![[ಹಿಜಾಬ್ ವಿವಾದ] ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೊರೆ ಹೋದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ](http://media.assettype.com/barandbench-kannada%2F2022-03%2F0478741f-86bc-4e30-9113-715a590691fc%2FVYmD3gjn.jpeg?w=480&auto=format%2Ccompress&fit=max)
![[ಹಿಜಾಬ್ ವಿವಾದ] ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಮೊರೆ ಹೋದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ](http://media.assettype.com/barandbench-kannada%2F2022-03%2F0478741f-86bc-4e30-9113-715a590691fc%2FVYmD3gjn.jpeg?w=480&auto=format%2Ccompress&fit=max)
ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಅಲ್ಲ ಮತ್ತು ಕಾಲೇಜಿನಲ್ಲಿ ಹಿಜಾಬ್‌ಗೆ ಅನುಮತಿ ನೀಡುವ ಅಧಿಕಾರವನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ಒದಗಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದ್ದ ರಾಜ್ಯ ಹೈಕೋರ್ಟ್ ತೀರ್ಪನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ [ಮುನಿಸಾ ಬುಶ್ರಾ ಅಬೇಡಿ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].
ಸಂವಿಧಾನದ 25(1) ಮತ್ತು 19(1) (ಎ) ವಿಧಿಯಡಿಯಲ್ಲಿ ಅರ್ಜಿಗಳು ತಮ್ಮ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸಿರುವ ಅಗತ್ಯ ಧಾರ್ಮಿಕ ಆಚರಣೆಯ ಸಿದ್ಧಾಂತವನ್ನು ಪರಿಗಣಿಸುವ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಪ್ರಮುಖ ಸಮಸ್ಯೆಯನ್ನು ಹೈಕೋರ್ಟ್ ಪರಿಹರಿಸಲಿಲ್ಲ ಎಂದು ಎಐಎಂಪಿಎಲ್‌ಬಿ ವಾದಿಸಿದೆ.
ವಿವಿಧ ಗುಂಪುಗಳ ಬೇರೆ ಬೇರೆ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳನ್ನು ನಿರಾಕರಿಸುವುದರಿಂದ ಏಕರೂಪತೆ ತರುವ ಕಲ್ಪನೆಯನ್ನು ಉನ್ನತ ಪೀಠದ ಮುಂದೆ ಇರಿಸಲಾಗದು ಎಂದು ಅದು ಹೇಳಿದೆ.
ಅರ್ಜಿಯ ಇತರೆ ಪ್ರಮುಖಾಂಶಗಳು
ಒಂದು ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು 'ಬಟ್ಟೆಯೊಂದರಿಂದ ಕೂದಲು ಮುಚ್ಚಲು' ಅವಕಾಶ ನೀಡದೆ ಸಮವಸ್ತ್ರದಲ್ಲಿ "ಏಕರೂಪತೆ" ತರುವುದಕ್ಕೆ ಹೆಚ್ಚು ಒತ್ತು ನೀಡಿರುವುದು ನ್ಯಾಯದ ಅಪಹಾಸ್ಯ.
ಅಗತ್ಯ ಧಾರ್ಮಿಕ ಆಚರಣೆಯ ತತ್ವಗಳ ಅಡಿಯಲ್ಲಿ 'ಅಗತ್ಯತೆʼಗಳ ನಿರ್ಣಯ ಎಂಬುದು ಧಾರ್ಮಿಕ ಪಂಗಡದ ಸಂಪೂರ್ಣ ಸ್ವಾಯತ್ತತೆಯೊಳಗೆ ಬರುತ್ತದೆ.
