ಅದಾನಿ ಸಮೂಹದ ವಿರುದ್ಧ ಅಮೆರಿಕದ ಬಂಡವಾಳ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ್ದ ವಂಚನೆ ಆರೋಪಗಳ ಬಗ್ಗೆ ತೆಗೆದುಕೊಂಡ ಕ್ರಮ ಕುರಿತು ಸೆಬಿ ಸ್ಥಿತಿಗತಿ ವರದಿ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಕಳೆದ ಜನವರಿ 3ರಂದು ಮೂರು ತಿಂಗಳ ಕಾಲಾವಕಾಶ ನೀಡಿತ್ತು ಎಂದು ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಮೇಲ್ಮನವಿ ತಿಳಿಸಿದೆ.
ಸಮೂಹದ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ಯಾವುದಾದರೂ ಪರ್ಯಾಯ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಲು ಅಥವಾ ಸೆಬಿ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಕೂಡ ಸುಪ್ರೀಂ ಕೋರ್ಟ್ ಅದೇ ಸಂದರ್ಭದಲ್ಲಿ ನಿರಾಕರಿಸಿತ್ತು. ಪತ್ರಿಕಾ ವರದಿ ಆಧರಿಸಿ ಸೆಬಿ ವಿವಾದದ ಕುರಿತು ಕ್ರಮ ಕೈಗೊಳ್ಳಬೇಕು ಎಂದು ನಿರೀಕ್ಷಸಲಾಗದು ಎಂದಿದ್ದ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದು ಸೆಬಿಗೆ ಬಿಟ್ಟ ವಿಚಾರ ಎಂದಿತ್ತು.
ವಿಶಾಲ್ ತಿವಾರಿ ಸಲ್ಲಿಸಿರುವ ಮೇಲ್ಮನವಿಯಲ್ಲಿ, ಸುಪ್ರೀಂ ಕೋರ್ಟ್ ಸೆಬಿಗೆ ಮೂರು ತಿಂಗಳಲ್ಲಿ ವರದಿ ನೀಡುವುದು 'ಅಪೇಕ್ಷಣೀಯ' ಎಂದಿತ್ತು. ಹಾಗೆಂದ ಮಾತ್ರಕ್ಕೆ ಗಡುವು ವಿಧಿಸಿರಲಿಲ್ಲ ಎಂದರ್ಥವಲ್ಲ ಎಂದು ಹೇಳಲಾಗಿದೆ. ಹಾಗಾಗಿ, ತನಿಖೆಯ ಕುರಿತಾದ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಕೋರಲಾಗಿದೆ.
ಮೂರು ತಿಂಗಳ ಗಡುವು ಮುಗಿದರೂ ವರದಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ತಿವಾರಿ (ಜನವರಿ 3 ರ ಆದೇಶ ದೊರೆತ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರು) ಅವರು ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕೋರಿರುವ ಪ್ರಮುಖ ಅಂಶಗಳು ಹೀಗಿವೆ:
- ಜನವರಿ 3ರಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ಕುರಿತು ಸೆಬಿಯು ತನಿಖಾ ವರದಿಯ ಸಲ್ಲಿಸಬೇಕು.
- ಷೇರು ಮಾರುಕಟ್ಟೆಯನ್ನು ಬಲಪಡಿಸಲು ನ್ಯಾಯಾಲಯ ರೂಪಿಸಿದ್ದ ತಜ್ಞರ ಸಮಿತಿಯ ಸಲಹೆಗಳನ್ನು ಪರಿಗಣಿಸಿದೆಯೇ ಎಂಬ ಕುರಿತು ಕೇಂದ್ರ ಸರ್ಕಾರ ಮತ್ತು ಸೆಬಿ ಸ್ಥಿತಿಗತಿ ವರದಿ ಸಲ್ಲಿಕೆ ಮಾಡಬೇಕು.
- ಲೋಕಸಭೆ 2024ರ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಕುಸಿತ ಮತ್ತು ಹೂಡಿಕೆದಾರರು ಅನುಭವಿಸಿದ ನಷ್ಟದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸೆಬಿ ವಿವರವಾದ ವರದಿ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಲ್ಲದೆ ಪ್ರಸ್ತುತ ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸಂಪೂರ್ಣ ತಪ್ಪಾಗಿ ಗ್ರಹಿಸಿದ್ದು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡದೇ ಇರುವುದಕ್ಕೆ ಸಮಂಜಸ ಕಾರಣ ಏನೆಂದು ತಿಳಿಸಿಲ್ಲ. ಸೆಬಿಯ ತನಿಖೆಗೆ ನ್ಯಾಯಾಲಯ ಯಾವುದೇ ಗಡುವು ವಿಧಿಸಿಲ್ಲ ಎಂದು ರಿಜಿಸ್ಟ್ರಾರ್ ತರ್ಕಿಸಿರುವುದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಜೊತೆಗೆ (ಅದಾನಿ ಸಮೂಹದಲ್ಲಿ ಹೂಡಿಕೆ ಮಾಡುವ ಮೂಲಕ) ಸೆಬಿ ಮುಖ್ಯಸ್ಥೆ ಮಾಧಬಿ ಬುಚ್ ಹಿತಾಸಕ್ತಿ ಸಂಘರ್ಷ ಹೊಂದಿದ್ದು ಅದಾನಿ ಸಮೂಹದ ವಿರುದ್ಧ ಸೆಬಿ ತನಿಖೆಗೆ ಇದು ಅಡ್ಡಿಯಾಗಬಹುದು ಎಂದ ಹಿಂಡೆನ್‌ಬರ್ಗ್ ರಿಸರ್ಚ್‌ನ ಇತ್ತೀಚಿನ ವರದಿಯನ್ನು ಈ ಮನವಿ ಎತ್ತಿ ತೋರಿಸಿದೆ.