[ಹಿಜಾಬ್‌ ವಿಚಾರಣೆ] ಲತಾ ಹಾಡು, ಮಾನಸಿಕ ಆರೋಗ್ಯದ ಪಾಡು, ಪಿಐಎಲ್‌ ಸಲ್ಲಿಕೆಯಲ್ಲಿನ ಲೋಪ, ಬೇಸರಿಸಿದ ಪೀಠ

ಹಿಜಾಬ್‌ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ಗಹನ ವಿಚಾರಣೆಯನ್ನು ಕಂಡರೆ ಗುರುವಾರದ ವೇಳೆ ವಿವಿಧ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ಅರ್ಜಿದಾರ ವಕೀಲರು ನ್ಯಾಯಾಲಯದ ತಾಳ್ಮೆ ಕೆಣಕಿದರು.
Quran Hijab and Karnataka HC

Quran Hijab and Karnataka HC

Published on

ಹಿಜಾಬ್‌ ನಿಷೇಧಿಸಿದರೆ ಕುರಾನ್‌ ನಿಷೇಧಿಸಿದಂತೆ ಎಂದು ಪಾರ್ಟಿ ಇನ್‌ ಪರ್ಸನ್‌ (ಅರ್ಜಿದಾರರೇ ವಾದ ಮಂಡಿಸುವುದು) ಆದ ಮನೋವಿಜ್ಞಾನಿ ಹಾಗೂ ವಕೀಲ ಡಾ. ವಿನಯ್‌ ಕುಲಕರ್ಣಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಿದರು.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಐದನೇ ದಿನವಾದ ಗುರುವಾರ ಸಹ ಮುಂದುವರೆಸಿತು.

“ಹಿಜಾಬ್‌ ವಿಚಾರವು ಸಮಾಜದಲ್ಲಿ ಉನ್ಮಾದ (ಹಿಸ್ಟೀರಿಯಾ) ಸೃಷ್ಟಿಸಿದ್ದು, ಇದು ಬಡ ಮುಸ್ಲಿಮ್‌ ಬಾಲಕಿಯರ ಮಾನಸಿಕ ಆರೋಗ್ಯದ ಸಮತೋಲನದ ಮೇಲೆ ಪರಿಣಾಮ ಬೀರುತ್ತಿದೆ. ಹಿಜಾಬ್‌ ನಿಷೇಧಿಸುವುದು ಕುರಾನ್‌ ನಿಷೇಧಿಸುವುದಕ್ಕೆ ಸಮನಾಗುತ್ತದೆ” ಎಂದವರು ಪಾರ್ಟಿ ಇನ್‌ ಪರ್ಸನ್‌ ಆದ ಡಾ. ವಿನಯ್‌ ಕುಲಕರ್ಣಿ.

“ನಿಮಗೆ ಹಿಜಾಬ್‌ ಮತ್ತು ಕುರಾನ್‌ ಒಂದೆಯೇ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಪ್ರತಿಕ್ರಿಯಿಸಿದರು. “ನನಗಲ್ಲ. ಇಡೀ ವಿಶ್ವಕ್ಕೆ. ನಾನು ಹಿಂದೂ ಬ್ರಾಹ್ಮಣ. ಇಡೀ ಜಗತ್ತಿನಲ್ಲಿರುವ ಮುಸ್ಲಿಮ್‌ ಸಮುದಾಯಕ್ಕೆ ಕುರಾನ್‌ ಅನ್ವಯಿಸುತ್ತದೆ” ಎಂದರು. ಆಗ, ಸಿಜೆ ಅವಸ್ಥಿ ಅವರು “ಹಿಜಾಬ್‌ ನಿಷೇಧಿಸಲಾಗಿಲ್ಲ” ಎಂದರು.

“ಹಿಜಾಬ್‌ ಪ್ರಕರಣವು ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕುರಾನ್‌ ನಗಣ್ಯ ಮಾಡಲಾಗದು. ಹಿಜಾಬ್‌, ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಅಥವಾ ನೈತಿಕತೆಗೆ ವಿರುದ್ಧವಾಗಿಲ್ಲ ಎಂದರು. ಕನಿಷ್ಠ ಪವಿತ್ರ ದಿನವಾದ ಶುಕ್ರವಾರದಂದಾದರೂ ಹೆಣ್ಣು ಮಕ್ಕಳು ಹಿಜಾಬ್‌ ಧರಿಸಲು ಅವಕಾಶ ಮಾಡಿಕೊಡಬೇಕು. ರಮ್ಜಾನ್‌ ಮಾಸದಲ್ಲೂ ಮುಸ್ಲಿಮರು ಹಿಜಾಬ್‌ ಧರಿಸಲು ಅವಕಾಶ ಮಾಡಿಕೊಡಬೇಕು” ಎಂದರು. ಈ ವೇಳೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಹಾಡು ಗುನುಗಿ "ಕೆಲವನ್ನು ಪಡೆದುಕೊಂಡು ಕಳೆದುಕೊಳ್ಳಬೇಕಾಗುತ್ತದೆ, ಕೆಲವನ್ನು ಕಳೆದುಕೊಂಡು ಪಡೆಯಬೇಕಾಗುತ್ತದೆ (ಕುಚ್‌ ಪಾಕರ್ ಕೋನಾ ಹೈ, ಕುಚ್‌ ಕೋಕರ್‌ ಪಾನಾ ಹೈ)" ಎಂದು ತಮ್ಮ ಬೇಡಿಕೆ ಸಮರ್ಥಿಸಿದರು.

