ಅದಾನಿ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಿಂಡೆನ್ ಬರ್ಗ್ ನೀಡಿದ್ದ ಸಂಶೋಧನಾ ವರದಿಯ ಸುತ್ತಲಿನ ವಿವಾದ ಮತ್ತು ಆ ಸಂಸ್ಥೆಯ ವಿರುದ್ಧದ ಆರೋಪಗಳ ಕುರಿತು ನಡೆಸಿರುವ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸುಪ್ರೀಂ ಕೋರ್ಟ್ ಆಗಸ್ಟ್ 14ರವರೆಗೆ ಕಾಲಾವಕಾಶ ನೀಡಿದೆ [ವಿಶಾಲ್ ತಿವಾರಿ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅದಾನಿ ಸಮೂಹದ ವ್ಯವಹಾರಗಳ ತನಿಖೆ ಹೆಚ್ಚು ಸಂಕೀರ್ಣಮಯವಾಗಿದ್ದು ತನಿಖೆ ಮಾಡಲು ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಸೆಬಿ ಕೋರಿದ ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ಆದೇಶ ನೀಡಿತು.
"ನಿಮಗೆ ಸೆ.30ರವರೆಗೆ ಸಮಯಾವಕಾಶ ನೀಡಬಹುದಿತ್ತು. ಆದರೆ ಆಗಸ್ಟ್ 14ರಂದು ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ನಮಗೆ ತಿಳಿಸಿ.. ತನಿಖೆಯ ಸ್ಥಿತಿಯ ಬಗ್ಗೆ ನಮಗೆ ಪರಿಷ್ಕೃತ ವರದಿ ನೀಡಿ" ಎಂದು ಸಿಜೆಐ ಹೇಳಿದರು.
ತಜ್ಞರ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿರುವುದನ್ನು ನ್ಯಾಯಾಲಯವು ದಾಖಲಿಸಿಕೊಂಡಿತು. ನ್ಯಾಯಾಲಯದ ವಿಶ್ಲೇಷಣೆಗೆ ಅನುವು ಮಾಡುವ ಸಲುವಾಗಿ ಪ್ರಕರಣವನ್ನು ಬೇಸಿಗೆ ರಜೆ ಬಳಿಕ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.
ಈ ಹಿಂದೆಯೇ ತಿಳಿಸಿರುವಂತೆ 2016ರಿಂದ ಅದಾನಿ ಸಮೂಹದ ಯಾವುದೇ ಕಂಪೆನಿಗಳನ್ನು ತನಿಖೆ ಮಾಡಿಲ್ಲ ಎಂದು ಸೆಬಿ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹೇಳಿತ್ತು.
ಇಂದು ನಡೆದ ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ಅವರು “ಇದು ಕಂಪೆನಿಯನ್ನು ರಕ್ಷಿಸುವ ಸ್ಪಷ್ಟ ಯತ್ನ” ಎಂದು ಸೆಬಿ ವಿರುದ್ಧ ಆರೋಪ ಮಾಡಿದರು.
“2016 ರಿಂದ ನಡೆಸಲಾಗುತ್ತಿರುವ ತನಿಖೆಯ ಗತಿ ಏನಾಯಿತು ಎಂದು ಸೆಬಿ ದಾಖಲೆಯಲ್ಲಿ ಸಲ್ಲಿಸಬೇಕು. ಅದಾನಿ ಷೇರುಗಳು ಅಸಹಜವಾಗಿ ಶೇ 5,000ರಷ್ಟು ಹೆಚ್ಚಳವಾಗಿದ್ದರೆ ಎಚ್ಚರಿಕೆ ನೀಡಬೇಕಾಗಿತ್ತು. 2021 ರಲ್ಲಿ ಸಂಸತ್ತಿನಲ್ಲಿ ನೀಡಲಾದ ಹೇಳಿಕೆಗಳಿವೆ” ಎಂದರು.
ಈ ಆಪಾದನೆಗಳಿಗೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೆಬಿಗೆ ತನಿಖೆಗೆ ಅಗತ್ಯವಾದ ಸಂಪನ್ಮೂಲವಿದ್ದು ಸಮಸ್ಯೆಯನ್ನು ನಿಭಾಯಿಸಲಿದೆ ಎಂದರು.