ಹಿಂದೂ ಹೇಳಿಕೆ ವಿವಾದ: ಸಚಿವ ಜಾರಕಿಹೊಳಿ ವಿರುದ್ಧ ಪ್ರಕರಣ ಪರಿಗಣಿಸಲು ಮ್ಯಾಜಿಸ್ಟ್ರೇಟ್‌ಗೆ ವಿಶೇಷ ನ್ಯಾಯಾಲಯದ ಆದೇಶ

ಐಪಿಸಿ ಸೆಕ್ಷನ್‌ಗಳಾದ 153 (ಗಲಭೆಗೆ ಪ್ರಚೋದನೆ) ಮತ್ತು 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪ್ರಕರಣ ಸಂಜ್ಞೇ ತೆಗೆದುಕೊಂಡು ಕಾನೂನಿನ ಅನ್ವಯ ಮುನ್ನಡೆಯಬೇಕು ಎಂದು ಆದೇಶಿಸಿದೆ.
MLA Satish Jarakiholi
MLA Satish Jarakiholi

“ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್‌ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ” ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವಂತೆ ಸಲ್ಲಿಕೆಯಾಗಿದ್ದ ಖಾಸಗಿ ದೂರನ್ನು ವಜಾ ಮಾಡಿದ್ದ ಮ್ಯಾಜಿಸ್ಟ್ರೇಟ್‌ಗೆ ಸಂಜ್ಞೇಯ ಪರಿಗಣಿಸಿ ಕಾನೂನು ರೀತ್ಯಾ ಮುಂದುವರೆಯುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಈಚೆಗೆ ಆದೇಶಿಸಿದೆ.

ಬೆಂಗಳೂರಿನ ವಕೀಲ ದಿಲೀಪ್‌ ಕುಮಾರ್‌ ಅವರು ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಜಾ ಮಾಡಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಪುರಸ್ಕರಿಸಿದ್ದಾರೆ.

Santhosh Gajanan Bhat Judge, MP/MLA Special Court
Santhosh Gajanan Bhat Judge, MP/MLA Special Court

“ಸಚಿವ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಲು ನಿರಾಕರಿಸಿ 2023ರ ಮಾರ್ಚ್‌ 27ರಂದು ಆದೇಶಿಸಿದ್ದ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಲಾಗಿದೆ. ಐಪಿಸಿ ಸೆಕ್ಷನ್‌ಗಳಾದ 153 (ಗಲಭೆಗೆ ಪ್ರಚೋದನೆ) ಮತ್ತು 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸಂಜ್ಞೇಯ ತೆಗೆದುಕೊಂಡು ಕಾನೂನಿನ ಅನ್ವಯ ಮುನ್ನಡೆಯಬೇಕು. ಈ ಆದೇಶದಲ್ಲಿ ನ್ಯಾಯಾಲಯವು ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಹಾಲಿ ಪ್ರಕರಣದಲ್ಲಿ ಅರ್ಜಿದಾರರು ಸುದ್ದಿಯ ತುಣುಕು ಸಲ್ಲಿಸಿದ್ದು, ಅದರಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ ಎಂದು ವಿವರಿಸಲಾಗಿದೆ. ಇದು ಪ್ರತಿವಾದಿಯ ವಿರುದ್ಧ ಈ ಹಂತದಲ್ಲಿ ಐಪಿಸಿ ಸೆಕ್ಷನ್‌ 153ರ ಅಡಿ ಸಂಜ್ಞೇ ಪರಿಗಣಿಸಲು ಸಾಕಾಗಲಿದೆ. ಪ್ರತಿವಾದಿಯ ಹೇಳಿಕೆಯು ಅವಹೇಳನ ಮಾಡುವಂಥದ್ದೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಲಿದೆ. ಪ್ರಕರಣವು ಪ್ರಾಥಮಿಕ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಂಥದ್ದಲ್ಲ. ಇದಲ್ಲದೇ, ವಿಚಾರಣಾಧೀನ ನ್ಯಾಯಾಲಯವು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳು ನಿರ್ದಿಷ್ಟವಾಗಿ ಗುರುತಿಸಬಹುದಾದ ವ್ಯಕ್ತಿಗಳಲ್ಲ ಎಂಬ ತೀರ್ಮಾನಕ್ಕೆ ಬರುವಾಗ ಪ್ರಮಾದ ಎಸಗಿದೆ. ವಿಚಾರಣಾಧೀನ ನ್ಯಾಯಾಲಯವು ಹೊರಡಿಸಿರುವ ಆಕ್ಷೇಪಾರ್ಹ ಆದೇಶದಲ್ಲಿ ಹಸ್ತಕ್ಷೇಪ ಅಗತ್ಯವಿದೆ” ಎಂದು ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಆದೇಶದಲ್ಲಿ ವಿವರಿಸಿದ್ದಾರೆ.

Also Read
ಹಿಂದೂ ಹೇಳಿಕೆ ವಿವಾದ: ಶಾಸಕ ಸತೀಶ್‌ ಜಾರಕಿಹೊಳಿ ವಿರುದ್ಧ ಬೆಂಗಳೂರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಏನು ಹೇಳಿತ್ತು?

ದೂರುದಾರರು ರಾಜ್ಯದ ಕೆಲವು ಕಡೆ ದೊಂಬಿ ನಡೆದಿದೆ ಎಂದು ಆರೋಪಿಸಿದ್ದಾರೆ. ಆದರೆ, ದಾಖಲೆಯಲ್ಲಿ ಯಾವುದೇ ವಿಚಾರ ಸಲ್ಲಿಸಿಲ್ಲ. 2022ರ ನವೆಂಬರ್‌ 8ರಂದು ಸತೀಶ್‌ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಯ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ಸುದ್ದಿ ತುಣುಕು ಸಲ್ಲಿಸಿದ್ದಾರೆ. ಆದರೆ, ಇದಕ್ಕೆ ಐಪಿಸಿ ಸೆಕ್ಷನ್‌ 153 ಅನ್ವಯಿಸುವುದಿಲ್ಲ. ಸಂಜ್ಞೇ ಪರಿಗಣಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಹೀಗಾಗಿ, ದೂರು ಅನೂರ್ಜಿತವಾಗಿದೆ ಎಂದು 2023ರ ಮಾರ್ಚ್‌ 27ರಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೇಳಿತ್ತು.

Attachment
PDF
K Dilip Kumar Vs Satish Jarkiholi.pdf
Preview
Kannada Bar & Bench
kannada.barandbench.com