ಬಳಿಕ ಹಿರಿಯ ವಕೀಲ ಎ ಎಂ ಧರ್‌ ಅವರು “ಸರ್ಕಾರದ ಆದೇಶವು ರಹಸ್ಯದಿಂದ ಕೂಡಿದ್ದು, ಅದು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ. ಇದಕ್ಕಾಗಿ ನಮಗೆ ತಾಂಜಾನಿಯಾ ಅಥವಾ ಲಂಡನ್ ತೀರ್ಪುಗಳು ಬೇಕಿಲ್ಲ… ಪವಿತ್ರ ಗ್ರಂಥವಾದ ಸಂವಿಧಾನದಲ್ಲಿನ ಮಾನದಂಡಗಳನ್ನು ಆಧರಿಸಿ ಸರ್ಕಾರದ ಆದೇಶವನ್ನು ವಿಶ್ಲೇಷಿಸಬೇಕಿದೆ” ಎಂದರು.

ಆಗ ಪೀಠವು ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಮನವಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದಿತು. “ನಾಗರಿಕ ಪ್ರಕ್ರಿಯಾ ಸಂಹಿತೆ ನಿಯಮಗಳನ್ನು ನಮ್ಮ ರಿಟ್‌ ಮನವಿ ನಿಯಮಗಳು ಅಳವಡಿಸಿಕೊಂಡಿವೆ, ನೀವು ಅವುಗಳನ್ನು ಪಾಲಿಸಿಲ್ಲ. ಯಾವ ಸಂಸ್ಥೆಯಲ್ಲಿ ನಿಮ್ಮ ಅರ್ಜಿದಾರರು ಕಲಿಯುತ್ತಿದ್ದಾರೆ. ಅವರನ್ನು ಹೇಗೆ ಶಾಲೆಗೆ ತೆರಳದಂತೆ ನಿರ್ಬಂಧಿಸಲಾಗಿದೆ?” ಎಂದು ನ್ಯಾ. ಕೃಷ್ಣ ದೀಕ್ಷಿತ್‌ ಅವರು ಪ್ರಶ್ನೆ ಹಾಕಿದರು. ಆದರೆ ಧರ್‌ ತಮ್ಮ ಕಕ್ಷೀದಾರರು ಅವರು ಕಲಿಯುತ್ತಿರುವ ಶಾಲೆಗಳನ್ನು ಉಲ್ಲೇಖಿಸುವಲ್ಲಿ ವಿಫಲರಾದರು. ಅಂತಿಮವಾಗಿ ಅವರಿಗೆ ಹೊಸ ಮನವಿ ಸಲ್ಲಿಸಲು ಪೀಠವು ಅವಕಾಶ ಮಾಡಿಕೊಟ್ಟಿತು.

ಇದಕ್ಕೂ ಮುನ್ನ, ಸಾಮಾಜಿಕ ಕಾರ್ಯಕರ್ತರೊಬ್ಬರ ಪರವಾಗಿ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ಅವರು ವಾದ ಆರಂಭಿಸಿ “ರಾಜ್ಯ ಸರ್ಕಾರದ ನಿಲುವು ಭಾರತ ಅಂಗೀಕರಿಸಿರುವ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಅನುಗುಣವಾಗಿಲ್ಲ” ಎಂದರು.

ಅರ್ಜಿ ಸಲ್ಲಿಸುವಾಗ ಹೈಕೋರ್ಟ್‌ನ ಸಾರ್ವಜನಿಕ ಹಿತಾಸಕ್ತಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಪೀಠವು ಕೊತ್ವಾಲ್‌ ಅವರಿಗೆ ಹೇಳಿತು. “ಇಂಥ ಮಹತ್ವದ ಪ್ರಕರಣ ಇರುವಾಗ ನೀವು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ದಾಖಲೆಗಳು ಸರಿಯಾಗಿಲ್ಲ. ಈ ಸಮಯವನ್ನು ನಿಮ್ಮ ಸ್ನೇಹಿತರು ವಾದಕ್ಕೆ ಬಳಸಿಕೊಳ್ಳಬಹುದಿತ್ತು” ಎಂದು ನ್ಯಾ. ದೀಕ್ಷಿತ್‌ ಅಸಮಾಧಾನ ಹೊರಹಾಕಿದರು.

