ಅದಾನಿ ಪ್ರಕರಣ: ನಿಯಮ ಉಲ್ಲಂಘನೆ, ಷೇರು ದರ ತಿರುಚಿರುವಿಕೆಗೆ ಸದ್ಯಕ್ಕೆ ಸಾಕ್ಷಿಯಿಲ್ಲ ಎಂದ ಸಮಿತಿ

ಯಾವುದೇ ಉಲ್ಲಂಘನೆಗಳಿಗೆ ಸಂಬಂಧಿಸಿದ ತನ್ನ ಅನುಮಾನಗಳನ್ನು ಕಾನೂನು ಕ್ರಮ ಜರುಗಿಸಬಹುದಾದ ದೃಢವಾದ ಪ್ರಕರಣವಾಗಿ ಪರಿವರ್ತಿಸಲು ಸೆಬಿಗೆ ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಜ್ಞರ ಸಮಿತಿ ಉಲ್ಲೇಖಿಸಿದೆ.
Gautam Adani, Supreme Court and SEBI logo
Gautam Adani, Supreme Court and SEBI logo

ಅದಾನಿ ಸಮೂಹವು ಅಕ್ರಮ ಕೈವಾಡದ ಮೂಲಕ ಷೇರು ದರ ತಿರುಚಿರುವ ಮತ್ತು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಷೇರು ನಿಯಂತ್ರಣ ಮಂಡಳಿ - ಸೆಬಿ ಪ್ರಮಾದ ಎಸಗಿರುವುದು ಕಂಡು ಬಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ಅವರ ನೇತೃತ್ವದ ಏಸಕದಸ್ಯ ಪೀಠವು ಹೇಳಿದೆ.

ಅದಾನಿ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ಬಿಡುಗಡೆ ಮಾಡಿದ ಬಳಿಕ ಸರ್ವೋಚ್ಚ ನ್ಯಾಯಾಲಯುವು ನ್ಯಾ. ಸಪ್ರೆ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಯಾವುದೇ ಉಲ್ಲಂಘನೆಗಳಿಗೆ ಸಂಬಂಧಿಸಿದ ತನ್ನ ಅನುಮಾನಗಳನ್ನು ಕಾನೂನು ಕ್ರಮ ಜರುಗಿಸಬಹುದಾದ ದೃಢವಾದ ಪ್ರಕರಣವಾಗಿ ಪರಿವರ್ತಿಸಲು ಸೆಬಿಗೆ ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ತಜ್ಞರ ಸಮಿತಿ ಉಲ್ಲೇಖಿಸಿದೆ.

“ಈ ಹಂತದಲ್ಲಿ ಸೆಬಿ ನೀಡಿರುವ ವಿವರಣೆ ಮತ್ತು ಅದಕ್ಕೆ ಪೂರಕವಾದ ಪ್ರಾಯೋಗಿಕ ದತ್ತಾಂಶ ಪರಿಗಣಿಸಿದರೆ ಮೇಲ್ನೋಟಕ್ಕೆ ದರ ತಿರುಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೆಬಿಯ ನಿಯಂತ್ರಣದಲ್ಲಿ ವಿಫಲತೆ ಇದೆ ಎಂದು ಸಮಿತಿಗೆ ಹೇಳಲು ಸಾಧ್ಯವಿಲ್ಲ” ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಜ್ಞರ ಸಮಿತಿಯ ವರದಿಯಲ್ಲಿನ ಸಂಕ್ಷಿಪ್ತ ಅಂಶಗಳು:

  • ಅದಾನಿ ಸಮೂಹದ ಪ್ರವರ್ತಕರ ಜೊತೆ ಶಂಕಿತ ಸಂಪರ್ಕ ಹೊಂದಿರುವ 13 ವಿದೇಶಿ ಸಂಸ್ಥೆಗಳು ಫಲಾನುಭವಿ ಮಾಲೀಕರ ಮಾಹಿತಿ ನೀಡಿವೆ;

