಾತ್ ಇ ಇಸ್ಲಾಮಿ ಹಿಂದ್, ಲಮೈತ್ ಇ ಅಹ್ಲೆ ಹದೀಸ್, ಜಮಾತ್ ಇ ಅಹ್ಲೆ ಸುನ್ನತ್ ಕರ್ನಾಟಕ, ಕರ್ನಾಟಕ ಮುತ್ತಹಿದ ಮುಸ್ಲಿಮ್ ಮಹಜ್, ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಫಾರ್ವರ್ಡ್ ಟ್ರಸ್ಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವನ್ನು ಪ್ರತಿವಾದಿಗಳನ್ನಾಗಿಸಿದ್ದು ಅವರ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಲಾಗಿದೆ. ನ್ಯಾಯಾಂಗ ನಿಂದನೆ ಸಾಬೀತುಪಡಿಸಲು ಸುದ್ದಿ ವಾಹಿನಿಗಳು ಪ್ರಸಾರ ಮಾಡಿರುವ ವಿಡಿಯೊ ಕ್ಲಿಪ್ ಪಡೆಯಲು ಸುದ್ದಿ ವಾಹಿನಿಗಳ ಸಂಪಾದಕರನ್ನು ಆಲಿಸಬಹುದು ಎಂದು ಹೇಳಲಾಗಿದೆ.