“ಹಿಂದೂ ಎನ್ನುವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ” ಎಂದು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಬೆಂಗಳೂರಿನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬುಧವಾರ ಖಾಸಗಿ ದೂರು ದಾಖಲಾಗಿದೆ.
ವಕೀಲ ದಿಲೀಪ್ ಕುಮಾರ್ ಅವರು ದಾಖಲಿಸಿದ್ದ ಖಾಸಗಿ ಅರ್ಜಿಯನ್ನು ವಿಚಾರಣೆಗೆ ದಾಖಲಿಸಿಕೊಳ್ಳಲು ಬೆಂಗಳೂರಿನ ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎನ್ ಶಿವಕುಮಾರ್ ಅವರು ಆದೇಶಿಸಿದ್ದು, ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದ್ದಾರೆ.
“ಶಾಸಕ ಸತೀಶ್ ಜಾರಕಿಹೊಳಿ ಅವರು ದೂರುದಾರರು ಮತ್ತು ಹಿಂದೂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಹಾನಿ, ಅವಮಾನ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಸಾರ್ವಜನಿಕವಾಗಿ ಹಿಂದೂ ಪದದ ಕುರಿತು ಹೇಳಿಕೆ ನೀಡಿದ್ದು, ಅದನ್ನು ಆನಂತರ ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 500ರ (ಬೇರೊಬ್ಬರಿಗೆ ಅವಮಾನ ಮಾಡುವುದು) ಅಡಿ ಅಪರಾಧ ಎಸಗಿದ್ದಾರೆ. ಅವರ ಹೇಳಿಕೆಯ ನಂತರ ರಾಜ್ಯದ ವಿವಿಧೆಡೆ ಜನರು ಧರಣಿ ನಡೆಸುತ್ತಿದ್ದು, ದೊಂಬಿಗೆ ಇಳಿದಿದ್ದಾರೆ. ಆರೋಪಿ ಜಾರಕಿಹೊಳಿ ಅವರು ದೊಂಬಿ ನಡೆಸಲು ಪ್ರಚೋದನೆ ನೀಡುವ ಮೂಲಕ ಐಪಿಸಿ ಸೆಕ್ಷನ್ 153ರ (ದೊಂಬಿಗೆ ಪ್ರಚೋದನೆ) ಅಡಿ ಅಪರಾಧ ಎಸಗಿದ್ದಾರೆ" ಎಂದು ಆರೋಪಿಸಿದ್ದಾರೆ.
ಐಪಿಸಿ ಸೆಕ್ಷನ್ 500ರ ಅಡಿ ಪ್ರಕರಣ ದಾಖಲಿಸಿ, ಪೊಲೀಸರು ವಿಚಾರಣೆ ನಡೆಸಲಾಗದು. ಪ್ರಕರಣವನ್ನು ಸಂಜ್ಞೇಯಕ್ಕೆ ತೆಗೆದುಕೊಳ್ಳುವುದು ಈ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಲು ಕೋರಲಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದಾರೆ.