ಹಿಜಾಬ್ ನಿಷೇಧ ಕುರಿತಂತೆ ಕರ್ನಾಟಕ ಸರ್ಕಾರದ ಆದೇಶ ಎತ್ತಿ ಹಿಡಿದ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.
ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ಪ್ರಕರಣವನ್ನು ಭಾವೋದ್ರೇಕಗೊಳಿಸದಂತೆ ತಿಳಿಸಿದ ಸಿಜೆಐ ರಮಣ ಅವರು ವಿಚಾರಣೆಗೆ ಯಾವುದೇ ನಿರ್ದಿಷ್ಟ ದಿನಾಂಕ ನೀಡಲು ನಿರಾಕರಿಸಿದರು.
ಪರೀಕ್ಷೆಗಳು ಸಮೀಪಿಸುತ್ತಿವೆ ಎಂದು ಕಾಮತ್ ಅವರು ಮನವಿ ಮಾಡಿದಾಗ "ಇದಕ್ಕೂ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ. ವಿಷಯವನ್ನು ಭಾವೋದ್ರೇಕಗೊಳಿಸಬೇಡಿ" ಎಂದು ನ್ಯಾಯಮೂರ್ತಿಗಳು ಹೇಳಿದರು.
“ಇದರಿಂದ ಒಂದು ವರ್ಷ (ವ್ಯರ್ಥವಾಗಿ) ಹೋಗುತ್ತದೆ. ಅವರಿಗೆ ಶಾಲೆಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ” ಎಂದು ಕಾಮತ್ ಅವರು ಪಟ್ಟು ಹಿಡಿದರಾದರೂ ನ್ಯಾ. ರಮಣ ಬೇರೆ ಪ್ರಕರಣದ ವಿಚಾರಣೆಗೆ ಮುಂದಾದರು.
ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಸಂಬಂಧ ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡುವ ಸರ್ಕಾರಿ ಆದೇಶವನ್ನು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠ ಹೀಗೆ ಹೇಳಿತ್ತು:
- ಹಿಜಾಬ್ ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ;
- ಶಾಲಾ ಸಮವಸ್ತ್ರದ ಸೂಚನೆಯು ಸಂವಿಧಾನದ 19 (1) (ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಸಾಂವಿಧಾನಿಕವಾಗಿ ಅನುಮತಿಸುವ ಸಮಂಜಸ ನಿರ್ಬಂಧವಾಗಿದೆ.
- ಆದೇಶ ರವಾನಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರದ ಸುತ್ತೋಲೆ ಅನೂರ್ಜಿತವಾಗಿದೆ ಎಂದು ಯಾರೂ ವಾದಿಸಿಲ್ಲ.