ಹಿಜಾಬ್ ನಿಷೇಧ ಕುರಿತ ತೀರ್ಪು ಪ್ರಕಟಿಸಿದ್ದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೆ ಎಂ ಖಾಜಿ ಅವರಿಗೆ ವೈ ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ತಮಿಳುನಾಡಿನಲ್ಲಿ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಿಗೆ ವೈ ಶ್ರೇಣಿ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ.
ನ್ಯಾಯಮೂರ್ತಿಗಳಿಗೆ ತಮಿಳುನಾಡಿನ ಮದುರೈ ಮೂಲದ ವ್ಯಕ್ತಿಯೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಕೀಲರಾದ ಸುಧಾ ಕಟ್ವಾ ಅವರು ನೀಡಿರುವ ದೂರನ್ನು ಆಧರಿಸಿ ಬೆಂಗಳೂರಿನ ವಿಧಾನಸೌಧ ಠಾಣೆ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದರು.
ಇದರ ಜೊತೆಗೆ, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಕೊಲೆ, ಕ್ರಿಮಿನಲ್ ಬೆದರಿಕೆ, ನಿಂದನಾತ್ಮಕ ಭಾಷೆ ಬಳಕೆ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಚ್ಯುತಿ, ಮುಖ್ಯ ನ್ಯಾಯಮೂರ್ತಿ ಮತ್ತು ಇತರರ ಘನತೆಗೆ ಚ್ಯುತಿಯಾಗುವ ರೀತಿಯಲ್ಲಿ ಆರೋಪಿ ನಡೆದುಕೊಂಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರಿಗೆ ವಕೀಲ ಎಸ್ ಉಮಾಪತಿ ಅವರು ಮನವಿ ಸಲ್ಲಿಸಿದ್ದರು.
ಈ ಬೆಳವಣಿಗೆಗಳ ಬೆನ್ನಿಗೇ ನ್ಯಾಯಮೂರ್ತಿಗಳಿಗೆ ವೈ ಶ್ರೇಣಿ ಭದ್ರತೆ ಒದಗಿಸಲಾಗಿದೆ. ಕಾಲೇಜು ಕ್ಯಾಂಪಸ್‌ಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಅಧಿಕಾರ ರಾಜ್ಯದ ಕಾಲೇಜುಗಳಿಗೆ ಇದೆ ಎಂಬ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಪೂರ್ಣ ಪೀಠ ಎತ್ತಿ ಹಿಡಿದಿತ್ತು.