[ಹಿಜಾಬ್‌ ತೀರ್ಪು] ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆ: ನ್ಯಾಯಾಂಗ ನಿಂದನೆ ಅಡಿ ಕ್ರಮ ಕೈಗೊಳ್ಳಲು ಕೋರಿದ ವಕೀಲ

ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಮತ್ತು ಘನತೆ ಕುಂದಿಸಿ, ನ್ಯಾಯದಾನಕ್ಕೆ ತಡೆ ಮಾಡುವ ಯತ್ನವನ್ನು ಕೆಲವು ಸಂಘಟನೆಗಳು ಮಾಡಿವೆ ಎಂದು ವಕೀಲ ಎನ್‌ ಪಿ ಅಮೃತೇಶ್‌ ಮನವಿಯಲ್ಲಿ ವಿವರಿಸಿದ್ದಾರೆ.
Hijab Ban, Karnataka High Court

Hijab Ban, Karnataka High Court

ಕಳೆದ ವಾರ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಪೂರ್ಣ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಏಳು ಸಂಘಟನೆಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ವಕೀಲ ಎನ್‌ ಪಿ ಅಮೃತೇಶ್‌ ಮನವಿ ಸಲ್ಲಿಸಿದ್ದಾರೆ.

ಹಿಜಾಬ್‌ ತೀರ್ಪಿನ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಿದ್ದ ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌), ಕರ್ನಾಟಕದ ಭಾರತೀಯ ವಿದ್ಯಾರ್ಥಿ ಇಸ್ಲಾಮಿಕ್‌ ಸಂಘಟನೆ, ಸ್ಟೂಡೆಂಟ್‌ ಕ್ರಿಶ್ಚಿಯನ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಎಸ್‌ಸಿಎಂಐ), ಕರ್ನಾಟಕ ದಲಿತ ವಿದ್ಯಾರ್ಥಿ ಪರಿಷತ್‌, ಬೆಂಗಳೂರಿನ ಕಲೆಕ್ಟೀವ್‌, ಕರ್ನಾಟಕ ವಿದ್ಯಾರ್ಥಿನಿ ಇಸ್ಲಾಮಿಕ್‌ ಸಂಘಟನೆ, ಕರ್ನಾಟಕದ ಸಗೀರ್‌ ಅಹ್ಮದ್‌ ರಶ್ದಿ ಆಫ್‌ ಇಮಾರತ್- ಇ-ಶರಿಯತ್‌ ಮತ್ತು ಇತರೆ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಲಾಗಿದೆ.

ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಮತ್ತು ಘನತೆ ಕುಂದಿಸಿ, ನ್ಯಾಯದಾನಕ್ಕೆ ತಡೆ ಮಾಡುವ ಯತ್ನವನ್ನು ಕೆಲವು ಸಂಘಟನೆಗಳು ಮಾಡಿವೆ ಎಂದು ವಕೀಲ ಎನ್‌ ಪಿ ಅಮೃತೇಶ್‌ ಮನವಿಯಲ್ಲಿ ವಿವರಿಸಿದ್ದಾರೆ.

“ಉದ್ದೇಶಪೂರ್ವಕವಾಗಿ ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಉದ್ದೇಶದಿಂದ ತೀರ್ಪು ನೀಡಿದ ಗೌರವಾನ್ವಿತ ನ್ಯಾಯಾಲಯವನ್ನು ಟೀಕಿಸಿರುವುದು ಆಘಾತ ಮತ್ತು ಆಶ್ಚರ್ಯ ಉಂಟು ಮಾಡಿದೆ. ಈ ಮೂಲಕ ನ್ಯಾಯಾಲಯದ ಘನತೆಯನ್ನು ಕುಂದಿಸುವ, ನೇರವಾಗಿ ಪೂರ್ವಾಗ್ರಹ ಪೀಡಿತಗೊಳಿಸಲಾಗಿದೆ. ನ್ಯಾಯಿಕ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲಾಗಿದೆ. ಈ ಪ್ರಕ್ರಿಯೆ ನಡುವೆ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಇದರ ಜೊತೆಗೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ಹಲವು ಸಂದರ್ಶನ, ಪ್ರಕಟಣೆ ಬಿಡುಗಡೆ ಮಾಡಲಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಹಿಜಾಬ್‌ ಪ್ರಕರಣದಲ್ಲಿನ ಅರ್ಜಿದಾರರು ಮಾಧ್ಯಮಗಳ ಜೊತೆ ಮಾತನಾಡುವಾಗ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ್ದು, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

Also Read
[ಹಿಜಾಬ್‌ ತೀರ್ಪು] ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿಗೆ ಕೊಲೆ ಬೆದರಿಕೆ; ಎಫ್‌ಐಆರ್‌ ದಾಖಲು

ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆ 1971ರ ಸೆಕ್ಷನ್‌ 2(ಸಿ) ಅಡಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಕೋರಿದ್ದಾರೆ. “ಮೇಲಿನ ವಿಚಾರ ಮತ್ತು ವಾಸ್ತವಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಾಮಾನ್ಯ ಜನರ ಹಿತದೃಷ್ಟಿಯಿಂದ ಸಂಘಟನೆಗಳು, ಆಕೇಪಾರ್ಹವಾದ ಮಾತುಗಳನ್ನು ಆಡಿರುವವರು ವಿಶೇಷವಾಗಿ ನ್ಯಾಯಾಲಯದ ತೀರ್ಪು, ನ್ಯಾಯಮೂರ್ತಿಗಳನ್ನು ಟೀಕಿಸಿರುವ ಅರ್ಜಿದಾರರ ವಿರುದ್ದ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.

Also Read
ಹಿಜಾಬ್‌ ತೀರ್ಪು: ಸಿಎಫ್‌ಐ ಅಧ್ಯಕ್ಷ ಅತಾವುಲ್ಲಾ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಹೈಕೋರ್ಟ್‌ಗೆ ಮನವಿ

ಇದಾಗಲೇ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಎಸ್‌ ಉಮಾಪತಿ ಹಾಗೂ ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಭಾರದ್ವಾಜ್‌ ಅವರು ರಿಜಿಸ್ಟ್ರಾರ್‌ ಜನರಲ್‌ಗೆ ಮನವಿ ಮಾಡಿದ್ದಾರೆ. ತಮಿಳುನಾಡು ಮೂಲದ ಕೆಲವರು ವಿಡಿಯೊ ಮೂಲಕ ಆಕ್ಷೇಪಾರ್ಹವಾದ ಮಾತುಗಳನ್ನಾಡಿದ್ದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ವಕೀಲೆ ಸುಧಾ ಕಟ್ವಾ ಅವರು ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿರುವ ಕುರಿತು ವರದಿಯಾಗಿದೆ.

Also Read
[ಹಿಜಾಬ್ ನಿಷೇಧ ತೀರ್ಪು] ಕರ್ನಾಟಕ ಹೈಕೋರ್ಟ್‌ ಸಿಜೆ ಸೇರಿದಂತೆ ಮೂವರು ನ್ಯಾಯಮೂರ್ತಿಗಳಿಗೆ ವೈ ಶ್ರೇಣಿ ಭದ್ರತೆ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಿಜಾಬ್‌ ನಿಷೇಧ ಕುರಿತ ತೀರ್ಪು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೆ ಎಂ ಖಾಜಿ ಅವರಿಗೆ ಕರ್ನಾಟಕ ಸರ್ಕಾರ ವೈ ಶ್ರೇಣಿಯ ಭದ್ರತೆ ಒದಗಿಸಿದೆ.

Related Stories

No stories found.
Kannada Bar & Bench
kannada.barandbench.com