  • ಅದಾನಿ ಎನರ್ಜಿಯ ದರ ಹೆಚ್ಚಳಕ್ಕೆ ತಿರುಚುವಿಕೆ ಕೊಡುಗೆ ಹೆಚ್ಚಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಗೋಚರಿಸಬಹುದಾದ ಮಾದರಿ ಇಲ್ಲ;

  • ಅದಾನಿ ಸಮೂಹಕ್ಕೆ ಸೇರಿದ ಎಲ್ಲಾ ಷೇರುಗಳನ್ನು ದತ್ತಾಂಶ ಒಳಗೊಂಡ ಚಾರ್ಟ್‌ಗಳನ್ನು ವಿಶ್ಲೇಷಣೆಗೋಸ್ಕರ ಸೆಬಿ ಸಿದ್ಧಪಡಿಸಬೇಕು;

  • ಸಂಬಂಧಿತ ಪಕ್ಷಕಾರರು ನಡೆಸಿರುವ ವರ್ಗಾವಣೆ ಅಥವಾ ಸೆಬಿ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗ ಯಾವುದೇ ಪ್ರಕರಣ ಕಾಣುತ್ತಿಲ್ಲ;

  • ಆರೋಪಕ್ಕೆ ಸಂಬಂಧಿಸಿದಂತೆ ಸೆಬಿಯು ಕೆಲವು ದಿನಗಳಿಂದ ತನಿಖೆ ನಡೆಸುತ್ತಿದ್ದು, ಸೆಬಿಯಿಂದ ಯಾವುದೇ ನಿಯಂತ್ರಣ ವೈಫಲ್ಯವಾಗಿಲ್ಲ;

  • ಸದ್ಯಕ್ಕೆ ಯಾವುದೇ ಸಾಕ್ಷಿ ಇಲ್ಲದಿದ್ದರೂ ಹಿಂಡನ್‌ಬರ್ಗ್‌ ವರದಿಯು ಸೆಬಿ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Also Read
ಅದಾನಿ ಕುರಿತ ಹಿಂಡೆನ್‌ಬರ್ಗ್‌ ವರದಿ: ಆಗಸ್ಟ್ 14ರೊಳಗೆ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಸೆಬಿಗೆ ಸುಪ್ರೀಂ ಸೂಚನೆ

ಅದಾನಿ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಿಂಡನ್‌ಬರ್ಗ್‌ ವರದಿ ಪ್ರಕಟವಾಗುತ್ತಿದ್ದಂತೆ ಸುಮಾರು 100 ಬಿಲಿಯನ್‌ ಡಾಲರ್‌ಗೂ ಹೆಚ್ಚು ನಷ್ಟಕ್ಕೆ ಅದಾನಿ ಸಮೂಹ ಸಂಸ್ಥೆ ತುತ್ತಾಗಿತ್ತು. ಇದರ ಬೆನ್ನಿಗೇ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ ಈ ಸಂಬಂಧ ತನಿಖೆ ನಡೆಸಲು ಆರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು.

ಅದಾನಿ ಸಮೂಹದ ಕಂಪೆನಿಗಳು ತನ್ನ ಷೇರು ಬೆಲೆಯನ್ನು ತಿರುಚಿದ್ದು, ಸಂಬಂಧಪಟ್ಟ ಪಕ್ಷಕಾರರು ನಡೆಸಿರುವ ವರ್ಗಾವಣೆ ಮಾಹಿತಿ ಬಹಿರಂಗಪಡಿಸಲು ವಿಫಲವಾಗಿದೆ. ಇದು ಸೆಬಿ ರೂಪಿಸಿರುವ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಿಂಡೆನ್‌ಬರ್ಗ್‌ ಜನವರಿ 24ರಂದು ಪ್ರಕಟಿಸಿದ ವರದಿಯಲ್ಲಿ ಹೇಳಿತ್ತು. ಸೆಬಿಯು ತನ್ನದೇ ಆದ ತನಿಖೆಯನ್ನು ನಡೆಸುತ್ತಿರುವುದರ ಜೊತೆಗೆ ಸಮಿತಿಯ ತನಿಖೆಯಲ್ಲೂ ಸಹಕರಿಸುತ್ತಿದೆ.

Related Stories

No stories found.
Kannada Bar & Bench
kannada.barandbench.com