ಕಾಲಕ್ರಮೇಣ ರಾಜ್ಯದ ಅಂಗಗಳು ಧರ್ಮಗಳನ್ನು ನಿಯಂತ್ರಿಸುವ ಸಲುವಾಗಿ ನಮ್ಮ ದೇಶದಲ್ಲಿ ಆಚರಣೆಯಲ್ಲಿರುವ ಯಾವುದೇ ಮತ್ತು ಪ್ರತಿ ಧರ್ಮದ ಅಗತ್ಯತೆ ಮತ್ತು ಅವಿಭಾಜ್ಯ ಸಂಗತಿಗಳು ಯಾವುವು ಎಂಬುದನ್ನು ನಿರ್ಧರಿಸುವ ಕೆಲಸವನ್ನು ನ್ಯಾಯಾಲಯಗಳು ಸಂಪೂರ್ಣವಾಗಿ ತಮ್ಮ ಮೇಲೆ ವಹಿಸಿಕೊಂಡಿವೆ ಎಂದು ತೋರುತ್ತದೆ.
ಎಲ್ಲಾ ವಿದ್ಯಾರ್ಥಿಗಳನ್ನು ಏಕರೂಪವಾಗಿ ಪರಿಗಣಿಸುವ ಮೂಲಕ ಅರ್ಥವಾಗುವ ವ್ಯತ್ಯಾಸದ ಪರಿಕಲ್ಪನೆಯನ್ನು ಹೈಕೋರ್ಟ್ ಸಂಪೂರ್ಣ ತಪ್ಪಾಗಿ ಅರ್ಥೈಸಿದೆ.
ಕೆ ಎಸ್ ಪುಟ್ಟಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ಹಾಗೂ ಕಂಟಾರು ರಾಜೀವರು ಮತ್ತು ಭಾರತೀಯ ಕಿರಿಯ ವಕೀಲರ ಸಂಘದ ನಡುವಣ ಪ್ರಕರಣದಲ್ಲಿ ನೀಡಲಾಗಿರುವ ತೀರ್ಪುಗಳ ಮೂಲಕ ಉಂಟಾಗಿರುವ ಕಾನೂನು ಪ್ರಭಾವ ಗುರುತಿಸಲು ಕರ್ನಾಟಕ ಹೈಕೋರ್ಟ್ ವಿಫಲವಾಗಿದೆ.
ಪ್ರಶ್ನೆಗಳನ್ನು ರೂಪಿಸುವಾಗ ಹೈಕೋರ್ಟ್ ಸ್ಪಷ್ಟತೆ ಕಾಯ್ದುಕೊಳ್ಳದ ಕಾರಣ, ವೈವಿಧ್ಯಮಯ ಸಾಂವಿಧಾನಿಕ ತತ್ವಗಳ ಮೇಲಿನ ಚರ್ಚೆಗಳು ಪರಿಕಲ್ಪನಾತ್ಮಕವಾಗಿ ಅತಿಕ್ರಮಣಗೊಂಡು ಪರೋಕ್ಷ ತಾರತಮ್ಯಕ್ಕೆ ಕಾರಣವಾಗಿದೆ.
ವಾಸ್ತವವೆಂದರೆ ಶಿಕ್ಷಣ ಹಕ್ಕು ಪಡೆಯಲು ಅರ್ಜಿದಾರರು ಸ್ವಾಭಿಮಾನ ಮತ್ತು ಘನತೆಯನ್ನು ಬದಿಗಿಟ್ಟು ಹಿಜಾಬ್ ತೊರೆಯಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಕುರಾನ್‌ನಲ್ಲಿನ ಧರ್ಮಗ್ರಂಥಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ, ಹಿಜಾಬ್ ಆಚರಣೆ ಕಡ್ಡಾಯ ಎಂಬ ಬಗ್ಗೆ ಇಸ್ಲಾಂ ಧರ್ಮದ ಎಲ್ಲಾ ಪಂಥದ ವಿದ್ವಾಂಸರಲ್ಲಿ ಒಮ್ಮತವಿದೆ.
ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಎರಡು ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಹಿಜಾಬ್ ವಿವಾದ ಪ್ರಕರಣದ ತುರ್ತು ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಎರಡು ಬಾರಿ ತಿರಸ್ಕರಿಸಿದೆ.