ಹಿಂದೂ ಧರ್ಮ ಅತಿ ಪುರಾತನ ಹಾಗೂ ಅತೀವ ಸಹಿಷ್ಣು: ಪತ್ರಕರ್ತ ಜುಬೈರ್ ಜಾಮೀನು ಆದೇಶದಲ್ಲಿ ದೆಹಲಿ ನ್ಯಾಯಾಲಯ
A1

ಹಿಂದೂ ಧರ್ಮ ಅತಿ ಪುರಾತನ ಹಾಗೂ ಅತೀವ ಸಹಿಷ್ಣು: ಪತ್ರಕರ್ತ ಜುಬೈರ್ ಜಾಮೀನು ಆದೇಶದಲ್ಲಿ ದೆಹಲಿ ನ್ಯಾಯಾಲಯ

ಹಾಗಾಗಿ, ದುರುದ್ದೇಶ ಅಥವಾ ಕೇಡಿನಿಂದಲ್ಲದೆ ಹಿಂದೂ ದೇವತೆಗಳ ಹೆಸರಿನಲ್ಲಿ ಸಂಘ ಸಂಸ್ಥೆಗಳಿಗೆ, ವಿವಿಧ ಕೇಂದ್ರಗಳಿಗೆ, ಮಕ್ಕಳಿಗೆ ಹಿಂದೂ ದೈವಗಳ ಹೆಸರಿಡುವದು ಅಪರಾಧವಲ್ಲ ಎಂದ ನ್ಯಾಯಾಲಯ.
Published on

ಪತ್ರಕರ್ತ, ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರಿಗೆ ಜಾಮೀನು ನೀಡುವ ವೇಳೆ ದೆಹಲಿ ನ್ಯಾಯಾಲಯವೊಂದು ಹಿಂದೂ ಧರ್ಮ ಮತ್ತು ಅದರ ಅನುಯಾಯಿಗಳು ಅತ್ಯಂತ ಸಹಿಷ್ಣುಗಳು ಎಂದು ಹೇಳಿದೆ [ಸರ್ಕಾರ ಮತ್ತು ಮೊಹಮ್ಮದ್ ಜುಬೈರ್ ನಡುವಣ ಪ್ರಕರಣ].

ಹನುಮಾನ್‌ ಹೋಟೆಲ್‌ ಹೆಸರಿನ ಛಾಯಾಚಿತ್ರವನ್ನು ಟ್ವೀಟ್‌ ಮಾಡಿದ್ದ ಜುಬೈರ್‌ ಅವರಿಗೆ ಜಾಮೀನು ನೀಡುವ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೆಂದರ್ ಕುಮಾರ್ ಜಂಗಾಲ ಈ ಅಭಿಪ್ರಾಯ ವ್ಯಕ್ತಪಡಿಸಿದರು.

“ಹಿಂದೂ ಧರ್ಮ ಅತ್ಯಂತ ಪ್ರಾಚೀನವಾದ ಮತ್ತು ಅತೀವ ಸಹಿಷ್ಣುತೆ ಹೊಂದಿರುವ ಧರ್ಮವಾಗಿದೆ. ಹಿಂದೂ ಧರ್ಮದ ಅನುಯಾಯಿಗಳೂ ಸಹಿಷ್ಣುಗಳು. ಹಿಂದೂ ಧರ್ಮ ಎಷ್ಟು ಸಹಿಷ್ಣುವಾಗಿದೆ ಎಂದರೆ ಅದರ ಅನುಯಾಯಿಗಳು ತಮ್ಮ ಸಂಘ, ಸಂಸ್ಥೆ, ಕೇಂದ್ರಗಳಿಗೆ ತಮ್ಮ ಪವಿತ್ರ ದೇವರು ಅಥವಾ ದೇವತೆಯ ಹೆಸರನ್ನು ಹೆಮ್ಮೆಯಿಂದ ಇರಿಸುತ್ತಾರೆ” ಎಂದು ನ್ಯಾಯಮೂರ್ತಿಗಳು ದಾಖಲಿಸಿದರು.

Also Read
ಹಿಂದೂ ದೇವರಲ್ಲಿ ನಂಬಿಕೆ ಇರುವ ಅನ್ಯಧರ್ಮೀಯರು ದೇಗುಲ ಪ್ರವೇಶಿಸುವುದನ್ನು ತಡೆಯುವಂತಿಲ್ಲ: ಮದ್ರಾಸ್ ಹೈಕೋರ್ಟ್

ಹಾಗಾಗಿ, ದುರುದ್ದೇಶ ಅಥವಾ ಕೇಡಿನಿಂದಲ್ಲದೆ ಹಿಂದೂ ದೇವತೆಗಳ ಹೆಸರಿನಲ್ಲಿ ಸಂಘ ಸಂಸ್ಥೆಗಳಿಗೆ, ವಿವಿಧ ಕೇಂದ್ರಗಳಿಗೆ, ಮಕ್ಕಳಿಗೆ ಹಿಂದೂ ದೈವಗಳ ಹೆಸರಿಡುವದು ಅಪರಾಧವಲ್ಲ ಎಂದು ನ್ಯಾಯಾಲಯ ಹೇಳಿತು.

ಅಲ್ಲದೆ ರಾಜಕೀಯ ಪಕ್ಷವೊಂದನ್ನು ಉಲ್ಲೇಖಿಸಿ ಜುಬೈರ್‌ “2014ರ ಮೊದಲು ಮತ್ತು 2014ರ ನಂತರ" ಎಂಬ ಪದಗಳನ್ನು ಬಳಸಿದ್ದಾರೆ ಎಂಬ ಆಕ್ಷೇಪಣೆ ಉಲ್ಲೇಖಿಸಿರುವ ನ್ಯಾಯಾಲಯ ರಾಜಕೀಯ ಪಕ್ಷಗಳು ಟೀಕೆಗೆ ಮುಕ್ತವಾಗಿವೆ ಎಂದಿತು. “ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅಭಿಪ್ರಾಯ ಭೇದ ಅಗತ್ಯ. ಆದ್ದರಿಂದ ಯಾವುದೇ ರಾಜಕೀಯ ಪಕ್ಷಗಳ ಟೀಕೆಗಾಗಿ ಐಪಿಸಿ ಸೆಕ್ಷನ್ 153 ಎ ಮತ್ತು 295 ಎ ಅನ್ವಯ ಸೂಕ್ತವಲ್ಲ” ಎಂದು ಅದು ವಿವರಿಸಿತು.

ಈ ಪ್ರಕರಣದಲ್ಲಿ ಜಾಮೀನು ದೊರೆತಿದ್ದರೂ ಕೂಡ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಜುಬೈರ್‌ ಇನ್ನೂ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಆರೂ ಪ್ರಕರಣಗಳ ರದ್ದತಿ ಕೋರಿ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
State_v_Mohammed_Zubair
Preview
Kannada Bar & Bench
kannada.barandbench.com