Also Read
ಬಳೆ, ಶಿಲುಬೆಗೆ ನಿಷೇಧವಿಲ್ಲ; ಮುಸ್ಲಿಮ್‌ ವಿದ್ಯಾರ್ಥಿನಿಯರನ್ನೇ ಏಕೆ ಗುರಿಯಾಗಿಸಲಾಗಿದೆ: ಪ್ರೊ. ರವಿವರ್ಮ ಕುಮಾರ್‌

ಆಗ ಕೊತ್ವಾಲ್‌ ಅವರು “ಕೆಲವು ಪುಟ ಸಂಖ್ಯೆಯ ವಿಚಾರದಲ್ಲಿ ಸಮಸ್ಯೆ ಇರಬಹುದು. ನಿಯಮ ಪಾಲಿಸಿರುವೆ. ತಾಂತ್ರಿಕ ವಿಚಾರಗಳ ಬಗ್ಗೆ ಹೆಚ್ಚು ಪರಿಶೀಲನೆ ನಡೆಸಬಾರದಾಗಿ ಕೋರುವೆ. ಎರಡು-ಮೂರು ನಿಮಿಷಗಳಲ್ಲಿ ನನ್ನ ವಾದ ಪೂರ್ಣಗೊಳಿಸುವೆ” ಎಂದರು. ಇದಕ್ಕೆ ಪೀಠವು “ನೀವು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. ದಂಡ ವಿಧಿಸಿ ನಿಮ್ಮ ಮನವಿಯನ್ನು ವಜಾ ಮಾಡುತ್ತೇವೆ. ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ, ಮನವಿ ವಜಾ ಮಾಡುತ್ತೇವೆ” ಎಂದಿತು.

ಮಧ್ಯಪ್ರವೇಶ ಕೋರಿರುವ ವಕೀಲ ಸುಭಾಷ್‌ ಝಾ ಅವರು “ಹಿಜಾಬ್‌ ಮತ್ತು ಉದ್ದನೆಯ ಗಡ್ಡದ ಕುರಿತು ಹೈಕೋರ್ಟ್‌ಗಳಲ್ಲಿ ಇದೇ ಮೊದಲ ಬಾರಿಗೆ ವಾದ ನಡೆಯುತ್ತಿಲ್ಲ. ಬಾಂಬೆ ಮತ್ತು ಕೇರಳ ಹೈಕೋರ್ಟ್‌ಗಳು ಈ ಬಗ್ಗೆ ವಾದ ಆಲಿಸಿ, ಇದು ಇಸ್ಲಾಮ್‌ನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿವೆ. ಈಗ ಎಬ್ಬಿಸಲಾಗಿರುವ ವಿಚಾರಗಳಿಗೆ ಉತ್ತರವಿದೆ” ಎಂದು. ಆಗ ಪೀಠವು ಮಧ್ಯಪ್ರವೇಶಗಾರರಿಗೆ ಈಗ ಅವಕಾಶ ನೀಡಲಾಗದು. ಈ ಕುರಿತು ಸೂಕ್ತ ಸಂದರ್ಭದಲ್ಲಿ ನಿರ್ಧರಿಸಲಾಗುವುದು” ಎಂದಿತು.

ಮಧ್ಯಸ್ಥಿಕೆಯ ಮೂಲಕ ಪ್ರಕರಣ ಪರಿಹರಿಸುವ ಕುರಿತು ವಕೀಲರೊಬ್ಬರು ಹೇಳಿದಾಗ ಸಿಜೆ ಅವಸ್ಥಿ ಅವರು “ಇಲ್ಲಿ ಸಾಂವಿಧಾನಿಕ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಈ ರೀತಿಯಾಗಿ ಮಧ್ಯಸ್ಥಿಕೆ ಮಾಡಲಾಗದು. ಇದನ್ನು ಒಪ್ಪಿದ ಉಭಯ ಪಕ್ಷಕಾರರ ನಡುವೆ ಮಾತ್ರ ಸಂಧಾನ ನಡೆಸಬಹುದು” ಎಂದರು.

ರಾಜ್ಯ ಸರ್ಕಾರದ ಪರವಾಗಿ ನಾಳೆ ವಾದ ಮಂಡಿಸುವುದಾಗಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಗಳನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಅವರು ನಾವದಗಿ ಅವರ ಬಳಿಕ ವಾದಿಸುವುದಾಗಿ ತಿಳಿಸಿದರು. ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com